ಜನರನ್ನು ಮರುಳುಗೊಳಿಸಲು ತಿಣುಕಾಡುವ ಯೋಜನೆಗಳು

Update: 2019-04-02 09:52 GMT

ಬಿಜೆಪಿಯದ್ದಾಗಲೀ ಕಾಂಗ್ರೆಸ್‌ನದ್ದಾಗಲೀ ಭರವಸೆಗಳ ಹಿಂದೆ ಕೆಲಸ ಮಾಡುತ್ತಿರುವುದು ರಘುರಾಮ ರಾಜನ್ ಹೇಳಿದ ವಿಚಾರವೇ ಆಗಿದೆ. ಅತೃಪ್ತಿ ಅಸಮಾಧಾನಗಳಿಂದ ರೋಷಗೊಂಡ ಜನ ಸಮೂಹದಿಂದ ದಂಗೆಯಾಗುವ ಸಾಧ್ಯತೆಗಳನ್ನು ತಡೆಯುವ ಒಂದು ಹುನ್ನಾರ ಮಾತ್ರ ಆಗಿದೆ. ಒಂದು ವೇಳೆ ರಾಹುಲ್ ಗಾಂಧಿಯ ನೇತೃತ್ವದಲ್ಲಿ ಮುಂದಿನ ಸರಕಾರ ರಚನೆಯಾದರೂ ಮೂಲಭೂತವಾಗಿ ಜಾಗತಿಕ ಬಂಡವಾಳಶಾಹಿ ಪರ, ದೊಡ್ಡ ಆಸ್ತಿವಂತರ ಪರ ನೀತಿಗಳೇ ಮುಂದುವರಿಯುತ್ತವೆ ಎನ್ನುವುದಕ್ಕೆ ಬಲವಾದ ಆಧಾರಗಳು ನಮ್ಮ ಮುಂದಿವೆ.


ಭಾರತೀಯ ರಿಸರ್ವ್ ಬ್ಯಾಂಕಿನ ಈ ಹಿಂದಿನ ಗವರ್ನರ್ ರಘುರಾಮ ರಾಜನ್ ‘‘ಬಂಡವಾಳವಾದ ತೀವ್ರ ಬೆದರಿಕೆಗೆ ಒಳಗಾಗಿದೆ. ಅದು ಜನಸಮೂಹಕ್ಕೆ ಏನನ್ನೂ ನೀಡುತ್ತಿಲ್ಲ. ಪರಿಣಾಮ ಎಡ ಹಾಗೂ ಬಲ ಶಕ್ತಿಗಳ ತೀವ್ರ ದಾಳಿಗಳಿಗೆ ಒಳಗಾಗಿದೆ’’ ಎಂದು ಹೇಳಿದ್ದಾರೆ. ‘‘ಸರಕಾರಗಳು ತಮ್ಮ ಯೋಜನೆಗಳಲ್ಲಿ ಜನಸಮೂಹದಲ್ಲಿರುವ ಅಸಮಾನತೆಗೆ ಏನನ್ನೂ ನೀಡಲಾಗುತ್ತಿಲ್ಲ. ಅಂತಹ ಜನಸಮೂಹ ದಂಗೆಯೇಳುವ ಸ್ಥಿತಿ ನಿರ್ಮಾಣವಾಗಿದೆ. ಸರಕಾರಗಳನ್ನು ಕೆಲವೇ ಕಾರ್ಪೊರೇಟುಗಳೇ ನಡೆಸುವಂತೆ ಆಗುತ್ತಿದೆ. ನೀತಿಗಳನ್ನೂ ಅದಕ್ಕೆ ತಕ್ಕಂತೆ ರೂಪಿಸಲಾಗುತ್ತಿದೆ’’ ಎಂದೆಲ್ಲಾ ಅವರು ಹೇಳಿರುವುದು ಸುದ್ದಿಯಾಯಿತು. ಅವರು ಬಿಬಿಸಿ ರೇಡಿಯೋ 4ರ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಇವನ್ನೆಲ್ಲಾ ಹೇಳಿದ್ದರು. ರಘುರಾಮ ರಾಜನ್ ಈ ಹಿಂದೆ ಅಂತರ್‌ರಾಷ್ಟ್ರಿಯ ಹಣಕಾಸು ನಿಧಿ (ಐ ಎಂಎಫ್)ಯಲ್ಲಿ ಮುಖ್ಯ ಅರ್ಥ ಶಾಸ್ತ್ರಜ್ಞರಾಗಿಯೂ ಕೆಲಸ ಮಾಡಿದವರು. ಎರಡನೆಯ ಮಹಾಯುದ್ಧದ ನಂತರ ಅಸ್ತಿತ್ವಕ್ಕೆ ಬಂದ ಜಾಗತಿಕವಾಗಿ ನಿಯಂತ್ರಣ ಹೊಂದಲು ಹುಟ್ಟು ಹಾಕಿದ ಸಂಸ್ಥೆಗಳಲ್ಲಿ ಈ ಹಣಕಾಸು ಸಂಸ್ಥೆಯೂ ಒಂದು. ಇಂತಹ ಸಂಸ್ಥೆಗಳೆಲ್ಲಾ ಅಮೆರಿಕ ನೇತೃತ್ವದ ಮುಂದುವರಿದ ರಾಷ್ಟ್ರಗಳೆಂದು ಬಿಂಬಿತವಾಗಿದ್ದ ಜಗತ್ತಿನ ಬೃಹತ್ ಬಂಡವಾಳಶಾಹಿ ರಾಷ್ಟ್ರಗಳ ಸೇವೆಗಾಗಿಯೇ ಸ್ಥಾಪಿಸಲ್ಪಟ್ಟಂತಹವು. ಇಂತಹ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದ ಮುಖ್ಯ ಅರ್ಥ ಶಾಸ್ತ್ರಜ್ಞರೊಬ್ಬರು ಈ ಮಾತುಗಳನ್ನು ಹೇಳಿರುವುದು ಗಮನಾರ್ಹವಾಗಿರುವ ವಿಚಾರ.

ಅಷ್ಟೇ ಅಲ್ಲದೇ ಮೋದಿ ಸರಕಾರ ಮಾಡಿದ ನೋಟು ರದ್ದತಿ ಹಾಗೂ ಜಿಎಸ್‌ಟಿಯನ್ನು ಏಕಾಏಕಿ ಹೇರಿರುವುದರಿಂದಾಗಿ ಭಾರತದ ಅರ್ಥ ವ್ಯವಸ್ಥೆಗೆ ಗಂಭೀರ ಹಾನಿಯಾಗಿದ್ದು ಬೆಳವಣಿಗೆಯ ದರ ಕುಸಿತಕ್ಕೆ ಕಾರಣವಾಗಿದೆ ಎಂದೂ ಅವರು ಹೇಳುತ್ತಾ ಬಂದಿದ್ದಾರೆ. ಉದ್ಯೋಗಾವಕಾಶ ಸೃಷ್ಟಿಯಾಗುವುದರ ಬದಲಿಗೆ ಹಿಂದೆ ಇದ್ದ ಉದ್ಯೋಗಾವಕಾಶಗಳು ಕೂಡ ಕಣ್ಮರೆಯಾಗಿವೆ ಹಾಗಾಗಿ ಅಸಮಾನತೆಯ ಪ್ರಮಾಣ ಹೆಚ್ಚಿದೆ ಎಂದೂ ಹೇಳುತ್ತಾರೆ. ಆಳುವ ಶಕ್ತಿಗಳ ಪರವಾಗಿರುವ ಹಾಗೂ ಬಂಡವಾಳವಾದದ ಪರವಾಗಿರುವ ಅರ್ಥ ಶಾಸ್ತ್ರಜ್ಞರೊಬ್ಬರು ಈ ಮಟ್ಟದಲ್ಲಿ ಬಹಿರಂಗವಾಗಿ ಬಂಡವಾಳವಾದಿ ವ್ಯವಸ್ಥೆ ಸಿಲುಕಿರುವ ಸಮಸ್ಯೆಗಳ ಬಗ್ಗೆ ಮಾತನಾಡಿರುವುದು ವಿರಳವೆಂದೇ ಹೇಳಬೇಕು. ರಘುರಾಮ ರಾಜನ್ ವ್ಯಕ್ತಪಡಿಸಿರುವ ಬಂಡವಾಳಶಾಹಿ ವ್ಯವಸ್ಥೆಯ ಮುಂದುವರಿಕೆಗೆ ಬಂದಿರುವ ಕುತ್ತುಗಳು ಬಂಡವಾಳಶಾಹಿ ವ್ಯವಸ್ಥೆಯೊಳಗಿನದೇ ಹೊರತು ಹೊರಗಿನದಲ್ಲ. ಇಡೀ ಜಾಗತಿಕ ವ್ಯವಸ್ಥೆಯನ್ನು ಕೆಲವೇ ಏಕಸ್ವಾಮ್ಯ ಕಾರ್ಪೊರೇಟುಗಳೇ ನಿಯಂತ್ರಿಸುವಂತಾಗಿ ಆಳುವ ಸರಕಾರಗಳೂ ಅವರ ಮರ್ಜಿಯೊಳಗಷ್ಟೇ ಕಾರ್ಯ ನಿರ್ವಹಿಸಬೇಕಾದಂತಹ ಸ್ಥಿತಿ ಬಂದಿರುವುದರಿಂದಲೇ ಅದು ಅತೀ ಗಂಭೀರವಾದ ಇಂದಿನ ಬಿಕ್ಕಟ್ಟಿಗೆ ಒಳಗಾಗಿ ತತ್ತರಿಸುತ್ತಿದೆ.

ಇದು ಜಾಗತಿಕ ವಿದ್ಯಮಾನವಾಗಿದೆ. ಹಾಗಾಗಿ ಅಸಮಾನತೆಯ ತೀವ್ರತೆ ಅಸಹ್ಯ ಮಟ್ಟ ತಲುಪಿದೆ. ಜಾಗತಿಕವಾಗಿ ಜನಸಮೂಹ ಅತೀವ ಅಸಮಾಧಾನಗಳಿಗೆ ಒಳಗಾಗಿ ಬೀದಿ ಪ್ರತಿಭಟನೆಗಳಿಗೆ, ದೊಂಬಿಗಳಿಗೆ ಇಳಿಯುತ್ತಿದ್ದಾರೆ. ದರೋಡೆ, ಕೊಲೆ, ಅತ್ಯಾಚಾರಗಳು ಎಲ್ಲೆಡೆಯೂ ಎಗ್ಗಿಲ್ಲದಂತಾಗಿದೆ. ಜಾಗತಿಕವಾಗಿ ಎಲ್ಲಾ ಸರಕಾರಗಳು ಜನಸಮೂಹಕ್ಕೆ ಯಾವುದೇ ಕಾರ್ಯಯೋಗ್ಯ ಭರವಸೆಗಳನ್ನು ನೀಡಲಾಗದ ಸ್ಥಿತಿಯನ್ನು ತಂದಿಟ್ಟಿದೆ. ಹಾಗಾಗಿ ಸುಳ್ಳು ಕಪಟತೆ, ಹುಸಿ ರಾಷ್ಟ್ರಾಭಿಮಾನಗಳಡಿ ಜನಸಮೂಹವನ್ನು ಹಿಡಿದಿಡಲು ಶ್ರಮಿಸುತ್ತಿವೆ. ಆದರೆ ಆ ತಂತ್ರಗಳಾವುವೂ ಜನಸಮೂಹ ಇಂದು ಎದುರಿಸುತ್ತಿರುವ ಭಾರೀ ಗಂಭೀರ ಸಮಸ್ಯೆಗಳನ್ನು ಎದುರುಗೊಳ್ಳಲು ಸಾಕಾಗುತ್ತಿಲ್ಲ. ಇದನ್ನು ಅಮೆರಿಕ, ಫ್ರಾನ್ಸ್, ಯುನೈಟೆಡ್ ಕಿಂಗ್ ಡಂ, ಜರ್ಮನಿ ಸೇರಿದಂತೆ ಜಾಗತಿಕವಾಗಿ ಎಲ್ಲೆಡೆಯೂ ನಾವು ಗಮನಿಸಬಹುದು. ಈ ಎಲ್ಲಾ ಬೆಳವಣಿಗೆಗಳು ಸಹಜವಾಗಿ ‘ಬಂಡವಾಳಶಾಹಿ ವ್ಯವಸ್ಥೆಗೆ ಬೇರೆ ಪರ್ಯಾಯವೇ ಇಲ್ಲ’ ಎಂದೇ ಬಿಂಬಿಸಿಕೊಂಡು ಬಂದ ಬಂಡವಾಳಶಾಹಿ ವ್ಯವಸ್ಥೆಯ ವಾರಸುದಾರರಿಗೆ ಭಾರೀ ಬೆದರಿಕೆಗಳನ್ನು ಒಡ್ಡಿದೆ. ಈ ಬಿಕ್ಕಟ್ಟಿನಿಂದ ಹೇಗಾದರೂ ಪಾರಾಗಲು ನಡೆಸಿಕೊಂಡು ಬಂದ ಇರಾಕ್, ಲಿಬಿಯಾ, ಸಿರಿಯ, ಅಫ್ಘಾನಿಸ್ತಾನ ಮೊದಲಾದ ಯುದ್ಧಗಳು ನಿರೀಕ್ಷಿತ ಫ್ರತಿಫಲಗಳನ್ನು ತಂದುಕೊಟ್ಟಿಲ್ಲ. ಬದಲಿಗೆ ಭಾರೀ ನಷ್ಟಗಳೇ ಹೆಚ್ಚಾದವು.

ಸಿರಿಯ ಯುದ್ಧದಲ್ಲಿ ಐಸಿಸ್ ಸಂಘಟನೆಯನ್ನು ನಿರ್ಮೂಲನೆ ಮಾಡಿದ್ದಾಗಿ ಇತ್ತೀಚೆಗೆ ಹೇಳಿಕೊಂಡರೂ ಅದು ಪೂರ್ತಿ ನಿಜವಲ್ಲ. ಒಂದು ವೇಳೆ ಹಾಗೆ ಮಾಡಿದ್ದರೂ ಅದರಿಂದ ಅಮೆರಿಕಕ್ಕೆ ಗಮನಾರ್ಹ ಮಟ್ಟದ ಲಾಭವೇನೂ ಆಗುವುದಿಲ್ಲ. ಯಾಕೆಂದರೆ ಸಿರಿಯವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಅಮೆರಿಕಕ್ಕೆ ಸಾಧ್ಯವಾಗಿಲ್ಲ. ಇದೀಗ ಅಮೆರಿಕದ ಟ್ರಂಪ್ ಆಡಳಿತ ಜಾಗತಿಕವಾಗಿ ದೊಡ್ಡ ತೈಲ ನಿಕ್ಷೇಪವಿರುವ ವೆನಿಜುಯೆಲಾವನ್ನು ಅಲ್ಲಿನ ಕೆಲವು ವಿರೋಧ ಪಕ್ಷಗಳನ್ನು ಖರೀದಿಸುವ ಮೂಲಕ ಹೇಗಾದರೂ ಮಾಡಿ ತನ್ನ ಕೈವಶಮಾಡಬೇಕೆಂದು ಹೆಣಗಾಡುತ್ತಿದ್ದರೂ ಅದು ಅಷ್ಟು ಸುಲಭದ ವಿಚಾರವಾಗಿ ಉಳಿದಿಲ್ಲ. ವೆನೆಝುವೆಲದ ಜನತೆ ಸಾಕಷ್ಟು ದೃಢವಾಗಿ ಅಮೆರಿಕದ ಹಸ್ತಕ್ಷೇಪವನ್ನು ವಿರೋಧಿಸುತ್ತಾ ಮಡುರೊ ಸರಕಾರದ ಬೆಂಬಲಕ್ಕೆ ನಿಂತಿದ್ದಾರೆ. ಅಲ್ಲದೇ ಚೀನಾ, ರಶ್ಯಾ ಅವರದೇ ಹಿತಾಸಕ್ತಿಗಳ ರಕ್ಷಣೆಗಾಗಿ ವೆನಿಜುಯೇಲಾದ ಬೆಂಬಲಕ್ಕೆ ನಿಂತಿವೆ.

ರಶ್ಯಾ ಈಗಾಗಲೇ ಸೈನಿಕ ಸಹಾಯಕ್ಕೂ ಮುಂದಾಗಿದೆ. ಯುನೈಟೆಡ್ ಕಿಂಗ್‌ಡಂ ಐರೋಪ್ಯ ಒಕ್ಕೂಟದಿಂದ ಹೊರಹೋಗಲು ಮಾಡಿರುವ ತೀರ್ಮಾನ ತೀವ್ರ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ. ಅಲ್ಲಿನ ತೆರೇಸಾ ಮೇ ಸರಕಾರ ಅಡಕತ್ತರಿಯಲ್ಲಿ ಸಿಲುಕಿಕೊಂಡು ಪತನವಾಗುವ ಸ್ಥಿತಿಯಲ್ಲಿದೆ. ಫ್ರಾನ್ಸ್‌ನ ಜನರು ಅಲ್ಲಿನ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೊನ್ ವಿರುದ್ಧವೇ ದಂಗೆಯೆದ್ದಿದ್ದಾರೆ. ಈ ಎಲ್ಲಾ ರಾಷ್ಟ್ರಗಳ ಆರ್ಥಿಕ ಬೆಳವಣಿಗೆಯ ದರ ದಿನೇ ದಿನೇ ಇಳಿಮುಖವಾಗುತ್ತಾ ಸಾಗುತ್ತಿದೆ. ಭಾರತ ಪೂರ್ಣವಾಗಿ ಬಂಡವಾಳಶಾಹಿ ರಾಷ್ಟ್ರವೆಂದು ಪರಿಗಣಿಸಲಾಗದಿದ್ದರೂ ಜಾಗತಿಕ ಬಂಡವಾಳಶಾಹಿಗಳ ಹಿಡಿತದಲ್ಲಿರುವ ದೇಶ. ಇಲ್ಲಿನ ಪರಿಸ್ಥಿತಿ ಕೂಡ ಮೊದಲಿದ್ದ ಬಿಸಿ ಬಾಣಲೆಯಿಂದ ಈಗ ನೇರವಾಗಿ ಬೆಂಕಿಗೆ ಬಿದ್ದಂತಹ ಸ್ಥಿತಿಯಾಗಿದೆ. ಈಗ ಭಾರತದಲ್ಲಿ ಲೋಕಸಭಾ ಚುನಾವಣೆಯ ಕಾಲ. ಆಡಳಿತಾರೂಢ ಮೋದಿ ಸರಕಾರಕ್ಕೆ ಜನರನ್ನು ಯಾಮಾರಿಸಿ ಅಧಿಕಾರ ಹಿಡಿಯುವ ಶಕ್ತಿ ಕ್ಷೀಣಿಸಿದೆ. ಅದು ವೈಭವೀಕರಿಸುತ್ತಾ ಬಂದ ಸುಳ್ಳುಗಳು, ಕಪಟ ಭರವಸೆಗಳು, ಹುಸಿ ರಾಷ್ಟ್ರಿಯತೆಗಳು ಮೊದಲಿನಂತೆ ಜನಸಾಮಾನ್ಯರ ಮೇಲೆ ಮೋಡಿ ಮಾಡುತ್ತಿಲ್ಲ. ಕೇವಲ ಮೋದಿ ಮೋಡಿಯನ್ನೇ ನಂಬಿಕೊಂಡು ಕೂತಿರುವ ಬಿಜೆಪಿ ಹಾಗೂ ಸಂಘ ಪರಿವಾರ ಪರ್ಯಾಯದತ್ತ ಯೋಚಿಸುತ್ತಿದ್ದರೂ ಅದೂ ಕೂಡ ಸದ್ಯಕ್ಕೆ ಕಾರ್ಯಗತವಾಗುವ ಸ್ಥಿತಿ ಕಾಣುತ್ತಿಲ್ಲ.

ಈಗ ಇರುವುದರಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿಯನ್ನು ಕಾರ್ಪೊರೇಟುಗಳು ಮತ್ತವರ ಮಾಧ್ಯಮಗಳು ಮೊದಲಿಗಿಂತ ಹೆಚ್ಚು ಬಿಂಬಿಸಲಾರಂಭಿಸಿವೆ. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಸದ್ಯಕ್ಕೆ ಇರುವ ಒಂದು ಪರ್ಯಾಯವನ್ನಾಗಿ ಜನಸಾಮಾನ್ಯರ ಮುಂದೆ ಇಡಲಾಗುತ್ತಿದೆ. ಬಿಜೆಪಿಯನ್ನು ವಿರೋಧಿಸುವವರು ಹಾಗೇನೆ ಸಾಕಷ್ಟು ಸಂಖ್ಯೆಯ ಪ್ರಗತಿಪರ ವಲಯದವರು ಕೂಡ ಇದನ್ನೇ ಸದ್ಯಕ್ಕಿರುವ ಪರ್ಯಾಯವೆಂದು ಒಪ್ಪಿಕೊಂಡಿದ್ದಾರೆ.

ಆದರೆ ಇಲ್ಲಿ ಒಂದು ವಿಚಾರ ಗಮನಿಸಬೇಕಾಗುತ್ತದೆ. ರಾಹುಲ್ ಗಾಂಧಿ ಕೂಡ ಮೋದಿ ಮಾಡಿದ ಮೋಡಿಯ ವರಸೆಗಳನ್ನೇ ಜನರ ಮುಂದೆ ಇಡುತ್ತಿದ್ದಾರೆ. ಅದರಲ್ಲಿ ಸಂಘ ಪರಿವಾರ ಪ್ರತಿಪಾದಿಸುವ ಎಲ್ಲಾ ರೀತಿಯ ಬ್ರಾಹ್ಮಣಶಾಹಿ ವರಸೆಗಳೂ ಸೇರಿವೆ. ಅಲ್ಲದೆ ದೇಶದ ತೀರಾ ಕಡುಬಡವರಾದ ಶೇ. 20ರಷ್ಟು ಜನಸಂಖ್ಯೆಗೆ ಕನಿಷ್ಠ 12,000 ರೂಪಾಯಿ ತಿಂಗಳ ಆದಾಯ ವರ್ಷಕ್ಕೆ 72,000 ರೂಪಾಯಿಗಳ ಆದಾಯ ಖಾತ್ರಿಗೊಳಿಸುವ ನ್ಯಾಯ್ (ನ್ಯೂನತಮ ಆಯ ಯೋಜನಾ)ಎನ್ನುವ ಯೋಜನೆಯನ್ನು ತಾವು ಅಧಿಕಾರಕ್ಕೆ ಬಂದಲ್ಲಿ ಜಾರಿಗೆ ತರುವುದಾಗಿ ರಾಹುಲ್ ಘೋಷಿಸಿದ್ದಾರೆ. ಇದನ್ನು ರಘುರಾಮ ರಾಜನ್ ಸೇರಿದಂತೆ ಹಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಯೋಜನೆಯ ವೆಚ್ಚ ಸುಮಾರು ಮೂರು ಲಕ್ಷ ಅರವತ್ತು ಸಾವಿರ ಕೋಟಿಗಳಷ್ಟು ಆಗುತ್ತದೆಂದೂ ಅಂದಾಜಿಸಲಾಗಿದೆ. ಇದಕ್ಕೆ ಒಟ್ಟು ನಮ್ಮ ದೇಶದ ಆಯವ್ಯಯದ ಶೇ. 13ರಷ್ಟು ಸಂಪನ್ಮೂಲವನ್ನು ತೆಗೆದಿಡಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಕಳೆದ ಮಧ್ಯಂತರ ಆಯವ್ಯಯದಲ್ಲಿ ಮೋದಿ ಸರಕಾರ ಕೂಡ ಇಂತಹುದೇ ಯೋಜನೆಯೊಂದನ್ನು ರೈತರಿಗೆ ಒದಗಿಸಲಾಗುವುದು ಎಂದು ಘೋಷಿಸಿ ವಾರ್ಷಿಕ ತಲಾ 6000 ರೂಪಾಯಿಗಳನ್ನು ಖಾತ್ರಿಗೊಳಿಸಿ ನೀಡುವುದಾಗಿ ಹೇಳಿಕೊಂಡಿತ್ತು.

ಬಿಜೆಪಿಯದ್ದಾಗಲೀ ಕಾಂಗ್ರೆಸ್‌ನದ್ದಾಗಲೀ ಇಂತಹ ಭರವಸೆಗಳ ಹಿಂದೆ ಕೆಲಸ ಮಾಡುತ್ತಿರುವುದು ರಘುರಾಮ ರಾಜನ್ ಹೇಳಿದ ವಿಚಾರವೇ ಆಗಿದೆ. ಅತೃಪ್ತಿ ಅಸಮಾಧಾನಗಳಿಂದ ರೋಷಗೊಂಡ ಜನಸಮೂಹದಿಂದ ದಂಗೆಯಾಗುವ ಸಾಧ್ಯತೆಗಳನ್ನು ತಡೆಯುವ ಒಂದು ಹುನ್ನಾರ ಮಾತ್ರ ಆಗಿದೆ. ಒಂದು ವೇಳೆ ರಾಹುಲ್ ಗಾಂಧಿಯ ನೇತೃತ್ವದಲ್ಲಿ ಮುಂದಿನ ಸರಕಾರ ರಚನೆಯಾದರೂ ಮೂಲಭೂತವಾಗಿ ಜಾಗತಿಕ ಬಂಡವಾಳಶಾಹಿ ಪರ, ದೊಡ್ಡ ಆಸ್ತಿವಂತರಪರ ನೀತಿಗಳೇ ಮುಂದುವರಿಯುತ್ತವೆ ಎನ್ನುವುದಕ್ಕೆ ಬಲವಾದ ಆಧಾರಗಳು ನಮ್ಮ ಮುಂದಿವೆ.

ಇವರ್ಯಾರೂ ಕೂಡ ಜನಸಮೂಹ ಇಂದು ಎದುರಿಸುತ್ತಿರುವ ನಿರುದ್ಯೋಗ, ಕೃಷಿ ಬೆಳೆಗಳಿಗೆ ನ್ಯಾಯಯುತ ಬೆಲೆ ಖಾತರಿ, ಭೂಮಿ ಹಂಚಿಕೆಯ ಸಮಸ್ಯೆ, ಕೈಗಾರಿಕೀಕರಣದ ಕೊರತೆ, ಶಿಕ್ಷಣ ಸೌಲಭ್ಯದ ಅಲಭ್ಯತೆ, ವಸತಿಹೀನತೆ, ಕನಿಷ್ಠ ವೇತನ ಖಾತ್ರಿ ಮೊದಲಾದ ಸಂಕೀರ್ಣವಾದ ಸಮಸ್ಯೆಗಳಿಗೆ ನಿರ್ದಿಷ್ಟವಾದ, ನಾಮ ಮಾತ್ರದ್ದಾದರೂ ಕೆಲವು ಯೋಜನೆಗಳೊಂದಿಗೆ ಜನರೆದುರು ಹೋಗಿ ಮತ ಕೇಳುತ್ತಿಲ್ಲ. ದೇಶದ ಮೇಲೆ ಜಾಗತಿಕ ಭಾರೀ ಕಾರ್ಪೊರೇಟುಗಳ ಹಿಡಿತವನ್ನು ತಪ್ಪಿಸಿ ವಿಕೇಂದ್ರೀಕೃತ ಕೈಗಾರಿಕೀಕರಣ ಜಾರಿಮಾಡುವ ಬಗ್ಗೆ ತುಟಿ ಬಿಚ್ಚುವುದೇ ಇಲ್ಲ. ಬದಲಿಗೆ ಅಗ್ಗದ ಗಿಮಿಕ್ ಗಳಲ್ಲಿ ಜನರನ್ನು ತೇಲಿಸಲು ನೋಡುತ್ತಿದ್ದಾರೆ.

ಆ ‘ನ್ಯಾಯ್’ನಂತಹ ಗಿಮಿಕ್ಕುಗಳೂ ಕೂಡ ಈಗ ಚಾಲ್ತಿಯಲ್ಲಿ ಅಲ್ಪಸ್ವಲ್ಪ ಇರುವ ಸಾಮಾಜಿಕ ಅಭಿವೃದ್ಧಿಗಾಗಿನ ಸಂಪನ್ಮೂಲಗಳನ್ನು ನುಂಗುವಂತಹವುಗಳೇ ಆಗುತ್ತವೆ.

ಮುಂದುವರಿದ ರಾಷ್ಟ್ರಗಳೆಂದು ಕರೆಯಲಾಗುತ್ತಿದ್ದ ಹಲವು ರಾಷ್ಟ್ರಗಳಲ್ಲಿ ಮೊದಲು ಇಂತಹ ಸಾಮಾಜಿಕ ಭದ್ರತೆಯ ಭಾಗವಾಗಿ ಉದ್ಯೋಗ ಇಲ್ಲದವರಿಗೆ ನಿರುದ್ಯೋಗ ಭತ್ತೆಯಂತಹ ಯೋಜನೆಗಳು ಜಾರಿಯಲ್ಲಿದ್ದವು. ಆದರೆ ಜಾಗತಿಕ ಆರ್ಥಿಕ ಬಿಕ್ಕಟ್ಟು ಪ್ರಾರಂಭವಾದಾಗಿನಿಂದ ಅಂತಹ ಸಾಮಾಜಿಕ ಭದ್ರತೆಯ ಯೋಜನೆಗಳನ್ನು ಅಲ್ಲೆಲ್ಲಾ ಒಂದೊಂದಾಗಿ ರದ್ದು ಮಾಡುತ್ತಾ ಬರಲಾಯಿತು. ಆ ಎಲ್ಲಾ ಸಂಪನ್ಮೂಲಗಳೂ ಕೂಡ ದೊಡ್ಡ ಕಾರ್ಪೊರೇಟುಗಳ ತಿಜೋರಿಗೆ ನೇರವಾಗಿ ಸೇರತೊಡಗಿದವು. ಇದರ ನಂತರವೇ ಅಲ್ಲೆಲ್ಲಾ ಜನಸಮೂಹ ದೊಡ್ಡ ಮಟ್ಟದ ಬೀದಿ ಪ್ರತಿಭಟನೆಗಳಿಗೆ ಇಳಿಯತೊಡಗಿದ್ದು. ಅಂತಹ ಬೀದಿ ಪ್ರತಿಭಟನೆಗಳು ಇಂದು ಹೆಚ್ಚಾಗತೊಡಗಿದ್ದರಿಂದ ರಘುರಾಮ ರಾಜನ್‌ರಂತಹ ಬಂಡವಾಳಶಾಹಿ ಆರ್ಥಿಕ ತಜ್ಞರು ಬಂಡವಾಳಶಾಹಿ ವ್ಯವಸ್ಥೆಯ ಉಳಿವಿನ ಬಗ್ಗೆ ಚಿಂತಿತರಾಗಿದ್ದಾರೆ.

ರಾಹುಲ್ ಗಾಂಧಿಯ ಕನಿಷ್ಠ ಆದಾಯ ಖಾತರಿ ಯೋಜನೆಯನ್ನು ಹಲವರು ಕಾರ್ಯ ಸಾಧುವಾದ ಉತ್ತಮ ಯೋಜನೆ ಎಂದೆಲ್ಲಾ ಹೊಗಳುತ್ತಿದ್ದಾರೆ. ಹಲವು ಆರ್ಥಿಕ ತಜ್ಞರು ಅದನ್ನು ಸಮರ್ಥಿಸುತ್ತಿದ್ದಾರೆ. ಹಾಗೇನೇ ವಿರೋಧಿಸುವವರೂ ಇದ್ದಾರೆ.

ದೇಶಕ್ಕೆ ಇಂದಿರುವ ಇಂತಹ ದೈನೇಸಿ ಸ್ಥಿತಿ ತಂದಿಡುವುದರಲ್ಲಿ ಪ್ರಧಾನ ಪಾತ್ರ ಅತೀ ಹೆಚ್ಚುಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷದ್ದೇ ಆಗಿದೆ. ಈ ಸತ್ಯವನ್ನು ಇಂತಹ ಯೋಜನೆಗಳ ಘೋಷಣೆಗಳ ಮೂಲಕ ಜನರ ಮನಸಿನಿಂದ ಮರೆಸಿ ಭರವಸೆ ಮೂಡಿಸಲು ಸಾಧ್ಯವಾಗುವುದು ಅನುಮಾನದ ವಿಚಾರ.
 ಏನೇ ಆದರೂ ಜನಸಾಮಾನ್ಯರು ತಮ್ಮದೇ ಪರ್ಯಾಯವನ್ನು ರೂಪಿಸಿಕೊಳ್ಳುವ ಪ್ರಜ್ಞಾಪೂರ್ವಕ ರಾಜಕೀಯ ಸಕ್ರಿಯತೆ ಮಾತ್ರ ಭವಿಷ್ಯದ ಭರವಸೆಯಾಗಬಲ್ಲದು ಎಂದು ಹೇಳಬಹುದು.

ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ.ಎನ್.

contributor

Editor - ನಂದಕುಮಾರ್ ಕೆ.ಎನ್.

contributor

Similar News