×
Ad

ಚುನಾವಣೆ ಎದುರಿಸಲಾಗದೇ ದಬ್ಬಾಳಿಕೆ: ಸಿಎಂ ಕುಮಾರಸ್ವಾಮಿ

Update: 2019-04-01 19:40 IST

ತುಮಕೂರು,ಎ.1: ಮಂಡ್ಯ ಜಿಲ್ಲೆಯಲ್ಲಿ ಚುನಾವಣೆಯನ್ನು ಎದುರಿಸಲು ಶಕ್ತಿ ಇಲ್ಲದವರು ಕುತಂತ್ರದ ಮೂಲಕ ಅಧಿಕಾರ ಇಲ್ಲದೇ ದಬ್ಬಾಳಿಕೆ ನಡೆಸಿ ಅಧಿಕಾರಿಗಳ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಪರೋಕ್ಷವಾಗಿ ಸುಮತಲಾ ವಿರುದ್ಧ ಗುಡುಗಿದ್ದಾರೆ.

ಶಿರಾ ತಾಲೂಕು ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ದೇವಸ್ಥಾನದಲ್ಲಿ ನಡೆದ ವಿಶೇಷ ಹೋಮ ಹವನದಲ್ಲಿ ಪಾಲ್ಗೊಂಡ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಅಧಿಕಾರ ಇಲ್ಲದೆಯೇ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಆದರೆ ಕಾನೂನು ವ್ಯಾಪ್ತಿಯಲ್ಲಿ ಯಾವ ಕೆಲಸವನ್ನ ಅಧಿಕಾರಿಗಳು ಮಾಡಬೇಕು ಅದನ್ನು ಅವರು ಮಾಡುತ್ತಾರೆ ಎಂದರು.

ನನ್ನ ಆರೋಗ್ಯ ಮತ್ತು ದೇವೇಗೌಡರ ಆರೋಗ್ಯದ ದೃಷ್ಟಿಯಿಂದ ಮತ್ತು ಲೋಕಕಲ್ಯಾಣಕ್ಕಾಗಿ ಸಂಕಲ್ಪ ಮಾಡಿಕೊಂಡು ಇಂದು ಹೋಮ ಹವನದಲ್ಲಿ ಭಾಗವಹಿಸಿದ್ದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲವೆಂದು ಸಿಎಂ ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಜೆಡಿಎಸ್ ಕಾರ್ಯಕರ್ತರ ಮನೆಗಳ ಮೇಲೆ ದಂಡೆತ್ತಿ ಹೋದ ಐಟಿ ಅಧಿಕಾರಿಗಳಿಗೆ ನೋಟು ಎಣಿಸುವ ಯಂತ್ರ ಸಿಕ್ಕಿತೇ? ಈಶ್ವರಪ್ಪ ಅವರು ನೀರಾವರಿ ಸಚಿವರಾಗಿದ್ದಾಗ ಅವರ ಮನೆಯಲ್ಲಿ ನೋಟು ಎಣಿಸುವ ಯಂತ್ರಗಳನ್ನು ಇಟ್ಟುಕೊಂಡಿದ್ದರು ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದರು. 

ರಾಜ್ಯದಲ್ಲಿ ಮೈತ್ರಿ ಸರ್ಕಾರ ಗೆಲುವು ಸಾಧಿಸಲಿದೆ. ಮತದಾರರು ಕೂಡ ಮೈತ್ರಿಕೂಟದ ಅಭ್ಯರ್ಥಿಗೆ ಬೆಂಬಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು. ಹೇಮಾವತಿ ನದಿ ನೀರು ಹಂಚಿಕೆ ಕುರಿತ ಟೀಕೆಗಳಿಗೆ ಉತ್ತರಿಸಿದ ಸಿ.ಎಂ, 1962ರಲ್ಲಿ ದೇವೇಗೌಡರ ನೀರಾವರಿ ಯೋಜನೆಯ ಹೋರಾಟದ ಫಲವೇ ಹೇಮಾವತಿ ಜಲಾಶಯ. ಬಿಜೆಪಿ ನಾಯಕರು, ಮಾಜಿ ಶಾಸಕ ಸುರೇಶ್ ಗೌಡ ಅಂದು ಹುಟ್ಟಿದ್ದರೇ? ನೀರಾವರಿ ಯೋಜನೆಗಳಿಗೆ ಶಾಸಕ ಜಿ ಮಾಧುಸ್ವಾಮಿ ಅವರ ಕೊಡುಗೆ ಏನು? ನಾಲಿಗೆ ಇದೆ ಎಂದು ಕೀಳು ಅಭಿರುಚಿಯ ಮಾತುಗಳನ್ನಾಡುವುದು ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. 

ಪಟ್ಟನಾಯಕನಹಳ್ಳಿ ದೇಗುಲದಲ್ಲಿ ಹೋಮ: ಜಿಲ್ಲೆಯ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ವಿಶೇಷ ಪೂಜೆ ಹಾಗೂ ಹೋಮ ನಡೆಸಲಾಯಿತು. 

ಗೌಡರ ಕುಟುಂಬದಿಂದ ಪಟ್ಟನಾಯಕನಹಳ್ಳಿ ದೇಗುಲದಲ್ಲಿ ಹೋಮ10 ಕ್ಕೂ ಹೆಚ್ಚು ಪುರೋಹಿತರಿಂದ ಲಲಿತಾ ಸಹಸ್ರನಾಮ, ಧನ್ವಂತರಿ ಹೋಮ, ಶಿವ ಗಾಯತ್ರಿ ಹೋಮ, ಆದಿತ್ಯಾದಿ ನವಗ್ರಹ ಹೋಮ ಮಾಡಲಾಯಿತು. ವಿಜಯ ಪ್ರಾಪ್ತಿಗೆ ವಿವಿಧ ಸಂಕಷ್ಟ ನಿವಾರಣೆಗೆ, ಲೋಪದೋಷ ನಿವಾರಣೆಗೆ, ಗಂಡಾಂತರ ನಿವಾರಣೆಗೆ ಹೋಮಗಳನ್ನು ನಡೆಸಲಾಯಿತು. ಬೆಳಗ್ಗೆಯಿಂದಲೂ ಆರಂಭವಾಗಿದ್ದ ಹೋಮಕ್ಕೆ 12.30 ರ ವೇಳೆಗೆ ಶ್ರೀ ನಂಜಾವಧೂತ ಸ್ವಾಮೀಜಿ ನೇತೃತ್ವದಲ್ಲಿ ಪೂರ್ಣಾಹುತಿ ನೀಡಲಾಯಿತು. 

ಮಾಜಿ ಸಚಿವ ಟಿ.ಬಿ.ಜಯಚಂದ್ರ, ಶಾಸಕ ಸತ್ಯನಾರಾಯಣ್ ಸೇರಿದಂತೆ ಜೆಡಿಎಸ್ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News