×
Ad

ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಒಟ್ಟಾಗಿ ಶ್ರಮಿಸಿ: ರಾಹುಲ್ ಗಾಂಧಿ

Update: 2019-03-31 22:02 IST

ಬೆಂಗಳೂರು, ಮಾ.31: ಕಾಂಗ್ರೆಸ್ ಮತ್ತು ಜೆಡಿಎಸ್‌ ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಜೆಡಿಎಸ್‌ನ ಅಭ್ಯರ್ಥಿಗಳಿರುವಲ್ಲಿ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನ ಅಭ್ಯರ್ಥಿಗಳಿರುವಲ್ಲಿ ಜೆಡಿಎಸ್ ನ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರು ಒಟ್ಟಾಗಿ ಗೆಲುವಿಗೆ ಶ್ರಮಿಸಿ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕರೆ ನೀಡಿದ್ದಾರೆ.

ರವಿವಾರ ತುಮಕೂರು ರಸ್ತೆಯ ಬೆಂಗಳೂರು ಅಂತರ್ ರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಕರ್ನಾಟಕ ಪ್ರದೇಶ ಜಾತ್ಯಾತೀತ ಜನತಾದಳದ ವತಿಯಿಂದ ಆಯೋಜಿಸಿದ್ದ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಪರ್ವದ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಮೋದಿ ಸರಕಾರವನ್ನು ಸೋಲಿಸುವುದು ಎರಡೂ ಪಕ್ಷಗಳ ಗುರಿಯಾಗಿದೆ. ಆದುದರಿಂದಾಗಿ ಎರಡೂ ಪಕ್ಷಗಳ ನಾಯಕರು, ಕಾರ್ಯಕರ್ತರು ಒಟ್ಟಿಗೆ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.

ಕೇಂದ್ರದಲ್ಲಿ ಈ ಬಾರಿ ನಾವು ಬಹುಮತದಿಂದ ಅಧಿಕಾರಕ್ಕೆ ಬಂದರೆ ಯುವಜನರು ಯಾವುದೇ ಪರವಾನಿಗೆ ಇಲ್ಲದೇ ಮೂರು ವರ್ಷ ಉದ್ಯಮ ಸ್ಥಾಪಿಸಲು ಅನುಮತಿ ನೀಡಲಾಗುವುದು. 

ಪ್ರಸ್ತುತ ಉದ್ಯಮ ಸ್ಥಾಪನೆಗೆ ಹಲವು ಇಲಾಖೆ ಅಲೆಯಬೇಕು, ಲಂಚ ನೀಡಬೇಕು. ನಮ್ಮ ಸರಕಾರ ಇದಕ್ಕೆ ಮೂಗುದಾರ ಹಾಕಲಿದ್ದು, ನೇರವಾಗಿ ಯುವಜನರ ನೆರವಿಗೆ ಬರಲಿದೆ ಎಂದು ನುಡಿದರು.

ಯುವ ಉದ್ಯಮಿಗಳು ಭಾರತದಲ್ಲಿ ಉದ್ಯಮ ಸ್ಥಾಪಿಸಲು ಸಾಲ ನೀಡಲಾಗುವುದು. ಎಲ್ಲ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ನೇರವಾಗಿ ಉದ್ದಿಮೆದಾರರಿಗೆ ಯಾವುದೇ ಮಧ್ಯವರ್ತಿ ಇಲ್ಲದೇ ಸಾಲ ಕಲ್ಪಿಸುವ ಕೆಲಸ ಮಾಡುತ್ತೇವೆ ಎಂದ ಅವರು, ನರೇಂದ್ರ ಮೋದಿ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ನಾವು ದೇಶವನ್ನು ಜೋಡಿಸುವ ಕೆಲಸ ಮಾಡುತ್ತೇವೆ ಎಂದರು.

ಭ್ರಷ್ಟಾಚಾರ ರಹಿತರಿಗೆ ಕೋಟಿ ಕೋಟಿ ಎಲ್ಲಿಂದ ಬಂದಿತು?: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರ ನಾಯಕರಿಗೆ 1800 ಕೋಟಿ ರೂ.ಗಳು ಕೊಟ್ಟಿದ್ದರು.  ಅದು ಎಲ್ಲಿಂದ ಬಂತು. ಕೇಂದ್ರ ಸಚಿವ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಅವರಿಗೆ ನೀಡಿದ್ದು ಎಲ್ಲಿಂದ ಬಂದ ಹಣ ಎಂದು ಪ್ರಶ್ನಿಸಿದ ಅವರು, ಅದೆಲ್ಲಾ ಕರ್ನಾಟಕದ ಸಾಮಾನ್ಯ ಜನರ ಹಣ ಅದು ಎಂದು ಹೇಳಿದರು.

ಶ್ರೀಮಂತರ ಪರ ಸರಕಾರ: ಕಳೆದ ಐದು ವರ್ಷದ ಬಿಜೆಪಿ ಸರರ್ಕಾಲರ ರೈತರು, ಬಡವರ ಪರ ಯೋಜನೆಗಳನ್ನು ಜಾರಿ ಮಾಡಲಿಲ್ಲ. ದೇಶದಲ್ಲಿ ಅಲಅತ್ಯಂತ ಶ್ರೀಮಂತರಿಗೆ ಅನುಕೂಲಕರವಾದ, ಅವರ ಪರವಾದ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ರಫೆಲ್ ಒಪ್ಪಂದವನ್ನು ಎಚ್ ಎ ಎಲ್ ನಿಂದ ಕಸಿದು ಮೋದಿ ಗೆಳೆಯ ಅನಿಲ್ ಅಂಬಾನಿಗೆ ನೀಡಿದರು. 30 ಸಾವಿರ ಕೋಟಿ ಅಂಬಾನಿಗೆ ಲಾಭವಾಗಿ ಮಾಡಿದರು ಎಂದು ಆಪಾದಿಸಿದರು.

ಸಿಬಿಐ ನಿರ್ದೇಶಕರನ್ನು ರಾತ್ರೋರಾತ್ರಿ ತೆಗೆದು ಹಾಕಲಾಯಿತು. ಸಾರ್ವಜನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡರು. ಮೂರುವರೆ ಲಕ್ಷ ಕೋಟಿ ರೂ.ಗಳಷ್ಟು ಉದ್ಯಮಿಗಳ ಸಾಲ ಮನ್ನಾ ಮಾಡಿದರು. ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದರೆ ಹಣ ಇಲ್ಲ ಎನ್ನುತ್ತಾರೆ ಎಂದರು.

ಕರ್ನಾಟಕದಲ್ಲಿ ಸಾಲ ಮನ್ನಾ ಮಾಡಲಾಯಿತು. ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್ ಗಳಲ್ಲಿ ಕಾಂಗ್ರೆಸ್ ಸರಕಾರ ಸಾಲ ಮನ್ನಾ ಮಾಡಲಾಗುತ್ತಿದೆ. ಆದರೆ, ಬಿಜೆಪಿಗೆ ಬಡವರು, ರೈತರ ಸಾಲ ಮನ್ನಾ ಮಾಡಲು ಹಣ ಇಲ್ಲ. ಮಲ್ಯ, ಅಂಬಾನಿಗೆ ಕೊಡಲು ಹಣ ಇದೆ. ಬಡವರ ಆರೋಗ್ಯ ಸಮಸ್ಯೆ ನಿವಾರಣೆಗೆ ಹಣ ಇಲ್ಲ. ಶ್ರೀಮಂತರ ಸಾಲ ಮನ್ನಾ ಮಾಡಲು ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

ಬಡತನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್: ನಮ್ಮ ಸರಕಾರ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಬಡವರು, ರೈತರಿಗೆ ಹಣ ಕೊಡುತ್ತೇವೆ. ನಿಮಗೆ ಏನು ತಿಳಿಯುತ್ತದೆಯೋ ಅದನ್ನು ಮಾಡಿ, ನಮಗೆ ಏನು ಅನಿಸುತ್ತದೆ ಅದನ್ನು ಮಾಡುತ್ತೇವೆ ಎಂದು ಪ್ರಧಾನಿಗೆ ಸವಾಲು ಹಾಕಿದ ರಾಹುಲ್, ಮೋದಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಕೊಡುವುದಾಗಿ ಹೇಳಿದ್ದರು. ಅದನ್ನು ಹಾಕಲು ಸಾಧ್ಯವಿಲ್ಲ. ಆದರೆ, ಭಾರತದ ಶೇ.20 ರಷ್ಟಿರುವ ಜನರಿಗೆ 72 ಸಾವಿರ ಹಾಕಲು ಸಾಧ್ಯವಿದೆ. 

ನಾವು ಐದು ವರ್ಷದಲ್ಲಿ 3.5 ಲಕ್ಷ ರೂ. ಪ್ರತಿ ಬಡವರ ಖಾತೆಗೆ ಹಾಕುತ್ತೇವೆ. ಇದು ಬಡತನದ ವಿರುದ್ಧ ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್ ಎಂದರು.

ಐದು ವರ್ಷದಲ್ಲಿ ಯಾವ ಕುಟುಂಬ ಕನಿಷ್ಠ 12 ಸಾವಿರ ರೂಪಾಯಿಗಿಂತ ಕಡಿಮೆ ಆದಾಯ ಇರದಂತೆ ನೋಡಿಕೊಳ್ಳುತ್ತೇವೆ.

ನರೇಂದ್ರ ಮೋದಿ ನೋಟು ಅಮಾನ್ಯೀಕರಣ ಮಾಡಿ ಜನರ ಜೇಬಿಗೆ ಕನ್ನ ಹಾಕಿದರು. ಎಲ್ಲರನ್ನು ಬ್ಯಾಂಕ್ ಮುಂದೆ ನಿಲ್ಲುವಂತೆ ಮಾಡಿದರು. ಗಬ್ಬರ್ ಸಿಂಗ್ ಟ್ಯಾಕ್ಸ್ ಹಾಕಿದರು. ಪ್ರತಿ ದಿನ ಅಧಿಕಾರಿಗಳು ಜನರ ಜೀವ ಹಿಂಡುವ ಐದು ತರದ ತೆರಿಗೆ ಹೇರಿದರು. 2019 ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಜಿಎಸ್ ಟಿ ಬದಲಾಯಿಸುತ್ತೇವೆ. ಅತ್ಯಂತ ಸರಳ ತೆರಿಗೆ ಜಾರಿ ಮಾಡುತ್ತೇವೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News