ಕಚೇರಿಯ ಕಡತಗಳನ್ನು ಕಾಪಾಡದ ಚೌಕಿದಾರ್, ದೇಶವನ್ನು ಹೇಗೆ ಕಾಪಾಡುತ್ತಾರೆ?: ಸಿ.ಎಂ.ಇಬ್ರಾಹಿಂ

Update: 2019-04-02 15:57 GMT

ಹುಬ್ಬಳ್ಳಿ, ಎ.2: ತನ್ನ ಕಚೇರಿಯಲ್ಲಿದ್ದ ರಕ್ಷಣಾ ಇಲಾಖೆಯ ಕಡತಗಳನ್ನು ಕಾಪಾಡಲು ಸಾಧ್ಯವಾಗದ ಚೌಕಿದಾರ್(ಪ್ರಧಾನಿ ನರೇಂದ್ರ ಮೋದಿ), ಇನ್ನು ದೇಶವನ್ನು ಹೇಗೆ ಕಾಪಾಡುತ್ತಾರೆ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಪ್ರಶ್ನಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರಮೋದಿ ವರ್ತನೆ ಅಹಂ ಬ್ರಹ್ಮಾಸ್ಮಿ ರೀತಿಯಲ್ಲಿದೆ. ಎಲ್ಲವೂ ನಾನೇ, ಎಲ್ಲವೂ ನನ್ನಿಂದಲೇ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶಕ್ಕೆ ಅಟಲ್ ಬಿಹಾರಿ ವಾಜಪೇಯಿ ಕೊಟ್ಟಂತಹ ಕೊಡುಗೆಗಳನ್ನು ನರೇಂದ್ರ ಮೋದಿ ಸ್ಮರಿಸುವುದಿಲ್ಲ. ದೇಶಕ್ಕೆ ಹೆದ್ದಾರಿಗಳನ್ನು ಕೊಟ್ಟ ಮಹಾನುಭಾವ ವಾಜಪೇಯಿ. ಪಕ್ಷಾತೀತವಾಗಿ ಎಲ್ಲರೂ ಅವರನ್ನು ಗೌರವಿಸುತ್ತಾರೆ. ಆದರೆ ನರೇಂದ್ರಮೋದಿ ತನ್ನ ಐದು ವರ್ಷದ ಆಡಳಿತಾವಧಿಯಲ್ಲಿ ದೇಶಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಅವರು ಪ್ರಶ್ನಿಸಿದರು.

ತನ್ನನ್ನು ಚೌಕಿದಾರ್ ಎಂದು ಬಿಂಬಿಸಿಕೊಳ್ಳುವ ನರೇಂದ್ರಮೋದಿ, ತನ್ನ ಕಚೇರಿಯಲ್ಲಿದ್ದ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕಡತಗಳನ್ನೆ ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನೂ ಈ ದೇಶವನ್ನು ಯಾವ ರೀತಿಯಲ್ಲಿ ಮೋದಿ ರಕ್ಷಣೆ ಮಾಡಲು ಸಾಧ್ಯ. ಅಪಾಯದಲ್ಲಿರುವ ದೇಶ ಹಾಗೂ ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಇಬ್ರಾಹಿಂ ಹೇಳಿದರು.

ರಾಜ್ಯ ಬಿಜೆಪಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪ್ರಭಾವ ಕ್ರಮೇಣ ಕುಸಿಯುತ್ತಿದೆ. ಅವರ ಮಾತು ರಾಜ್ಯದಲ್ಲಾಗಲಿ, ಅವರ ಪಕ್ಷದಲ್ಲಾಗಲಿ ನಡೆಯುತ್ತಿಲ್ಲ. ಆರೆಸೆಸ್ಸ್ ಮುಖಂಡ ಸಂತೋಷ್ ಮುಂದೆ, ಯಡಿಯೂರಪ್ಪ ಹಿಂದೆ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು.

ಬಿಜೆಪಿಯವರ ಕತೆ ಹೇಗಾಗಿದೆ ಅಂದರೆ, ಬೇರೆಯವರ ತಾಳಿಯನ್ನು ಕಿತ್ತುಕೊಂಡು ಬಂದು ತಾವು ಕಟ್ಟಿಕೊಂಡಿದ್ದಾರೆ. ಪಕ್ಕದ ಮನೆಯ ಸೊಸೆಯನ್ನು ತಮ್ಮ ಮನೆಗೆ ಸೇರಿಸಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಲ್ಲದೆ, ಇರುವುದರಿಂದ ನಮ್ಮ ಕಾಂಗ್ರೆಸ್ ಮಕ್ಕಳನ್ನು ಕರೆದುಕೊಂಡು ಹೋಗಿ ಸಾಕುತ್ತಿದ್ದಾರೆ ಎಂದು ಇಬ್ರಾಹಿಂ ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News