ಜಾತ್ಯತೀತ ಪರಿಕಲ್ಪನೆಗೆ ಮೋದಿ ಮಾರಕ: ಡಿಸಿಎಂ ಪರಮೇಶ್ವರ್

Update: 2019-04-01 14:16 GMT

ತುರುವೇಕೆರೆ, ಎ.1: ಆರೆಸ್ಸೆಸ್ ಅಜೆಂಡಾಗಳನ್ನು ಮುಂದಿಟ್ಟುಕೊಂಡು ಆಡಳಿತ ನಡೆಸಿದ ಪ್ರಧಾನಿ ಮೋದಿ ಜಾತ್ಯತೀತ ಪರಿಕಲ್ಪನೆಗೆ ಮಾರಕವಾಗಿದ್ದು, ಜನರಿಗೆ ನೀಡಿದ್ದ ಯಾವುದೇ ಆಶ್ವಾಸನೆಗಳನ್ನು ಈಡೇರಿಸದೇ ಭಾವನಾತ್ಮಕವಾಗಿ ಜನರನ್ನು ಕೆರಳಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆರೋಪಿಸಿದರು.

ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರೈತನ ಪರವಾದ ಯಾವುದೇ ಶಾಶ್ವತ ಯೋಜನೆಗಳನ್ನು ಜಾರಿಗೆ ತರದ ಮೋದಿ ಸರ್ಕಾರ ರೈತ ವಿರೋದಿ ಸರ್ಕಾರ. ನೋಟು ಅಮಾನ್ಯೀಕರಣ ಜಾರಿಗೆ ತಂದು ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ದೂಡಿ, ದೇಶದ ಬಂಡವಾಳ ಶಾಹಿಗಳ, ವರ್ತಕರ ಪರವಾದ ಕಾನೂನು ರೂಪಿಸಿದ್ದೇ ಮೋದಿ ಸರ್ಕಾರದ 5 ವರ್ಷಗಳ ಸಾಧನೆ ಎಂದು ಲೇವಡಿ ಮಾಡಿದರು.

ಲೋಕಸಭಾ ಚುನಾವಣೆ ಸೈದ್ದಾಂತಿಕ ನೆಲೆಗಟ್ಟಿನ ಹೋರಾಟವೆನಿಸಿದೆ. ಹಿಂದೂ ರಾಷ್ಟ್ರ ನಿರ್ಮಾಣ ಮಾಡಬೇಕೆಂಬ ಒಂದಂಶದ ಕಾರ್ಯಕ್ರಮ ಜಾರಿಗೆ ಮುಂದಾಗಿದ್ದಾರೆ, ಜಾತ್ಯಾತೀತ ರಾಷ್ಟ್ರವೆನಿಸಿರುವ ಭಾರತದಲಿರುವ ಕೈಸ್ತ, ಮುಸ್ಲಿಂ, ಸೇರಿದಂತೆ ಎಲ್ಲಾ ಧರ್ಮದವರು ಅಭದ್ರತೆಯ ನೆರಳಿನಲ್ಲಿ ಬದುಕುವಂತಾಗಿದೆ ಎಂದು ದೂರಿದರು.

ಸಣ್ಣ ಕೈಗಾರಿಕಾ ಸಚಿವರಾದ  ಶ್ರೀನಿವಾಸ್ ಮಾತನಾಡಿ ಮೋದಿಯ ಹೆಸರನ್ನು ಹೇಳಿಕೊಂಡು ಮತಹಾಕಿ ಎಂದು ಭಾಜಪ ಅಭ್ಯರ್ಥಿ ಜಿ. ಎಸ್. ಬಸವರಾಜು ಮುಂದಾಗಿದ್ದಾರೆ. ಕಳೆದ ಮೂರು ಅವಧಿಗೆ ಸಂಸದರಾಗಿದ್ದ ಅವಧಿಯಲ್ಲಿ ಅವರ ಸಾಧನೆಯನ್ನು ಹೇಳಿ ಮತ ಕೇಳಲಿ, ಕಳೆದ 20 ವರ್ಷಗಳಲ್ಲಿ ನೇತ್ರಾವತಿ ತಿರುವು ಹೆಸರಿನಲ್ಲಿ ಸುದ್ದಿಯಾಗಿದ್ದು ಬಿಟ್ಟರೇ ಯಾವುದನ್ನೂ ತಿರುಗಿಸಿಲ್ಲ. ಕಾಂಗ್ರೆಸ್ ಪಕ್ಷವನ್ನು ಮುಗಿಸಿದ ಬಸವರಾಜು ಬಿಜೆಪಿ ಯನ್ನು ಜಿಲ್ಲೆಯಲ್ಲಿ ಅತಿ ಶೀಘ್ರ ನಿರ್ನಾಮ ಮಾಡಲಿದ್ದಾರೆ. ಇದರೊಂದಿಗೆ ಅವರ ರಾಜಕೀಯ ಜೀವನವೂ ಮುಗಿಯುವ ಕಾಲ ಸನಿಹದಲ್ಲಿದೆ ಎಂದು ಭವಿಷ್ಯ ನುಡಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಮಾತನಾಡಿ, ದೇವೇಗೌಡರು ಮೈತ್ರಿ ಅಭ್ಯರ್ಥಿಯಾಗಿರುವುದನ್ನು ಸಹಿಸದ ಬಿಜೆಪಿಯವರು ಕೈ ಮತ್ತು ತೆನೆ ಪಕ್ಷದವರು ಕಿತ್ತಾಡುತ್ತಿದ್ದಾರೆ ಎಂದು ಗಾಸಿಪ್ ಹಬ್ಬಿಸುತ್ತಿದ್ದಾರೆ. ಇದು ಊಹಾಪೋಹ. ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಹೋರಾಟ ನಡೆಸಲು ಮುಖಂಡರು, ಕಾರ್ಯಕರ್ತರು ಸಂಕಲ್ಪ ಕೈಗೊಂಡಿದ್ದಾರೆ ಎಂದರು.

ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಮಾಜಿ ಪ್ರಧಾನಿ ದೇವೇಗೌಡರಿಗೆ ಮತ ಹಾಕುವುದು ಜಿಲ್ಲೆಯ ಮತದಾರ ಸೌಭಾಗ್ಯ ಎಂದು ಭಾವಿಸಿದ್ದೇನೆ. ಬಿಜೆಪಿ ಯವರು ವಿನಾಕಾರಣ ಗೌಡರು ಹೇಮಾವತಿ ನೀರಿನ ವಿಚಾರದಲ್ಲಿ ದೂರುತ್ತಿದ್ದಾರೆ. ಗೌಡರಿಗೆ ಮತಹಾಕಲು ಬಿಜೆಪಿ ಯವರು ಸೇರಿದಂತೆ ಎಲ್ಲರೂ ಪಕ್ಷ ಬೇಧ ಮರೆತು ಸಿದ್ಧರಾಗಿದ್ದಾರೆ. ತುರುವೇಕೆರೆಯಲ್ಲಿ ಗೌಡರಿಗೆ 1 ಲಕ್ಷಕ್ಕೂ ಹೆಚ್ಚು ಮತಗಳನ್ನು ಹಾಕುವ ಮೂಲಕ ಮಾಜಿ ಪ್ರಧಾನಿಯನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಎಂಎಲ್‍ಸಿಗಳಾದ ಬೆಮೆಲ್ ಕಾಂತರಾಜು, ಚೌಡರೆಡ್ಡಿ ತೋಪಲ್ಲಿ, ಮಾಜಿ ಶಾಸಕರಾದ ಷಫಿಅಹಮದ್, ಷಡಾಕ್ಷರಿ, ಹೆಚ್.ಬಿ. ನಂಜೇಗೌಡ, ಆರ್.ನಾರಾಯಣ್, ರಮೇಶ್‍ಬಾಬು, ಚೌದ್ರಿ ಟಿ,ರಂಗಪ್ಪ, ಚಂದ್ರೇಶ್, ಗೀತಾರಾಜಣ್ಣ, ತಾಲೂಕು ಜೆ.ಡಿ.ಎಸ್ ಅಧ್ಯಕ್ಷರಾದ ಸ್ವಾಮಿ, ಬ್ಲಾಕ್ ಕಾಂಗ್ರೆಸ್‍ನ  ಪ್ರಸನ್ನಕುಮಾರ್, ನಾಗೇಶ್, ವಸಂತಕುಮಾರ್, ರಮೇಶ್‍ಗೌಡ, ಶಂಕರೇಗೌಡ, ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News