ಸಂಸದರ ಆದರ್ಶ ಗ್ರಾಮ ಯೋಜನೆ ವೈಫಲ್ಯಕ್ಕೆ ಶೋಭಾ ಕಾರಣ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೂರ್ತಿ

Update: 2019-04-02 12:02 GMT

ಚಿಕ್ಕಮಗಳೂರು, ಎ.2: ಸಂಸದೆಯಾಗಿದ್ದ ಅವಧಿಯಲ್ಲಿ ಶೋಭಾ ಕರಂದ್ಲಾಜೆ ಕೇಂದ್ರದಿಂದ ಜಾರಿಯಾದ ಯೋಜನೆಗಳ ಅನುಷ್ಠಾನಕ್ಕೆ ಕಿಂಚಿತ್ ಕಾಳಜಿ ವಹಿಸಿಲ್ಲ. ಇವರ ನಿರ್ಲಕ್ಷ್ಯದ ಫಲವಾಗಿ ಜಿಲ್ಲೆಯ ದಾರದಹಳ್ಳಿ ಗ್ರಾಮ ಸಂಸದರ ಆದರ್ಶ ಗ್ರಾಮಕ್ಕೆ ಆಯ್ಕೆಯಾಗಿದ್ದರೂ ಕಳೆದ ಐದು ವರ್ಷಗಳ ಅವಧಿಯಲ್ಲಿ ದಾರದಹಳ್ಳಿ ಗ್ರಾಮ ಆದರ್ಶ ಗ್ರಾಮವಾಗಿ ರೂಪುಗೊಳ್ಳಲೇ ಇಲ್ಲ. ಸಂಸದೆ ಶೋಭಾ ಕರಂದ್ಲಾಜೆ ಜಿಲ್ಲೆಯಲ್ಲಿ ಎಷ್ಟರ ಮಟ್ಟಿಗೆ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದಕ್ಕೆ ದಾರದಹಳ್ಳಿ ಗ್ರಾಮವೇ ನಿದರ್ಶನವಾಗಿದೆ. ಸಂಸದರ ಬೇಜಾವಾಬ್ದಾರಿಯಿಂದಾಗಿ ದಾರದಹಳ್ಳಿ ಅಭಿವೃದ್ಧಿಯಿಂದ ವಂಚಿತವಾಗುವಂತಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಟೀಕಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರ ಐದು ವರ್ಷದ ಸಾಧನೆ ಶೂನ್ಯ. ರಿವರ್ ಟರ್ನ್ ಹಕ್ಕಿ ಭದ್ರಾ ಹಿನ್ನೀರು ಪ್ರದೇಶಕ್ಕೆ ಬಂದು ಸಂತಾನೋತ್ಪತಿ ಮಾಡಿಕೊಂಡು ಹೋಗುವ ಹಾಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ತಮ್ಮ ಐದು ವರ್ಷದ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗಿಂತ ಕೋಮು ಕೋಮುಗಳ ನಡುವೆ ಬೆಂಕಿ ಹೋಗುವ ಕಾಯಕ ಮಾಡಿದರು. ಇನ್ನು ಅಭಿವೃದ್ಧಿಯ ಮಾತೆಲ್ಲಿ ಎಂದು ವ್ಯಂಗ್ಯವಾಡಿದರು.

ಜಿಲ್ಲೆಯ ಹಾಸನ-ಚಿಕ್ಕಮಗಳೂರು ರೈಲ್ವೇ ಯೋಜನೆಗೆ ಸಂಸದರ ಅವಧಿಯಲ್ಲಿ ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಲೇ ಇಲ್ಲ. ಇದರಿಂದ ಕಾಮಗಾರಿ ವೇಗ ಪಡೆದುಕೊಳ್ಳಲೇ ಇಲ್ಲ, ಇನ್ನೂ ಕುಟುಂತ್ತಾ ಸಾಗುತ್ತಿದೆ. ಚಿಕ್ಕಮಗಳೂರು-ಬೆಂಗಳೂರಿಗೆ ವೇಗದ ರೈಲು ಸಂಚಾರ ಅವಕಾಶ ಕಲ್ಪಿಸುವಲ್ಲಿ ಸಂಸದರು ವಿಫಲರಾದರು. ಮಲೆನಾಡಿನ ಜನತೆಗೆ ಕಂಟಕವಾದ ಕಸ್ತೂರಿ ರಂಗನ್ ಯೋಜನೆ, ಹುಲಿ ಯೋಜನೆ ಬಗ್ಗೆ ಅದರ ಸಾಧಕ-ಭಾದಕಗಳ ಬಗ್ಗೆ ಜನರೊಂದಿಗೆ ಚರ್ಚಿಸಲಿಲ್ಲ. ಜಿಲ್ಲೆ ಪ್ರವಾಸೋದ್ಯಮ ಕೇಂದ್ರ, ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಜಿಲ್ಲಾದ್ಯಾಂತ ಸರ್ವ ಋತು ರಸ್ತೆ ನಿರ್ಮಾಣದಲ್ಲಿ ವಿಫಲರಾದರು. ಯುವ ಜನತೆಗೆ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ವಿಫಲರಾದರು ಎಂದು ಆರೋಪದ ಸುರಿಮಳೆಗೈದರು.

ಜಿಲ್ಲೆಯಲ್ಲಿ ಬಿಎಸ್ಸೆನ್ನೆಲ್ ಸಂಸ್ಥೆ ಹಾಳುಗೆಡವಿ, ಖಾಸಗಿ ಸಂವಾಹನ ಸಂಸ್ಥೆ ಅಭಿವೃದ್ಧಿಗೆ ಸಹಕರಿಸಿದರು. ಬಿಎಸ್ಸೆನ್ನೆಲ್ ಸಂಸ್ಥೆ ಸರಿಪಡಿಸಲು ಸಂಸದೆ ಶೋಭಾ ಕರಂದ್ಲಾಜೆ ಏನು ಕ್ರಮಕೈಗೊಂಡರು? ಸಂಸದರ ನಿಧಿಯಲ್ಲಿ ಬರುವ ಹಣವನ್ನು ಎಲ್ಲಿ ವಿನಿಯೋಗ ಮಾಡಿದರು? ಸಂಸದೆ ಶೋಭಾ ಕರಂದ್ಲಾಜೆ ಬೇಜವಬ್ದಾರಿ ಕೆಲಸಕ್ಕೆ ಸ್ವಪಕ್ಷಿಯರೇ ಗೋ ಬ್ಯಾಕ್ ಶೋಭಾ ಅಭಿಯಾನ ಆರಂಭಿಸಿದ್ದಾರೆ ಎಂದ ಅವರು, ಇಂತಹ ಸಂಸದರಿಗೆ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡುತ್ತಾರೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ರಾಜ್ಯಾಧ್ಯಕ್ಷ ಕೆ.ಮಹಮದ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಳ್ಳಿಹಿತ್ಲು ಮಹೇಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರವೀಶ್ ಬಸಪ್ಪ, ನಜೀರ್ ಅಹಮದ್ ಇದ್ದರು.

ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ಸಾಮಾಜಿಕ ಕಳಕಳಿ ಉಳ್ಳ ವ್ಯಕ್ತಿ. ಅವರು ಶಾಸಕರಾಗಿದ್ದಾಗ ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸ ನಡೆಸಿದ್ದಾರೆ. ಜಿಲ್ಲೆಯ ಜನ ಈ ಬಾರಿ ಅವರನ್ನು ಗೆಲ್ಲಿಸಿ ಸಂಸತ್‍ಗೆ ಕಳಿಸಿದರೆ ಜಿಲ್ಲೆಗೆ ಪೂರಕವಾದ ಯೋಜನೆ ತರಲು ಅನುಕೂಲವಾಗುತ್ತದೆ. ಈಗಾಗಲೇ ಪ್ರಚಾರ ಕಾರ್ಯ ಆರಂಭವಾಗಿದ್ದು, ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದ್ದೇವೆ.
- ಎಂ.ಎಲ್.ಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News