ಬಿಜೆಪಿ ಸೋಲಿಸಲು ಎಲ್ಲರೂ ಒಟ್ಟಿಗೆ ಹೊಗುತ್ತೇವೆ: ಆರ್.ವಿ.ದೇಶಪಾಂಡೆ

Update: 2019-04-01 15:59 GMT

ಹುಬ್ಬಳ್ಳಿ, ಎ.1: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಎಲ್ಲರೂ ಒಟ್ಟಿಗೆ ಹೋಗುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಅದರಂತೆ, ನಾವೆಲ್ಲಾ ಒಗ್ಗಟ್ಟಾಗಿ ಮುಂದುವರೆಯುತ್ತೇವೆ ಎಂದು ಕಂದಾಯ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಸೋಮವಾರ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವು ಒಟ್ಟಿಗೆ ಸೇರಿ ನಿನ್ನೆ ತಾನೇ ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಮಾಡಿ, ಜನತೆಗೆ ಸ್ಪಷ್ಟವಾದ ಸಂದೇಶವನ್ನು ನೀಡಿದ್ದೇವೆ ಎಂದರು.

ಮೂರ್ನಾಲ್ಕು ದಿನಗಳಲ್ಲಿ ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗುತ್ತದೆ. ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಧಾರವಾಡ ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿ ಇನ್ನೂ ಘೋಷಣೆ ಮಾಡಿಲ್ಲ. ಬಹುಷಃ ಇಂದು ಸಂಜೆಯೊಳಗೆ ಅಭ್ಯರ್ಥಿ ಘೋಷಣೆಯಾಗಬಹುದು ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷ ಜಾತಿ ಆಧಾರದ ಮೇಲೆ ಟಿಕೆಟ್ ನೀಡುವುದಿಲ್ಲ. ಧಾರವಾಡ ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ಸ್ವಲ್ಪ ಗೊಂದಲಗಳಿರುವುದು ನಿಜ. ಅಭ್ಯರ್ಥಿಯಾಗಿ ವರಿಷ್ಠರು ಯಾರನ್ನೂ ಆಯ್ಕೆ ಮಾಡುತ್ತಾರೋ ಗೊತ್ತಿಲ್ಲ. ಈ ಬಾರಿ ಕಾಂಗ್ರೆಸ್ ಪಕ್ಷ ಕನಿಷ್ಠ 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ದೇಶಪಾಂಡೆ ತಿಳಿಸಿದರು.

ಮಾಜಿ ಸಚಿವ ವಿನಯ್ ಕುಲಕರ್ಣಿ ಮಾತನಾಡಿ, ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ನಾನು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಚುನಾವಣೆಯನ್ನು ನಾನು ಒಬ್ಬನೇ ಮಾಡಲು ಸಾಧ್ಯವಿಲ್ಲ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸನ್ನಿವೇಶ ಉದ್ಭವಿಸುವುದಿಲ್ಲ ಎಂದರು. ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ವಿನಯ್ ಕುಲಕರ್ಣಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News