ದೇಶದ ಮೂರನೇ ಶಕ್ತಿಯಾಗಿ ಬಿಎಸ್ಪಿ ಹೊರಹೊಮ್ಮಲಿದೆ: ಎನ್.ಮಹೇಶ್

Update: 2019-04-01 16:55 GMT

ಮಂಡ್ಯ, ಎ.1: ಬಹುಜನ ಸಮಾಜ ಪಕ್ಷ ದೇಶದ ಮೂರನೇ ಶಕ್ತಿ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಶಾಸಕ ಎನ್.ಮಹೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿರುವ ಎನ್‍ಡಿಎ ಹಾಗೂ ಯುಪಿಎ ಪಕ್ಷಗಳ ಪರ್ಯಾಯವಾಗಿ ಬಿಎಸ್ಪಿ ಬೆಳೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯಾದ್ಯಂತ ಎಲ್ಲ ಕ್ಷೇತ್ರಗಳಲ್ಲೂ ಬಿಎಸ್ಪಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲಿ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಉಳಿದ ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದರು.

ದೇಶದಲ್ಲಿ ಬಿಎಸ್ಪಿ ಸುಮಾರು 60 ರಿಂದ 70 ಸ್ಥಾನಗಳನ್ನು ಗೆಲ್ಲಲಿದೆ. ರಾಜ್ಯದಲ್ಲಿ 2ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ದೇಶದ ಆಡಳಿತದ ಚುಕ್ಕಾಣಿ ಹಿಡಿಯಲು ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಅವರು ಹೇಳಿಕೊಂಡರು.

ಮಂಡ್ಯ ಲೋಕಸಭಾ ಕ್ಷೇತ್ರವೂ ದೇಶದ ಗಮನ ಸೆಳೆಯುತ್ತಿದೆ. ನಂಜುಂಡಸ್ವಾಮಿ ಅವರು ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮಂಡ್ಯ, ಚಾಮರಾಜನಗರ, ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಇತರೆ ಪಕ್ಷದ ಅಭ್ಯರ್ಥಿಗಳಿಗೆ ತೀವ್ರ ಪೈಪೋಟಿ ನಡೆಯಲಿದೆ ಎಂದರು.

ಮಂಡ್ಯ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗೆ ಮೊದಲನೇ ಕ್ರಮ ಸಂಖ್ಯೆ ಬರಬೇಕಾಗಿತ್ತು. ಆದರೆ, ಇಲ್ಲಿ ಕೆಲವೊಂದು ಲೋಪದೋಷಗಳಾಗಿವೆ. ಅದನ್ನು ಸರಿಪಡಿಸುವಂತೆ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಗಳಿಗೆ ಪತ್ರ ಬರೆಯಲಾಗಿದ್ದು, ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿ ನಂಜುಂಡಸ್ವಾಮಿ, ಎಂ.ಕೃಷ್ಣಮೂರ್ತಿ, ನಾಗೇಂದ್ರ, ಎಚ್.ಎನ್.ನರಸಿಂಹಮೂರ್ತಿ, ಹನಕೆರೆ ಅಭಿಗೌಡ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News