ರಾಜ್ಯದಲ್ಲಿ 2 ಕೋಟಿ ವಾಹನಗಳ ನೋಂದಣಿ
ಬೆಂಗಳೂರು, ಎ.2: ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಅಧಿಕವಾಗುತ್ತಿದ್ದು, ಇದುವರೆಗೂ ಸುಮಾರು 2.10 ಕೋಟಿ ವಾಹನಗಳು ನೋಂದಣಿಯಾಗಿವೆ.
2018 ರ ಮಾರ್ಚ್ ಅಂತ್ಯಕ್ಕೆ ರಾಜ್ಯದಲ್ಲಿ ಸರಿಸುಮಾರು 1.93 ಕೋಟಿ ವಾಹನಗಳು ನೋಂದಣಿಯಾಗಿದ್ದವು. ಆದರೆ, ಇದೀಗ ಅದರ ಸಂಖ್ಯೆ ಅಧಿಕವಾಗಿದ್ದು, 2.10 ಕೋಟಿಗೆ ಏರಿಕೆಯಾಗಿದೆ. ಅದರಲ್ಲಿಯೂ ಬೆಂಗಳೂರು ನಗರದಲ್ಲಿಯೇ 80.45 ಲಕ್ಷ ವಾಹನಗಳಿವೆ. ಬೆಂಗಳೂರಿನಲ್ಲಿ ನಿತ್ಯ 1,752 ಹೊಸವಾಹನಗಳು ರಸ್ತೆಗಿಳಿಯುತ್ತಿವೆ ಎಂದು ಸಾರಿಗೆ ಇಲಾಖೆಯ ಆಯುಕ್ತ ವಿ.ಪಿ.ಇಕ್ಕೇರಿ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ 1 ವರ್ಷದಲ್ಲಿ ರಾಜ್ಯದಲ್ಲಿ 16,90,860 ವಾಹನಗಳು ನೊಂದಣಿಯಾಗಿವೆ. ಈ ಪೈಕಿ 6,39,777 ವಾಹನಗಳು ಬೆಂಗಳೂರಿನಲ್ಲಿ ನೋಂದಣಿಗೊಂಡಿವೆ. ಪ್ರತಿನಿತ್ಯ ಅಂದಾಜು 1,752 ಹೊಸ ವಾಹನ ರಸ್ತೆಗಿಳಿಯುತ್ತಿವೆ. ರಾಜ್ಯದಲ್ಲಿ 1.52 ಕೊಟಿ ದ್ವಿಚಕ್ರ ವಾಹನಗಳಿದ್ದು, ಬೆಂಗಳೂರಿನಲ್ಲೆ 55 ಲಕ್ಷ ಇವೆ. ರಾಜ್ಯದಲ್ಲಿ 24.79 ಲಕ್ಷ ಕಾರುಗಳಿದ್ದು, ಬೆಂಗಳೂರಿನಲ್ಲೆ 15.31 ಲಕ್ಷ ಕಾರುಗಳಿವೆ ಎಂದು ಮಾಹಿತಿ ನೀಡಿದ್ದಾರೆ.
2 ಸ್ಟ್ರೋಕ್ ವಾಹನ ನಿಷೇಧ: 2020 ಮಾ.31ರ ನಂತರ ದೇಶಾದ್ಯಂತ 2 ಸ್ಟ್ರೋಕ್ ವಾಹನ ರದ್ದಾಗಲಿದೆ. ಈ ಅವಧಿಯೊಳಗೆ ಎಲ್ಲ 2 ಸ್ಟ್ರೋಕ್ ವಾಹನಗಳು 4 ಸ್ಟ್ರೋಕ್ ವಾಹನಗಳಾಗಿ ಪರಿವರ್ತಿಸಬೇಕು ಅಥವಾ ವಾಹನ ಬದಲಾಯಿಸಬೇಕು. ಗ್ಯಾಸ್ ಕಿಟ್ ಅಳವಡಿಸಿದ 2 ಸ್ಟ್ರೋಕ್ ಆಟೋಗಳನ್ನು ರದ್ಧು ಮಾಡಲಾಗುತ್ತದೆ. ಬದಲಿಸಿದಿದ್ದಲ್ಲಿ ಕಾರ್ಯಾಚರಣೆ ಮಾಡಿ ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.