ಮೂಡಿಗೆರೆಯಲ್ಲಿ ಆಲಿಕಲ್ಲು ಮಳೆ: ಕಾಫಿ ಬೆಳೆಗಾರರಲ್ಲಿ ಆತಂಕ

Update: 2019-04-02 14:27 GMT

ಮೂಡಿಗೆರೆ, ಎ.2: ತಾಲೂಕಿನಾದ್ಯಂತ ಮಂಗಳವಾರ ಆಲಿಕಲ್ಲು ಸಹಿತ ಸಾಧಾರಣ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ತತ್ತರಿಸುತ್ತಿದ್ದ ಭೂಮಿಗೆ ತಂಪೆರಿಯುವುದರ ಮೂಲಕ ಜನರಲ್ಲಿ ಸಂತಸವನ್ನುಂಟು ಮಾಡಿದ್ದರೂ ಕಾಫಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.

ಮುಂಗಾರು ಮುಗಿದ ನಂತರ ಕಳೆದ ಆರು ತಿಂಗಳುಗಳಿಂದ ಮಳೆರಾಯ ಆಗಮಿಸದ ಪರಿಣಾಮ ಜಲಮೂಲಗಳು ಭತ್ತಿಹೋಗಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿತ್ತು. ನೀರಿನ ಸೌಕರ್ಯವಿದ್ದವರು ಕಾಫಿ ತೋಟಗಳಿಗೆ ನೀರು ಹಾರಿಸಿ ಬೆಳೆ ಉಳಿಸಿಕೊಳ್ಳಲು ಪ್ರಯತ್ನಿಸಿದ್ದರು. ಕಾಫಿ, ಕಾಳುಮೆಣಸು ವಾಣಿಜ್ಯ ಬೆಳೆಗಳು ಮತ್ತು ಮರಗಿಡಗಳು ಸೇರಿದಂತೆ ಜಾನುವಾರುಗಳಿಗೂ ಕುಡಿಯುವ ನೀರಿಗೆ ಕೊರತೆಯುಂಟಾಗಿತ್ತು. ವಾತಾರಣದಲ್ಲಿ 38 ಡಿಗ್ರಿ ಉಷ್ಣಾಂಶ ಹೆಚ್ಚಳವಾಗಿ ಮಲೆನಾಡಿನ ಜನರು ಬಿಸಿಲ ಬೇಗೆಯಲ್ಲಿ ಬೆಂದು ಹೋಗಿದ್ದರು. ಮಂಗಳವಾರ ಸಂಜೆ ಸುರಿದ ಮಳೆ ಜನರಲ್ಲಿ ಕೊಂಚ ಸಂತಸವನ್ನುಂಟು ಮಾಡಿತ್ತಾದರೂ ಆಲಿಕಲ್ಲು ಸುರಿದಿದ್ದರಿಂದ ಕಾಫಿ ಬೆಳೆಗೆ ತೊಂದರೆಯಾಗಿದೆ, ಆಲಿಕಲ್ಲುಗಳು ಕಾಫಿ ಮೊಗ್ಗುಗಳ ಮೇಲೆ ಬಿದ್ದ ಪರಿಣಾಮ ಎಳೆ ಕಾಫಿ ಕಾಯಿಗಳು ಉದುರಿ ಬೆಳೆ ನಷ್ಟ ಉಂಟು ಮಾಡುವ ಸಾಧ್ಯತೆಗಳಿವೆ ಎಂಬ ಆತಂಕ ಕಾಫಿ ಬೆಳೆಗಾರರದ್ದಾಗಿದೆ. 

ಮಂಗಳವಾರ ಸಂಜೆ ತಾಲೂಕಿನ ಪಟ್ಟದೂರು ಗ್ರಾಮದಲ್ಲಿ 75 ಸೆಂಟ್ಸ್ ಮಳೆಯಾಗಿದ್ದರೆ ಕಡಿದಾಳು 50, ಸಾರಗೋಡು, ಕುಂದೂರು, ಮುಗ್ರಹಳ್ಳಿ ಬಿದ್ರಹಳ್ಳಿ ಸೇರಿದಂತೆ ಮೂಡಿಗೆರೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿರುವುದಾಗಿ ವರದಿಯಾಗಿದೆ. ಮೂಡಿಗೆರೆ ಪಟ್ಟಣದಲ್ಲಿ ಆಲಿಕಲ್ಲು ಮಳೆಯಾಗುತ್ತಿದ್ದಂತೆ ನಾಗರಿಕರು ಆಲಿಕಲ್ಲು ಆಯ್ದುಕೊಳ್ಳುತ್ತಾ ಮಳೆಯಲ್ಲಿ ನೆನೆದು ಸಂಭ್ರಮಿಸುತ್ತಿದ್ದ ದೃಶ್ಯಗಳು ಕಂಡು ಬಂದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News