ಗೌಡ್ತಿ ಹೇಗೆ ಅನ್ನುವುದನ್ನು ಸುಮಲತಾ ಬಹಿರಂಗಪಡಿಸಲಿ: ಸಂಸದ ಶಿವರಾಮೇಗೌಡ
ಮಂಡ್ಯ, ಎ.1: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೌಡ್ತಿ, ಗೌಡ್ತಿ ಅಂದರೆ, ಯಾವ ರೀತಿ ಗೌಡ್ತಿ ಅನ್ನುವುದನ್ನು ಬಹಿರಂಗಪಡಿಸಬೇಕು ಎಂದು ಸಂಸದ ಎಲ್.ಆರ್.ಶಿವರಾಮೇಗೌಡ ಒತ್ತಾಯಿಸಿದರು.
ನಿನ್ನೆಯಷ್ಟೇ ಜೆಡಿಎಸ್ ಅಭ್ಯರ್ಥಿ ನಿಖಿಲ್ ಪರ ಚುನಾವಣಾ ಪ್ರಚಾರ ವೇಲೆ ಸುಮಲತಾ ಜಾತಿ ವಿಷಯ ಪ್ರಸ್ತಾಪಿಸಿ ಜನರ ಭಾವನೆ ಕೆದಕಲು ಪ್ರಯತ್ನಿಸಿದ್ದ ಶಿವರಾಮೇಗೌಡ, ಸೋಮವಾರ ಅದನ್ನು ವೈಭವೀಕರೀಸಿದ್ದಾರೆ. ನಾಮಮಂಗಲ ತಾಲೂಕು ದೇವಲಾಪುರದಲ್ಲಿ ಮಾತನಾಡಿದ ಅವರು, ಅಂಬರೀಷ್ ನಮ್ಮ ಗೌಡ್ರು ಓಕೆ. ಸುಮಲತಾ ನಾಯ್ಡು ಜನಾಂಗಕ್ಕೆ ಸೇರಿದವರು. ಜಾತಿ ಬಿಟ್ಟು ಬೇರೆ ಜಾತಿಯವರನ್ನು ಮದುವೆ ಆದಮೇಲೆ ಹೇಗೆ ಗೌಡ್ತಿ ಆಗ್ತಾರೆ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು ಸುತ್ತಮುತ್ತ ಈಗಾಗಲೇ ಆವರಿಸಿದ್ದಾರೆ. ಈಗ ಮಂಡ್ಯವನ್ನೂ ಆಕ್ರಮಿಸಲು ಹೊರಟಿದ್ದಾರೆಂದು ನಾಯ್ಡು ಜನಾಂಗದ ವಿರುದ್ಧ ಅವರು ಹರಿಹಾಯ್ದರು.
ಸುದೀಪ್, ಪುನೀತ್ ರಾಜ್‍ಕುಮಾರ್ ಗಿಂತ ದರ್ಶನ್ ದೊಡ್ಡ ನಟನೇನಲ್ಲ. ಅವರು ಯಾವುದೇ ಪಕ್ಷದ ಅಭ್ಯರ್ಥಿ ಪರ ಚುನಾವಣೆಗೆ ಹೋಗಲ್ಲ ಅಂತ ಹೇಳಿದ್ದಾರೆ. ಇವರು ಬಂದು ಏನ್ ಮಾಡಲು ಸಾಧ್ಯ? ದರ್ಶನ್ ಒಳ್ಳೆಯ ಸಿನಿಮಾ ತೆಗೆಯುತ್ತಾರೆ ಅಷ್ಟೇ ಎಂದು ಅವರು ಲೇವಡಿ ಮಾಡಿದರು.
ನಮ್ಮ ಸಿಎಂ ಕುಮಾರಸ್ವಾಮಿ ಏನು ತಪ್ಪು ಮಾಡದಿದ್ರೂ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ. ಆದರೂ ಕೈಕಟ್ಟಿ ಕೂರಲು ಆಗುತ್ತಾ? ಎಂದು ಶಿವರಾಮೇಗೌಡ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.