×
Ad

ಸಿದ್ದರಾಮಯ್ಯ ಕೋಮುವಾದಿ, ಕೊಲೆಗಡುಕ: ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

Update: 2019-04-01 21:51 IST

ಕೊಪ್ಪಳ, ಎ.1: ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ವಯಂ ಘೋಷಿತ ಕುರುಬ ನಾಯಕರಾಗಿದ್ದು, ಮಹಾನ್ ಜಾತಿವಾದಿ ಎಂದು ಬಿಜೆಪಿ ಹಿರಿಯ ಮಖಂಡ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಕೊಪ್ಪಳ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ತೀವ್ರ ವಾಕ್ ಪ್ರಹಾರ ನಡೆಸಿದರು. ಸಿದ್ದರಾಮಯ್ಯ ಕೋಮುವಾದಿ, ಕೊಲೆಗಡುಕ, ಅವರ ತಲೆಯಲ್ಲಿ ಸಗಣಿ ತುಂಬಿಕೊಂಡಿದೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 125 ಕೋಟಿ ರೂ. ವೆಚ್ಚದಲ್ಲಿ ಜಾತಿಗಣತಿ ಮಾಡಲಾಗಿತ್ತು. ಆ ವರದಿ ಸರಕಾರದ ಮುಂದೆ ಇದ್ದರೂ ಸಹ ಇನ್ನೂ ಏಕೆ ಬಿಡುಗಡೆ ಮಾಡುತ್ತಿಲ್ಲ. ಕುರುಬ ಸಮುದಾಯವನ್ನು ಕೇವಲ ರಾಜಕಾರಣಕ್ಕಾಗಿ ಮಾತ್ರ ಬಳಕೆ ಮಾಡುತ್ತಿರುವ ಮಹಾಪುರುಷ ಸಿದ್ದರಾಮಯ್ಯ ಎಂದು ಈಶ್ವರಪ್ಪ ಲೇವಡಿ ಮಾಡಿದರು.

ಸಿದ್ದರಾಮಯ್ಯ ಕುರುಬರಿಗಾಗಲೀ, ಅಹಿಂದ ವರ್ಗಕ್ಕಾಗಲೀ ಬಿಜೆಪಿ ನೀಡಿದ್ದಕ್ಕಿಂತ 1 ರೂ. ಕೂಡ ಹೆಚ್ಚು ನೀಡಿಲ್ಲ. ಬಿಜೆಪಿಗಿಂತ ಹೆಚ್ಚು ಅನುದಾನ ನೀಡಿದ್ದರ ಬಗ್ಗೆ ಕಾಂಗ್ರೆಸ್ ದಾಖಲೆ ನೀಡಿದರೆ ತಾವು ರಾಜಕೀಯ ಸನ್ಯಾಸತ್ವ ಸ್ವೀಕರಿಸುವುದಾಗಿ ಸವಾಲು ಹಾಕಿದರು.

ಇನ್ನು ದೇವೇಗೌಡರ ಮೇಲೆ ವಾಗ್ದಾಳಿ ಮುಂದುವರೆಸಿದ ಈಶ್ವರಪ್ಪ, ಗೌಡರಿಗೆ 14 ಮಕ್ಕಳು, 14 ಸೊಸೆಯಂದಿರು ಇದ್ದಿದ್ದರೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೂ ದೇವೇಗೌಡರ ಕುಟುಂಬದ ಸದಸ್ಯರೇ ಅಭ್ಯರ್ಥಿಯಾಗಿರುತ್ತಿದ್ದರು ಎಂದು ಲೇವಡಿ ಮಾಡಿದರು.

ಹಾಸನ ಲೋಕಸಭಾ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್‌ಗೆ , ಮಂಡ್ಯಕ್ಕೆ ಕುಮಾರಸ್ವಾಮಿ ಪುತ್ರ ನಿಖಿಲ್ ಅವರನ್ನು ಕಣಕ್ಕಿಳಿಸಿದ್ದು ಕುಟುಂಬ ರಾಜಕಾರಣದ ಬಗ್ಗೆ ಅವರಿಗೆ ಇರುವ ಮಮಕಾರವನ್ನು ತೋರಿಸುತ್ತದೆ. ದೇಶಕ್ಕೆ ತ್ಯಾಗ ಮಾಡಿದವರಂತೆ ಗೌಡರು ಕಣ್ಣೀರು ಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದರು.

ರಾಜ್ಯದಲ್ಲಿ ಬಿಜೆಪಿ ಮುಸ್ಲಿಮರಿಗೆ ಟಿಕೆಟ್ ಕೊಟ್ಟಿಲ್ಲ. ರಾಜ್ಯದ ಮುಸ್ಲಿಮರು ನಮ್ಮ ಪಕ್ಷದ ಮೇಲೆ ವಿಶ್ವಾಸ ಇಟ್ಟುಕೊಂಡಿಲ್ಲ. ಅವರು ನಮ್ಮನ್ನು ನಂಬಿ ಓಟು ಕೊಟ್ಟಾಗ ಮಾತ್ರ ಟಿಕೆಟ್ ಕೊಡಬಹುದು.

-ಕೆ.ಎಸ್.ಈಶ್ವರಪ್ಪ, ಬಿಜೆಪಿ ಹಿರಿಯ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News