ವೃತ್ತಿಪರ ಪ್ರಜಾಪ್ರಭುತ್ವಕ್ಕೆ ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪನೆ: ಸಂಸ್ಥಾಪಕ ಉಪೇಂದ್ರ

Update: 2019-04-01 16:58 GMT

ಮಂಡ್ಯ, ಎ.1: ವ್ಯಾಪಾರಿ ರಾಜಕಾರಣ ತೆಗೆದು ವೃತ್ತಿಪರ ಪ್ರಜಾಪ್ರಭುತ್ವ ತರಲು ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿದ್ದು, ಜಾತಿ, ಹಣ, ತೋಳ್ಬಲಕ್ಕೆ ಮಣೆ ಹಾಕದೆ ವಿಚಾರಕ್ಕೆ ಮತ ಹಾಕಬೇಕೆಂದು ಪಕ್ಷದ ಸಂಸ್ಥಾಪಕ, ಚಲನಚಿತ್ರ ನಟ ಉಪೇಂದ್ರ ಮನವಿ ಮಾಡಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತಮ ಪ್ರಜಾಕೀಯ ಪಕ್ಷ ಸತ್ಯದ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡುತ್ತಿದೆ. ಹಣ, ತೋಳ್ಬಲವಿಲ್ಲದೆ ಜನರನ್ನು ತಲುಪುವ ಪ್ರಯತ್ನ ನಮ್ಮದಾಗಿದ್ದು, ಸುಳ್ಳು ಭರವಸೆಯ ಪ್ರಣಾಳಿಕೆ ಹೊರತಂದು ಜನರನ್ನು ದಾರಿ ತಪ್ಪಿಸುವುದಿಲ್ಲ ಎಂದರು.

ಪ್ರಣಾಳಿಕೆಯಲ್ಲಿ ಹೇಳುವ ಭರವಸೆ ಈಡೇರಿಸದಿದ್ದರೆ ಅಂತಹ ಅಭ್ಯರ್ಥಿಗಳನ್ನು ಅನರ್ಹಗೊಳಿಸುವ ವ್ಯವಸ್ಥೆ ಬರುವವರೆಗೆ ನಾವು ಪ್ರಣಾಳಿಕೆ ಮಾಡುವುದಿಲ್ಲ. ನಮ್ಮ ಪಕ್ಷದವರು ನಾಯಕರಲ್ಲ. ನಿಮ್ಮಿಂದ ಸಂಬಳ ಪಡೆದು ಕೆಲಸ ಮಾಡುವ ಕಾರ್ಮಿಕರು ಎಂದು ಅವರು ಹೇಳಿದರು.

ಸಭೆ-ಸಮಾರಂಭ, ರ್ಯಾಲಿಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಅದನ್ನು ಮಾಡಲು ಸಾಕಷ್ಟು ಹಣ ಬೇಕು. ಈ ಹಣ ತರಲು ನಾನು ಎಲ್ಲ ಪಕ್ಷಗಳಂತೆ ಭ್ರಷ್ಟಾಚಾರ ಮಾಡಲು ಸಿದ್ಧವಿಲ್ಲ. ನಾನು ಮಾಧ್ಯಮಗಳ ಮೂಲಕ ಜನರಲ್ಲಿ ನನ್ನ ಪಕ್ಷದ ಅಭ್ಯರ್ಥಿಗಳ ವಿಚಾರ ನೋಡಿ ಮತ ಹಾಕುವಂತೆ ಮನವಿ ಮಾಡುತ್ತೇನೆ ಎಂದರು.

ಶೇ.20ರಷ್ಟಿರುವ ಹಣ, ತೋಳ್ಬಲ ಹೊಂದಿದವರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ನನ್ನ ಪ್ರಕಾರ ವಿಚಾರವೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಪಕ್ಷದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ದಿವಾಕರ್ ಸಿ.ಪಿ.ಗೌಡರವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಅಭ್ಯರ್ಥಿ ದಿವಾಕರ ಸಿ.ಪಿ.ಗೌಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News