ಚುನಾವಣಾಧಿಕಾರಿ ನೆರವಿಗೆ ಧಾವಿಸಿದ ಜೆಡಿಎಸ್

Update: 2019-03-31 16:57 GMT

ಮಂಡ್ಯ, ಮಾ.31: ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುಶ್ರೀ ನೆರವಿಗೆ ಜೆಡಿಎಸ್ ಮುಂದಾಗಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಚುನಾವಣಾ ತಕರಾರುಗಳನ್ನು ಸಾರಾಸಗಟಾಗಿ ಖಂಡಿಸಿದೆ. 

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಸುಮಲತಾ ಅವರು ಜಿಲ್ಲಾಧಿಕಾರಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ವರ್ಗಾವಣೆ ಮಾಡಲು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದರು.

ದಕ್ಷ ಅಧಿಕಾರಿ ಎಂದು ಹೆಸರು ಮಾಡಿರುವ ಜಿಲ್ಲಾಧಿಕಾರಿ ಉತ್ತಮ ಅಧಿಕಾರಿ ಎಂದು ಚುನಾವಣಾ ಆಯೋಗದಿಂದ ಪ್ರಶಸ್ತಿ ಪಡೆದಿದ್ದಾರೆ. ಆದರೆ, ಸುಮಲತಾ ಅವರು ಸೋಲುವ ಭಯದಿಂದ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಕೇಂದ್ರ ಬಿಜೆಪಿಯ ನಾಯಕರೊಂದಿಗೆ ಸೇರಿ ಸಂಚು ರೂಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.

ಸುಮಲತಾ ಅವರ ನಾಮಪತ್ರ ಸಲ್ಲಿಕೆ ದಿನ ಹಾಗೂ ಇಂದು ವಿದ್ಯುತ್, ಕೇಬಲ್ ಕಡಿತಗೊಳಿಸಿಲ್ಲ. ವಿದ್ಯುತ್ ಕಡಿತಗೊಳಿಸಲು ನಾವ್ಯಾರು? ನಿಖಿಲ್ ನಾಮಪತ್ರ ಸಿಂಧುಗೊಳಿಸಿದ ವಿವಾದ ಮುಗಿದ ಅಧ್ಯಾಯ. ಸೋಲುವ ಭೀತಿಯಿಂದ ಇಲ್ಲದ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.

ನಾಮಪತ್ರ ಪರಿಶೀಲನೆ ವೇಳೆಯ ವೀಡಿಯೋ ನಕಲು ಕೇಳಿದ ಸುಮಲತಾ ಪ್ರತಿನಿಧಿಗೆ ಚುನಾವಣಾಧಿಕಾರಿ ಮಂಜುಶ್ರೀ ವೀಡಿಯೋ ಕ್ಯಾಮೆರಾದ ಎಕ್ವಿಪ್‍ಮೆಂಟ್‍ಗಳನ್ನು ಮದುವೆ ಸಮಾರಂಭಕ್ಕೆ ಕಳುಹಿಸಲಾಗಿದೆ ಎಂದು ಹೇಳಿರುವುದು ತಪ್ಪು ಎಂದು ರಮೇಶ್ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಬೇಲೂರು ಶಶಿಧರ್, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News