ಕುಶಾಲನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6.31 ಲಕ್ಷ ನಗದು ವಶ

Update: 2019-04-02 12:09 GMT

ಮಡಿಕೇರಿ,ಎ.2: ಸೂಕ್ತ ದಾಖಲೆ ಇಲ್ಲದೆ ಜೀಪಿನಲ್ಲಿ ಸಾಗಾಟ ಮಾಡುತ್ತಿದ್ದ ಅಪಾರ ಪ್ರಮಾಣದ ನಗದನ್ನು ಮಂಗಳವಾರ ಕುಶಾಲನಗರ ಬಳಿಯ ಕೊಪ್ಪ ಚುನಾವಣಾ ತಪಾಸಣಾ ಕೇಂದ್ರ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 

ಮಂಗಳವಾರ ಬೆಳಗ್ಗೆ ಬೈಲುಕೊಪ್ಪದಿಂದ ಕುಶಾಲನಗರದ ಕಡೆಗೆ ತೆರಳುತ್ತಿದ್ದ ಮಹೇಂದ್ರ (ಕೆಎಲ್.14.ಟಿ.4221) ಜೀಪನ್ನು ಪರಿಶೀಲಿಸಿದ ಸಂದರ್ಭ ಕಾರಿನೊಳಗೆ ದಾಖಲೆಯಿಲ್ಲದ 6.31 ಲಕ್ಷ ರೂ. ಪತ್ತೆಯಾಗಿದೆ.

ಜೀಪಿನಲ್ಲಿದ್ದ ಜೀವನ್ ಮತ್ತು ಸಂತೋಷ್ ಎಂಬವರನ್ನು ವಿಚಾರಿಸಿದಾಗ, ತಾವು ಕೋಳಿ ಫಾರಂನಲ್ಲಿ ಸಿಬ್ಬಂದಿಗಳಾಗಿದ್ದು ಬ್ಯಾಂಕಿಗೆ ಜಮಾ ಮಾಡಲು ಹಣ ಕೊಂಡೊಯ್ಯುತ್ತಿರುವುದಾಗಿಯೂ, ಸಮರ್ಪಕ ದಾಖಲೆ ಒದಗಿಸುವುದಾಗಿಯೂ ತಿಳಿಸಿದ್ದಾರೆ. 

ಸ್ಥಳಕ್ಕೆ ಉಪವಿಭಾಗಾಕಾರಿ ಜವರೇಗೌಡ, ತಹಶೀಲ್ದಾರ್ ಗೋವಿಂದರಾಜು ಭೇಟಿ ನೀಡಿ ಪರಿಶೀಲಿಸಿದ್ದು, ಹಣವನ್ನು ಖಜಾನೆಗೆ ಹಸ್ತಾಂತರಿಸಲಾಗಿದೆ.
ತಪಾಸಣಾ ಕೇಂದ್ರದ ಅಧಿಕಾರಿ ಗೂಳಪ್ಪ ಕೋತಿನ್, ರವಿಕುಮಾರ್, ರವಿಕುಮಾರ್, ಶಿವಣ್ಣ, ಪೊಲೀಸ್ ಇಲಾಖೆಯ ಜಯಪ್ರಕಾಶ್ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭ ಸೆಕ್ಟರ್ ಅಕಾರಿ ಸುಜಯಕುಮಾರ್, ಕಂದಾಯ ಅಧಿಕಾರಿ ಮಧುಸೂದನ್, ಗ್ರಾಮ ಲೆಕ್ಕಿಗ ಗೌತಮ್ ಹಾಜರಿದ್ದರು.

ಮೈಸೂರು ಲೋಕಸಭಾ ಕ್ಷೆತ್ರದ ಚುನಾವಣಾ ವೀಕ್ಷಕರಾದ ಕುಲ್ದಿಪ್ ನಾರಾಯಣ್, ಡಾ.ವಿಕಾಸ್ ಪಾಠಕ್ ಅವರುಗಳು ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News