ದುಂದು ವೆಚ್ಚ ಮಾಡದೆ ಸರಳತೆ ಪಾಲಿಸಿ: ಕೆ.ಸಿ.ಕಾರ್ಯಪ್ಪ

Update: 2019-03-31 18:12 GMT

ಮಡಿಕೇರಿ, ಮಾ.31: ಜನ್ಮ ದಿನಾಚರಣೆಯ ಹೆಸರಿನಲ್ಲಿ ದುಂದು ವೆಚ್ಚ ಮಾಡದೆ ಅರ್ಹರಿಗೆ ಸಹಾಯ ಮಾಡುವ ಮೂಲಕ ಸರಳತೆಯನ್ನು ಪಾಲಿಸಬೇಕೆಂದು ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪಕರೆ ನೀಡಿದ್ದಾರೆ.

ನಗರದ ಸನ್ನಿಸೈಡ್‌ನಲ್ಲಿ ಕೊಡಗು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ, ಫೀ.ಮಾ.ಕಾರ್ಯಪ್ಪಮತ್ತು ಜ.ತಿಮ್ಮಯ್ಯ ಫೋರಂ ಸಹಯೋಗದಲ್ಲಿ ನಡೆದ ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ಡಿಎಸ್‌ಒ ಅವರ 113ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಜನರಲ್ ತಿಮ್ಮಯ್ಯ ಅವರ ಕುರಿತು ಅವರ ಜೀವನ, ವ್ಯಕ್ತಿತ್ವ, ಮಿಲಿಟರಿ ಸಾಧನೆಗಳು ಮತ್ತು ನಾಯಕತ್ವದ ಗುಣಗಳ ಕುರಿತು ರಾಷ್ಟ್ರೀಯ ಮಟ್ಟದಲ್ಲಿ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಅವರ ಕೆಲವೊಂದು ಸಾಧನೆಗಳು ಹಾಗೂ ಯುದ್ಧಗಳನ್ನು ಗೆದ್ದ ಬಗ್ಗೆ ಉಲ್ಲೇಖಗಳೊಂದಿಗೆ ವಿವರಿಸಿದ ಏರ್ ಮಾರ್ಷಲ್ ಕಾರ್ಯಪ್ಪ, ತಮಗೆ ಹಾಗೂ ತಮ್ಮಂತಹ ನೂರಾರು ಮಂದಿಗೆ ಜನರಲ್ ತಿಮ್ಮಯ್ಯ ಜೀವನ ಪೂರ್ತಿಯಾಗಿದ್ದಾರೆ. ಸಾಧಕರ ಜೀವನ ಮತ್ತು ಸಾಧನೆಗಳು ಪಠ್ಯ ಪುಸ್ತಕಗಳಲ್ಲಿ ಅಳವಡಿಕೆಯಾಗುವ ಮೂಲಕ ಶಾಲಾ ಕಾಲೇಜುಗಳಲ್ಲಿ ವ್ಯಕ್ತಿತ್ವ ನಿರ್ಮಾಣದೊಂದಿಗೆ ಸಾಧಕರ ಕುರಿತು ಮಾಹಿತಿ ಮತ್ತು ಅರಿವನ್ನು ಮೂಡಿಸುವಂತಹ ಪ್ರಯತ್ನಗಳು ಇನ್ನಾದರು ಆರಂಭವಾಗಬೇಕೆಂದರು.

ಜನರಲ್ ತಿಮ್ಮಯ್ಯ ಅವರ ಕುಂಮಾವೋ ರೆಜಿಮೆಂಟಿನವರಾದ ನಿವೃತ್ತ ಮೇಜರ್ ಜನರಲ್ ಕುಪ್ಪಂಡ ಪಿ.ನಂಜಪ್ಪಎವಿಎಸ್‌ಎಂ, ವೀರಚಕ್ರ ಮಾತನಾಡಿ, ತಾವು ಜನರಲ್ ತಿಮ್ಮಯ್ಯ ಅವರ ವ್ಯಕ್ತಿತ್ವ ಮತ್ತು ಸಾಹಸಗಳಿಂದ ಪ್ರೇರಣೆ ಪಡೆದು ಅವರ, ರೆಜಿಮೆಂಟಿಗೆ ಸೇರಿದ್ದನ್ನು ಹೇಳಿದರಲ್ಲದೆ, ತಿಮ್ಮಯ್ಯನವರು ಎಂತಹ ಮಿಲಿಟರಿ ತಂತ್ರಜ್ಞ ಮತ್ತು ಯುದ್ಧ ವಿಶಾರದರಾಗಿದ್ದರು ಎಂಬುದನ್ನು 2ನೇ ಮಹಾಯುದ್ಧ, ಬರ್ಮಾ ಯುದ್ಧ ಮತ್ತು 62ರ ಚೈನಾ ಯುದ್ಧಗಳನ್ನು ಉಲ್ಲೇಖಿಸಿದ ಅವರು, ಇಂದಿಗೂ ರಾಣಿಕೇತ್‌ನಲ್ಲಿರುವ ಕುಂಮಾವೋ ರೆಜಿಮೆಂಟಿನ ತಿಮ್ಮಯ್ಯ ಕಾನರ್ರ್ ಸಾಕ್ಷಿಯಾಗಿದ್ದು, ಅಲ್ಲಿರುವ ಎಲ್ಲಾ ವಸ್ತುಗಳ ಪ್ರತಿಕೃತಿಗಳನ್ನು ಮಡಿಕೇರಿಯಲ್ಲಿನ ಸನ್ನಿಸೈಡ್‌ನಲ್ಲಿ ಪ್ರತಿಷ್ಟಾಪಿಸಲಾಗುವುದೆಂದು ಹೇಳಿದರು.

ಮೊದಲ ಹಂತದ ಮ್ಯೂಸಿಯಂ ಕಾಮಗಾರಿ ಪೂರ್ಣಗೊಳ್ಳಲು 2 ಕೋಟಿ ರೂ.ಗಳಿಗೂ ಮಿಕ್ಕಿದ ಹಣ ಬೇಕಾಗಿದೆಯೆಂದು ಕೇಳ ಪಟ್ಟಿದ್ದು, ಇದನ್ನು ಒದಗಿಸುವಲ್ಲಿ ಜಿಲ್ಲಾಡಳಿತ ಶ್ರಮ ವಹಿಸಬೇಕೆಂದು ಅವರು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೋರಂನ ಅಧ್ಯಕ್ಷರಾದ ಕರ್ನಲ್ ಕೆ.ಸಿ.ಸುಬ್ಬಯ್ಯ ವಿಎಸ್‌ಎಂ ಅವರು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಕ್ಕೋಡ್ಲುವಿನ ವ್ಯಾಲಿ ಡ್ಯೂ ತಂಡದಿಂದ ಕತ್ತಿಯಾಟ್ ಮತ್ತು ಉಮ್ಮತ್ತಾಟ್ ಕಲಾ ಪ್ರದರ್ಶನ ಜರುಗಿತು.

ವೇದಿಕೆಯಲ್ಲಿ ಜಿಪಂ ಸಿಇಒ ಕೆ. ಲಕ್ಷ್ಮೀಪ್ರಿಯ, ಸೈನಿಕ ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಎನ್‌ಸಿಸಿ ಮುಖ್ಯಸ್ಥ ಮೇಜರ್ ಡಾ.ರಾಘವ್, ಜನರೇಗೌಡ, ಬಿ.ಎ.ನಂಜಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೆ.ಟಿ.ದರ್ಶನ್, ಗೀತಾ ಎನ್.ಶೆಟ್ಟಿ, ಪಿ.ಕೆ.ಪೊನ್ನಪ್ಪ, ಎನ್.ಎಂ. ರಮೇಶ್, ಸಚಿನ್ ಸೇರಿದಂತೆ ಇತರ ಗಣ್ಯರು, ಮಾಜಿ ಸೈನಿಕರು ಮತ್ತು ಸೇನಾಧಿಕಾರಿಗಳು ಪಾಲ್ಗೊಂಡಿದ್ದರು.
ನಿವೃತ್ತ ಉಪನ್ಯಾಸಕ ಬಿ.ಸಿ.ಶಂಕರಯ್ಯ ನಾಡಗೀತೆಯನ್ನು ಹಾಡಿದರು. ಜಿಲ್ಲಾಧಿಕಾರಿ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಣ್ಯರು ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಜನರಲ್ ತಿಮ್ಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಿದರು. ಶಿಕ್ಷಕಿ ಚೋಕಿರ ಅನಿತಾ ಕಾರ್ಯಕ್ರಮ ನಿರೂಪಿಸಿ, ಫೋರಂನ ಕಾರ್ಯದರ್ಶಿ ಯು.ಎಂ. ಪೂವಯ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News