×
Ad

ಅಪ್ಪ ರೈತರ ಬಾಯಿಗೆ ಮಣ್ಣುಹಾಕಿದರೆ, ಮಗ ಬಂಡೆ ಎಳೆದ: ಆರ್‍ಟಿಐ ಕಾರ್ಯಕರ್ತ ಅಬ್ರಹಾಂ

Update: 2019-04-01 22:07 IST

ಮಂಡ್ಯ, ಎ.1: ಅಶೋಕ್ ಖೇಣಿ ಮಾಲಕತ್ವದ ನೈಸ್ ಕಂಪನಿಗೆ ಮಂಡ್ಯ ಜಿಲ್ಲೆಯ ರೈತರ ಸಾವಿರಾರು ಎಕರೆ ಜಮೀನು ಬಿಟ್ಟುಕೊಡಲು ಕಾರಣರಾದ ದೇವೇಗೌಡರ ಕುಟುಂಬದ ಸದಸ್ಯರಿಗೆ ಜಿಲ್ಲೆಯ ರೈತರು ಮತ ಹಾಕಬಾರದು ಎಂದು ಆರ್‍ಟಿಐ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಸಲಹೆ ನೀಡಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೈಸ್ ರಸ್ತೆ ಮತ್ತು ಟೌನ್‍ಶಿಪ್‍ಗೆ ಜಮೀನನ್ನು ಬಿಟ್ಟುಕೊಟ್ಟು ಅಪ್ಪ ದೇವೇಗೌಡರು ರೈತರ ಬಾಯಿಗೆ ಮಣ್ಣು ಹಾಕಿದರೆ, ಮಗ ಕುಮಾರಸ್ವಾಮಿ ಅವರ ಬದುಕಿನ ಮೇಲೆ ಬಂಡೆ ಎಳೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ನೈಸ್ ರಸ್ತೆಯ 1, 2, 4, 5 ಟೌನ್‍ಶಿಪ್‍ಗೆ ಇಲಾಖೆ ಅನುಮೋದನೆ ಪ್ರಕಾರ ರೈತರ ಸಾವಿರಾರು ಎಕರೆ ಜಮೀನು ಬಿಟ್ಟುಕೊಡಲಾಗಿತ್ತು. ಈ ನಡುವೆ ದೇವೇಗೌಡರು 7ನೇ ಟೌನ್‍ಶಿಪ್‍ಗೆ ಶ್ರೀರಂಗಪಟ್ಟಣ ಭಾಗದ 4,285 ಎಕರೆ  ಜಮೀನನ್ನು ನೀಡಿದರು. ಇದು ಬೋಗಸ್, ಇದು ಮಹಾಮೋಸ ಎಂದು ಅವರು ಆರೋಪಿಸಿದರು.

ನಂತರ ನೈಸ್ ಕಂಪನಿ ವಿರುದ್ಧ ದೇವೇಗೌಡರು ಬಂಡೆದ್ದರು. ಖೇಣಿ ಈ ರೀತಿ ಮೋಸ ಮಾಡುತ್ತಾರೆಂದು ಗೊತ್ತಿರಲಿಲ್ಲವೆಂದು ಜನರೆದುರು ಕಣ್ಣೀರು ಹಾಕುತ್ತಿದ್ದಾರೆ. ಇನ್ನೊಂದೆಡೆ ತಮ್ಮ ಮಗ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಅಡ್ವೋಕೇಟ್ ಜನರಲ್ ಮೂಲಕ ಖೇಣಿ ವಾದ ಸಮರ್ಥಿಸಿ ಅಫಿದಾವಿತ್ ಸಲ್ಲಿಸಲಾಗಿದೆ. ಇದು ರೈತರ ಪರ ಎನ್ನಬಹುದೆ ಎಂದು ಅವರು ಪ್ರಶ್ನಿಸಿದರು.

ಇಂದು ಸರಕಾರವೇ ಮೈಸೂರು-ಬೆಂಗಳೂರು ಹೆದ್ದಾರಿ ವಿಸ್ತರಣೆ ಮಾಡುತ್ತಿದ್ದು, ನೈಸ್ ರಸ್ತೆಯ ಅವಶ್ಯವಿಲ್ಲ. ನೈಸ್ ಯೋಜನೆ ರದ್ದಾಗಿದೆ. ನಿಖಿಲ್‍ಗೆ ರೈತರ ಓಟು ಬೇಕಾದರೆ, ಸ್ವಾಧೀನಪಡಿಸಿಕೊಂಡಿರುವ ಜಮೀನನ್ನು ರೈತರಿಗೆ ಬಿಟ್ಟುಕೊಡುವಂತೆ ಅಪ್ಪ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಮತ್ತು ಅಶೋಕ್ ಖೇಣಿ ಅವರನ್ನು ಕೇಳಲಿ ಎಂದು ಅವರು ತಾಕೀತು ಮಾಡಿದರು.

ತಮ್ಮ ರಾಜಕೀಯಕ್ಕೆ ಬೆಂಬಲವಾಗಿ ನಿಂತ ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು ರೈತರು ತಮ್ಮ ಸಾವಿರಾರು ಎಕರೆ ಜಮೀನು ಕಳೆದುಕೊಳ್ಳುವಂತೆ ದೇವೇಗೌಡರ ಕುಟುಂಬ ಮಾಡಿದೆ. ಇವರಿಗೆ ತಮ್ಮ ಕುಟುಂಬದ ಸದಸ್ಯರ ಪರವಾಗಿ ಮತ ಕೇಳುವ ನೈತಿಕತೆ ಇಲ್ಲ ಎಂದು ಅಬ್ರಹಾಂ ಪ್ರತಿಪಾದಿಸಿದರು.

ದೇವೇಗೌಡರ ಕುಟುಂಬ ನಾಟಕವಾಡಿಕೊಂಡೇ ಬಂದಿದ್ದು, ಮುಂದುವರಿಸಲು ಸಾಧ್ಯವಿಲ್ಲ. ಜಿಲ್ಲೆಯ ರೈತರು ನಿಖಿಲ್‍ಗೆ ಓಟು ಹಾಕಿದರೆ ತಾವೇ ಆತ್ಮಹತ್ಯೆ ಮಾಡಿಕೊಂಡಂತೆ. ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು ಎಂದು ಅವರು ಮನವಿ ಮಾಡಿದರು.

ನಿಖಿಲ್ ಸಲ್ಲಿಸಿರುವ ನಾಮಪತ್ರದಲ್ಲಿ ಕೆಲವು ಸುಳ್ಳು ಮಾಹಿತಿಗಳನ್ನು ನೀಡಲಾಗಿದೆ ಎಂದು ಆರೋಪಿಸಿದ ಅವರು, ಮಿರಿಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್‍ಗೆ 50 ಲಕ್ಷ ರೂ. ಕೊಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ಆ ಕಂಪನಿ  ಅಸ್ತಿತ್ವದಲ್ಲೇ ಇಲ್ಲ. ಇದು ಶೆಲ್ ಕಂಪನಿ ಎಂದು ಆರೋಪಿಸಿದರು.

ಫಿಜ್ಜಾ ಡೆವಲಪರ್ಸ್‍ಗೆ ಜಮೀನು ನೀಡಿ 11,52,12,120 ರೂ. ಮುಂಗಡ ತೆಗೆದುಕೊಂಡಿರುವುದಾಗಿಯೂ ನಿಖಿಲ್ ಅಫಿದಾವಿತ್‍ನಲ್ಲಿ ಹೇಳಿದ್ದು, ಕೃಷಿ ಜಮೀನನ್ನು ನೀಡುವ ಹಾಗಿಲ್ಲ. ಅಲ್ಲದೆ, ಈ ಫಿಜ್ಜಾ ಡೆವಲಪರ್ಸ್ ಬಳಿ ಅನುಮತಿ ಬದ್ದ ಇರುವ ಬಂಡವಾಳ ಕೇವಲ 10 ಕೋಟಿ ರೂ. ಹಾಗಿದ್ದರೆ ಸುಮಾರು 12 ಕೋಟಿ ರೂ. ಮುಂಗಡ ಹಣ ಹೇಗೆ ಪಡೆಯಲಾಗಿದೆ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.

ರೈತಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್ ಹಾಗೂ ಗೋಪಾಲಕೃಷ್ಣ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News