ಸೋತ ಕಾಂಗ್ರೆಸ್ ಮುಖಂಡರು ಸುಮಲತಾ ಪರ ಇದ್ದಾರೆ: ಸಚಿವ ಜಿ.ಟಿ.ದೇವೇಗೌಡ ಆರೋಪ
ಮಂಡ್ಯ, ಎ.2: ಎಂಟಕ್ಕೆ ಎಂಟು ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಗಳಲ್ಲಿ ಸೋತ ಕಾಂಗ್ರೆಸ್ ಮುಖಂಡರು ಸುಮಲತಾ ಪರ ಕೆಲಸ ಮಾಡುತ್ತಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಆರೋಪಿಸಿದ್ದಾರೆ.
ಮಂಗಳವಾರ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಚುನಾವಣಾ ಪ್ರಚಾರ ವೇಳೆ ಮಳವಳ್ಳಿ ತಾಲೂಕಿನ ಚಿಕ್ಕಮುಲಗೂಡು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಸ್ಪರ್ಧೆ ಮಾಡಿರುವ ಕಡೆ ಜೆಡಿಎಸ್‍ನವರ ಅಸಮಾಧಾನ ಇಲ್ಲ. ಆದರೆ, ಜೆಡಿಎಸ್‍ನವರು ನಿಂತಿರುವ ಕಡೆ ಅಸಮಾಧಾನ ಇದೆ. ಇದನ್ನು ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದರು.
ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಸೇರಿದಂತೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಮುಖಂಡರು ಯಾರೂ ನಿಖಿಲ್ ಪರ ಕೆಲಸ ಮಾಡುತ್ತಿಲ್ಲ. ಇದು ನೂರಕ್ಕೆ ನೂರು ಸತ್ಯ ಎಂದು ಅವರು ಪ್ರತಿಪಾದಿಸಿದರು.
ಚಲುವರಾಯಸ್ವಾಮಿ ಜೊತೆಯೂ ಮಾತನಾಡಿದೆ. ಆದರೆ, ಕುಮಾರಣ್ಣ ನಮ್ಮ ವಿರುದ್ಧ ಮಾತನಾಡುತ್ತಾರೆ. ಎಲ್ಲವೂ ಮೀರಿ ಹೋಗಿದೆ. ನಾವು ಯಾರೂ ನಿಮ್ಮ ಪರ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಚಲುವರಾಯಸ್ವಾಮಿ ತನಗೆ ಹೇಳಿದ್ದಾರೆ ಎಂದು ಜಿ.ಟಿ.ದೇವೇಗೌಡ ತಿಳಿಸಿದರು.
ಮಂಡ್ಯದಲ್ಲಿ ನಾನು ಸೇರಿದಂತೆ ಎಲ್ಲರೂ ಕಾಂಗ್ರೆಸ್‍ನವರ ಜೊತೆ ಒಟ್ಟಿಗೆ ಹೋಗುವ ಪ್ರಯತ್ನ ಮಾಡಿದ್ದೇವೆ ಎಂದು ಅವರು ಹೇಳಿದರು. ಅಭ್ಯರ್ಥಿ ನಿಖಿಲ್, ಶಾಸಕ ಡಾ.ಕೆ.ಅನ್ನದಾನಿ, ಇತರ ಮುಖಂಡರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.