×
Ad

ಕೊಡಗು ಜಿಲ್ಲಾ ಪರಿಷತ್‍ ಪ್ರಥಮ ಅಧ್ಯಕ್ಷ ಜಮ್ಮಡ ಎ.ಕರುಂಬಯ್ಯ ನಿಧನ

Update: 2019-04-01 18:49 IST

ಮಡಿಕೇರಿ,ಎ.1 :ಕೊಡಗು ಜಿಲ್ಲಾ ಪರಿಷತ್‍ನ ಮಾಜಿ ಅಧ್ಯಕ್ಷ ಜಮ್ಮಡ ಎ.ಕರುಂಬಯ್ಯ (84) ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ವಯೋ ಸಾಮಾನ್ಯ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಕೈಕೇರಿ ಗ್ರಾಮದಲ್ಲಿರುವ ಸ್ವಗೃಹದಲ್ಲಿ ಸೋಮವಾರ ಬೆಳಕ್ಕೆ 8.45 ಸುಮಾರಿಗೆ ನಿಧನರಾದರು. ಅಂತ್ಯಕ್ರಿಯೆ ಸೋಮವಾರ ಸಾಯಂಕಾಲ 3 ಗಂಟೆ ಸುಮಾರಿಗೆ ಜಮ್ಮಡ ಕುಟುಂಬದ ಸ್ಮಶಾನದಲ್ಲಿ ನೆರವೇರಿತು. ಈ ಸಂದರ್ಭ ವಿವಿಧ ಪಕ್ಷದ ಮುಖಂಡರುಗಳು ಹಾಗೂ ಅಭಿಮಾನಿಗಳು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

ಶಾಸಕರುಗಳಾದ ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್, ಎಂಎಲ್ಸಿಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಲೋಕಸಭಾ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ, ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ ಹಾಗೂ ಮುಖಂಡರುಗಳು ಅಂತಿಮ ದರ್ಶನ ಪಡೆದರು.

ನೇರ ನಡೆ ನುಡಿಯ ರಾಜಕಾರಣಿ ಎಂದು ಹೆಸರು ಪಡೆದಿದ್ದ ಕರುಂಬಯ್ಯ ಅವರು, ಕೊಡಗು ಜಿಲ್ಲಾ ಪರಿಷತ್‍ನ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.  ತಾಲೂಕು ಅಭಿವೃಧ್ಧಿ ಮಂಡಳಿ ಸದಸ್ಯರಾಗಿ 5 ವರ್ಷ ಸೇವೆ ಸಲ್ಲಿಸಿದ್ದರು. 1987 ರಲ್ಲಿ ಜಿಲ್ಲಾ ಪರಿಷತ್ ಸದಸ್ಯನಾಗಿ ಅಯ್ಕೆಯಾಗಿ, 1992 ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ ಮುಖಂಡರಾಗಿ ನಂತರ ರಾಮಕೃಷ್ಣ ಹೆಗಡೆ ಅವರ ಲೋಕಶಕ್ತಿ ಪಕ್ಷದಲ್ಲಿದ್ದರು. ನಂತರ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಮತ್ತೆ ಕಾಂಗ್ರೆಸ್‍ಕ್ಕೆ ಸೇರಿಕೊಂಡಿದ್ದರು. 

ಸಂತಾಪ ಸಭೆ
ಮೃತರ ಗೌರವಾರ್ಥ ಕಾಂಗ್ರೆಸ್ ಕಚೇರಿಯಲ್ಲಿ ಸಂತಾಪ ಸಭೆ ನಡೆಯಿತು. ಕರುಂಬಯ್ಯ ಅವರು ಪಕ್ಷಕ್ಕಾಗಿ ದುಡಿದ ಅವರ ಕಾರ್ಯವನ್ನು ಹಿರಿಯರು ನೆನೆಸಿಕೊಂಡರು.

ಈ ಸಂಧರ್ಭ ನಗರ ಅಧ್ಯಕ್ಷ ಕುಲ್ಲಚಂಡ ಗಣಪತಿ, ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ, ಪ್ರಮುಖರುಗಳಾದ ಬಿ.ಎನ್. ಪ್ರಕಾಶ್, ಅಜಿತ್ ಅಯ್ಯಪ್ಪ, ವಿನಯ್, ಟಿಪ್ಪು ಬಿದ್ದಪ್ಪ, ಎ.ಜೆ. ಬಾಬು, ಅರುಣ್ ಮಾಚಯ್ಯ, ಪಲ್ವಿನ್ ಪೂಣಚ್ಚ, ಕೊಲ್ಲೀರ ಬೋಪಣ್ಣ, ಲಾಲಾ ಅಪ್ಪಣ್ಣ, ವಿಶು, ಬಾನಂಡ ಪ್ರತ್ಯು, ಮಂಜುಳ ಇತರರು ಪಾಲ್ಗೊಂಡಿದ್ದರು. ಗೋಣಿಕೊಪ್ಪ ಪಟ್ಟಣದಲ್ಲಿ 1 ಗಂಟೆಗಳ ಕಾಲ ಅಂಗಡಿ-ಮುಂಗಟ್ಟು ಮುಚ್ಚಿ ಗೌರವ ಸಲ್ಲಿಸಲಾಯಿತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News