ಮಡಿಕೇರಿಯಲ್ಲಿ ಒಂಟಿ ಮಹಿಳೆ ಹತ್ಯೆ: 24 ಗಂಟೆಗಳಲ್ಲೇ ಆರೋಪಿಗಳ ಬಂಧನ

Update: 2019-04-01 14:50 GMT

ಮಡಿಕೇರಿ,ಎ.1: ಮಡಿಕೇರಿಯ ಸಮೀಪ ಮೇಕೇರಿ ಗ್ರಾಮದಲ್ಲಿ ನಡೆದ ಒಂಟಿ ಮಹಿಳೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ಸಂಭವಿಸಿದ ಇಪ್ಪತ್ತನಾಲ್ಕು ಗಂಟೆಗಳಲ್ಲೇ ಆರೋಪಿತ ದಂಪತಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. 

ಮೇಕೇರಿ ಗ್ರಾಮದ ನಿವಾಸಿ ಉಷಾ(45) ಎಂಬವರ ಹತ್ಯೆಯಾಗಿದ್ದು, ದುಷ್ಕೃತ್ಯವೆಸಗಿರುವ ಈಕೆಯ ಸಂಬಂಧಿ ಅಬ್ಬೂರುಕಟ್ಟೆಯ ಲಿಖಿತಾ(30) ಮತ್ತು ಪತಿ ಎಂ.ಎಸ್.ರವಿ(37) ಬಂಧಿತ ಆರೋಪಿಗಳು.

ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ್ ಪನ್ನೇಕರ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮೈಸೂರಿನಲ್ಲಿ ವಾಸವಿರುವ ಚರಣ್ ಕುಮಾರ್ ಎಂಬುವವರು ರವಿವಾರ ದೂರೊಂದನ್ನು ನೀಡಿ, ತಮ್ಮ ಸಹೋದರಿ, ಮೇಕೇರಿಯ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದ ಉಷಾ ಅವರ ಹತ್ಯೆಯಾಗಿದೆ ಎಂದು ಪೊಲೀಸರ ಗಮನ ಸೆಳೆದಿದ್ದರು.

ಮನೆ ಕೆಲಸದಾಕೆ ನಳಿನಿ ಭಾನುವಾರ ಬೆಳಗ್ಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಅಕ್ಕನ ಚಿನ್ನದ ಚೈನ್, ಓಲೆ, ಉಂಗುರ ಮತ್ತು ಹಣವಿದ್ದ ಪರ್ಸ್ ಕಾಣೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿತ್ತು. ಈ ದೂರಿನ ಆಧಾರದಲ್ಲಿ ಡಿವೈಎಸ್‍ಪಿ ಕೆ.ಎಸ್.ಸುಂದರರಾಜ್ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮೃತೆ ಉಷಾ ಅವರ ಸಂಬಂಧಿ ಲಿಖಿತಾ ಮತ್ತು ಆಕೆಯ ಪತಿ ಎಂ.ಎಸ್.ರವಿ ಅವರನ್ನು ಸೋಮವಾರಪೇಟೆಯಲ್ಲಿ ಬಂಧಿಸಲಾಗಿದೆ.

ಬಂಧಿತ ಲಿಖಿತಾಳಿಗೆ ಮೃತೆ ಉಷಾ ಚಿಕ್ಕಮ್ಮನೇ ಆಗಿದ್ದು, ಅಬ್ಬೂರುಕಟ್ಟೆಯಲ್ಲಿ ವಾಸವಿದ್ದ ಲಿಖಿತಾ ಮತ್ತು ಆಕೆಯ ಪತಿ ರವಿ ಲಕ್ಷಾಂತರ ಸಾಲ ಮಾಡಿ, ಅದನ್ನು ಮರುಪಾವತಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ 15 ದಿನಗಳ ಹಿಂದೆಯೇ ಆರೋಪಿಗಳಿಬ್ಬರು ಮೇಕೇರಿಯಲ್ಲಿರುವ ಉಷಾ ಅವರ ಮನೆಯಿಂದ ಚಿನ್ನಾಭರಣಗಳನ್ನು ದೋಚಲು ಸಂಚು ರೂಪಿಸಿ, ಮಾ.30 ರಂದು ರಾತ್ರಿ ಬೈಕ್‍ನಲ್ಲಿ ಮೇಕೇರಿಗೆ ತೆರಳಿ ಉಷಾ ಅವರನ್ನು ಉಸಿರುಗಟ್ಟಿಸಿ ಹತ್ಯೆಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಎಸ್‍ಪಿ ಮಾಹಿತಿ ನೀಡಿದರು.

ಪ್ರಕರಣವನ್ನು ಭೇದಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿದ ಬೈಕ್, ಕಳವಾಗಿದ್ದ ಚಿನ್ನದ ಸರ ಮತ್ತು ಓಲೆಯನ್ನು ವಶ ಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ 50 ಸಾವಿರಗಳಾಗಿದೆ. 

ಕಾರ್ಯಾಚರಣೆಯಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಹೆಚ್.ಎನ್. ಸಿದ್ದಯ್ಯ, ಗ್ರಾಮಾಂತರ ಪೊಲಿಸ್ ಠಾಣಾಧಿಕಾರಿ ಚೇತನ್ ವಿ., ಪ್ರೊಬೇಷನರಿ ಠಾಣಾಧಿಕಾರಿ ಶ್ರವಣ್, ಎಎಸ್‍ಐ ಅಲೆಕ್ಘಾಂಡರ್ ಮತ್ತು ಸಿಬ್ಬಂದಿಗಳಾದ ದಿನೇಶ್, ಮಂಜುನಾಥ್, ಕಾಳಿಯಪ್ಪ, ರವಿ  ಕುಮಾರ್, ಶ್ರೀಮತಿ ಪ್ರತಿಭಾ ಪಿ.ಎಲ್., ರಾಧಾ, ಸಿ.ಡಿ.ಆರ್. ವಿಭಾಗದ ರಾಜೇಶ್, ಗಿರೀಶ್, ಚಾಲಕರಾದ ಸುನಿಲ್ ಮತ್ತು ಅರುಣ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News