ಬಿಎಸ್‌ವೈ ಡೈರಿ ನಕಲಿ ಎಂದು ಪ್ರಮಾಣಪತ್ರ ನೀಡಲು ಐಟಿ ಇಲಾಖೆಯವರು ಯಾರು ?

Update: 2019-04-01 14:44 GMT

ಬೆಂಗಳೂರು, ಎ.1: ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ್ದ ಡೈರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಸೇರಿದ್ದು. ಈ ಸಂಬಂಧ ಯಾರಿಗೂ ಅನುಮಾನ ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪುನರುಚ್ಚರಿಸಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಡೈರಿ ಬಿಡುಗಡೆ ಮಾಡಿದ ಕೂಡಲೇ, ಆದಾಯ ತೆರಿಗೆ ಇಲಾಖೆಯು ಪ್ರಮುಖರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡುತ್ತಾರೆ ಎಂದರು. ಕಾಂಗ್ರೆಸ್ ಬಿಡುಗಡೆ ಮಾಡಿರುವ ಡೈರಿ ನಕಲಿ ಎಂದು ಪ್ರಮಾಣಪತ್ರ ನೀಡಲು ಆದಾಯ ತೆರಿಗೆ ಇಲಾಖೆಯವರು ಯಾರು? ಎರಡು ವರ್ಷದ ಹಿಂದೆಯೇ ಈ ಡೈರಿ ಸಿಕ್ಕಿತ್ತು. ಆದರೆ, ಕೇಂದ್ರ ಸರಕಾರದಿಂದ ಯಡಿಯೂರಪ್ಪಗೆ ಈ ವಿಚಾರದಲ್ಲಿ ರಕ್ಷಣೆ ಸಿಗುತ್ತಿದೆ ಎಂದು ಅವರು ದೂರಿದರು.

ರಾಜ್ಯದ ಸಮ್ಮಿಶ್ರ ಸರಕಾರವನ್ನು ಅಸ್ತಿರಗೊಳಿಸಲು ನಡೆಸಲು ಯತ್ನಿಸಿದ ಆಪರೇಷನ್ ಕಮಲದ ಆಡಿಯೋದಲ್ಲಿರುವ ಧ್ವನಿ ತಮ್ಮದೇ ಎಂಬುದನ್ನು ಯಡಿಯೂರಪ್ಪ ಒಪ್ಪಿಕೊಂಡಿದ್ದರು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ಬಿಡಲ್ಲ. ಅಪಪ್ರಚಾರ ಮಾಡುವುದು, ಸುಳ್ಳು ಹೇಳುವುದು, ವಿರೋಧ ಪಕ್ಷದ ನಾಯಕರ ತೇಜೋವಧೆ ಮಾಡವುದೇ ಬಿಜೆಪಿಯವರ ಕೆಲಸವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಸಾಲ ಮನ್ನಾ ಪ್ರಕ್ರಿಯೆಯು ರಾಜ್ಯದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಈಗಾಗಲೇ 15 ಲಕ್ಷಕ್ಕೂ ಹೆಚ್ಚು ರೈತರು ಇದರ ಅನುಕೂಲವನ್ನು ಪಡೆದಿದ್ದಾರೆ. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಘೋಷಿಸಿದ್ದ 8.50 ಸಾವಿರ ಕೋಟಿ ರೂ.ಗಳ ಸಾಲ ಮನ್ನಾದ ಮೊತ್ತವೂ ಪಾವತಿಯಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಬಿಜೆಪಿ ನಾಯಕ ಆರ್.ಅಶೋಕ್‌ಗೆ ರೈತರ ಸಾಲಮನ್ನಾಗೆ ಸಂಬಂಧಿಸಿದ ಮಾಹಿತಿ ಕೊರತೆ ಇರಬಹುದು. ಆದುದರಿಂದ, ರೈತರ ಸಾಲ ಮನ್ನಾ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ನಮ್ಮ ಕಾರ್ಯಕರ್ತರು, ಮುಖಂಡರು ಸಕ್ರಿಯವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳಬೇಕು. ಇಲ್ಲದಿದ್ದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು. ಸ್ಥಳೀಯ ಮಟ್ಟದಲ್ಲಿ ಏನೇ ಸಮಸ್ಯೆಗಳಿದ್ದರೂ ಅದನ್ನು ಬದಿಗೊತ್ತಿ, ಈ ಚುನಾವಣೆಯಲ್ಲಿ ಪರಸ್ಪರ ಬೆಂಬಲ ನೀಡಿ, ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಅವರು ತಿಳಿಸಿದರು.

ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಝಾದ್, ಪೃಥ್ವಿರಾಜ್ ಚೌಹಾಣ್, ಖುಷ್ಬೂ ಸೇರಿದಂತೆ ಇನ್ನಿತರರು ಪ್ರಮುಖರು ರಾಜ್ಯದಲ್ಲಿ ಪ್ರಚಾರಕ್ಕೆ ಆಗಮಿಸಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಚಾರ ಸಭೆಗಳನ್ನು ನಡೆಸಲಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಸೇರಿದಂತೆ ಇನ್ನಿತರ ಪ್ರಮುಖ ನಾಯಕರು ಪ್ರತ್ಯೇಕವಾಗಿ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News