ಚುನಾವಣೆ ಹಿನ್ನೆಲೆ: ಐವರು ರೌಡಿ ಶೀಟರ್ ಗಳು ಕೊಡಗಿನಿಂದ ಗಡಿಪಾರು

Update: 2019-04-02 12:32 GMT

ಮಡಿಕೇರಿ.ಎ.2: ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಾನೂನು ವಿರೋಧಿ ಚಟುವಟಿಕೆ ಮತ್ತು ರೌಡಿ ಶೀಟರ್ ತೆರೆಯಲ್ಪಟ್ಟಿರುವವರ ಪೈಕಿ ಒಟ್ಟು 5 ಮಂದಿಯನ್ನು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ತಾತ್ಕಾಲಿಕವಾಗಿ ಗಡಿಪಾರು ಮಾಡಿ ಉಪವಿಭಾಗಾಧಿಕಾರಿ ಮತ್ತು ಉಪವಿಭಾಗೀಯ ದಂಡಾಧಿಕಾರಿಗಳಾದ ಜವರೇಗೌಡ ಆದೇಶ ಹೊರಡಿಸಿದ್ದಾರೆ. 

ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ಕ್ರೈಂ ರೆಕಾರ್ಡ್ ಬ್ಯೂರೋ ನೀಡಿರುವ ವರದಿ ಆಧರಿಸಿ ಈ ಆದೇಶ ಹೊರಡಿಸಲಾಗಿದ್ದು, ಆದೇಶ ಜಾರಿಯಾದ ದಿನದಿಂದಲೇ ಕೊಡಗು ಜಿಲ್ಲೆಯನ್ನು ತೊರೆಯುವಂತೆ ಐವರಿಗೆ ಸೂಚಿಸಲಾಗಿದೆ.

ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದವರ ಮೇಲೆ ನಿಗಾ ಇಟ್ಟಿದ್ದು, ಲೋಕಸಭಾ ಚುನಾವಣೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ, ಮತದಾರರ ಮೇಲೆ ಹಣಬಲ, ತೋಳ್ಬಲದ ಮೂಲಕ ಪ್ರಭಾವ ಭೀರುವ ಸಾಧ್ಯತೆ ಇದ್ದ ಹಿನ್ನಲೆಯಲ್ಲಿ ಕ್ರೈಂ ರೆಕಾರ್ಡ್ ಬ್ಯೂರೋ 18-3-2019ರಂದು ಉಪವಿಭಾಗೀಯ ದಂಡಾಧಿಕಾರಿಗಳಿಗೆ 5 ಮಂದಿಯ ಹೆಸರನ್ನು ಗಡಿಪಾರಿಗಾಗಿ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಉಪವಿಭಾಗೀಯ ನ್ಯಾಯಾಲಯದಲ್ಲಿ ಪ್ರತಿವಾದಿಗಳಿಗೆ ತಮ್ಮ ವಾದ ಮಂಡಿಸಲು ಅವಕಾಶವನ್ನು ಕಲ್ಪಿಸಲಾಗಿತ್ತು. ಅದರಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರಾದ 5 ಮಂದಿಯನ್ನು ರಾಜ್ಯದ ವಿವಿಧ ಭಾಗಗಳಿಗೆ ಗಡಿಪಾರು ಮಾಡಿ ಉಪವಿಭಾಗೀಯ ದಂಡಾಧಿಕಾರಿ ಜವರೇಗೌಡ ಆದೇಶಿಸಿದ್ದಾರೆ. 

ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪದ 2ನೇ ವಿಭಾಗದ ನಿವಾಸಿ ಹೆಚ್.ಬಿ. ಮುರುಘ ಎಂಬವರನ್ನು ಎ.1 ರಿಂದ ಎ.20ರ ವರೆಗೆ ಹಾಸನ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆ.ನಿಡುಗಣೆ ನಿವಾಸಿ ಟಿ.ಕೆ.ಕಾವೇರಪ್ಪ ಅವರನ್ನು 1 ತಿಂಗಳ ಕಾಲ ಬೆಂಗಳೂರು ಜಿಲ್ಲೆಯ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ಸೋಮವಾರಪೇಟೆ ತಾಲೂಕಿನ ಜನತಾ ಕಾಲೋನಿ ನಿವಾಸಿ ಕರೀಂಬೇಗ್ ಅಲಿಯಾಸ್ ಇಮ್ರಾನ್ ರಾಜ್ ಎಂಬಾತನನ್ನು 1 ತಿಂಗಳ ಕಾಲ ತುಮಕೂರು ಜಿಲ್ಲೆಗೆ ಗಡಿಪಾರು ಮಾಡಿದರೆ, ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ಕಲ್ಲುಬಾಣೆ ನಿವಾಸಿ ಎನ್.ಎ. ಮಹಮದ್ ಅಲಿ ಎಂಬಾತನನ್ನು 1 ತಿಂಗಳ ಕಾಲ ಚಾಮರಾಜನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ವಿರಾಜಪೇಟೆ ತಾಲೂಕಿನ ಬೇಗೂರು ನಿವಾಸಿ ಎ. ಪ್ರತಾಪ್ ಎಂಬವರನ್ನು ಬೆಂಗಳೂರು ಜಿಲ್ಲೆಗೆ 15 ದಿನಗಳ ಕಾಲ ಗಡಿಪಾರು ಮಾಡಿ ಉಪವಿಭಾಗೀಯ ದಂಡಾಧಿಕಾರಿ ಜವರೇಗೌಡ ಆದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News