ರಾಜ್ಯದ ಆರು ಕಡೆ ಖಾಯಂ ಜನತಾ ನ್ಯಾಯಾಲಯ
ದಾವಣಗೆರೆ, ಎ.2: ರಾಜ್ಯದ ಆರು ಕಡೆಗಗಳಲ್ಲಿ ಖಾಯಂ ಜನತಾ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿ ವಿವಿಧ ಒಂಬತ್ತು ಸೇವೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವ್ ಕುಮಾರ್ ಹಂಚಾಟೆ ತಿಳಿಸಿದ್ದಾರೆ.
ಜಿಲ್ಲಾ ನ್ಯಾಯಾಲಯದ ವೀಡಿಯೊ ಕಾನ್ಫರೆನ್ಸ್ ಸಭಾಂಗಣದಲ್ಲಿ ಮಾಧ್ಯಮದ ಮಿತ್ರರಿಗೆ ಏರ್ಪಡಿಸಿದ್ದ ವೀಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.
ಸಾರ್ವಜನಿಕ ಉಪಯುಕ್ತತೆಗಳ ವಿವಾದ ಗಳನ್ನು ನಿರ್ಧರಿಸುವಲ್ಲಿ ಖಾಯಂ ಜನತಾ ನ್ಯಾಯಾಲಯ ಪ್ರಮುಖ ಪಾತ್ರ ವಹಿಸಲಿದೆ. ಮತ್ತು ಸ್ವತಂತ್ರ ಹಾಗೂ ನಿಷ್ಪಕ್ಷಪಾತವಾದ ವಿವಾದದ ಸೌಹಾರ್ದಯುತವಾಗಿ ಪರಿಹರಿಸಲು ಪೂರಕವಾಗಲಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಕಾನೂನು ಸೇವೆಗಳು ಸೇರಿದಂತೆ ಖಾಯಂ ಜನತಾ ನ್ಯಾಯಾಲಯಗಳ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ ಎಂದು ಸಂಜೀವ್ ಕುಮಾರ್ ಹಂಚಾಟೆ ತಿಳಿಸಿದರು.
ಈ ವೇಳೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಾಬಪ್ಪ, ಮಾಧ್ಯಮದ ಪ್ರತಿನಿಧಿಗಳು ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು.
ಎಲ್ಲೆಲ್ಲಿ ಯಾರು ದೂರು ದಾಖಲಿಸಬಹುದು?
ಕರ್ನಾಟಕ ರಾಜ್ಯದಲ್ಲಿ ಆರು ಖಾಯಂ ಜನತಾ ನ್ಯಾಯಾಲಯಗಳಿವೆ. ಬೆಂಗಳೂರಿನಲ್ಲಿರುವ ಖಾಯಂ ಜನತಾ ನ್ಯಾಯಾಲಯದ ವ್ಯಾಪ್ತಿಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ ಮತ್ತು ತುಮಕೂರು ಜಿಲ್ಲೆಗಳ ಜನರು ದೂರು ದಾಖಲಿಸಬಹುದಾಗಿದೆ. ಬೆಳಗಾವಿಯ ನ್ಯಾಯಾಲಯದಲ್ಲಿ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳು, ಮೈಸೂರು ನ್ಯಾಯಾಲಯದಲ್ಲಿ ಮೈಸೂರು, ಕೊಡಗು, ಚಾಮರಾಜನಗರ, ಹಾಸನ, ಮತ್ತು ಮಂಡ್ಯ ಜಿಲ್ಲೆಗಳು, ಮಂಗಳೂರು ನ್ಯಾಯಾಲಯದಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಮತ್ತು ಶಿವಮೊಗ್ಗದ ಜನರು, ಧಾರವಾಡ ನ್ಯಾಯಾಲಯದಲ್ಲಿ ಬಳ್ಳಾರಿ ಧಾರವಾಡ, ದಾವಣಗೆರೆ, ಹಾವೇರಿ, ಗದಗ, ಕೊಪ್ಪಳ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಹಾಗೂ ಕಲಬುರಗಿ ನ್ಯಾಯಾಲಯದಲ್ಲಿ ಕಲಬುರಗಿ, ವಿಜಯಪುರ, ಬೀದರ್, ಮತ್ತು ರಾಯಚೂರು ಜಿಲ್ಲೆಗಳ ಜನರು ದೂರುಗಳನ್ನು ದಾಖಲಿಸಬಹುದು ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವ್ ಕುಮಾರ್ ಹಂಚಾಟೆ ಮಾಹಿತಿ ನೀಡಿದರು.
ಯಾವ ಪ್ರಕರಣಗಳು ದಾಖಲಿಸಬಹುದು?
ಪ್ರಯಾಣಿಕರನ್ನು ಅಥವಾ ಸರಕುಗಳನ್ನು ಸಾಗಿಸುವ ವಾಯುಮಾರ್ಗ, ರಸ್ತೆ ಅಥವಾ ನೀರಿನ ಮೂಲಕ ಸಾಗಿಸುವ ಸಾಗಣೆ ಸೇವೆ, ಅಂಚೆ, ಟೆಲಿಗ್ರಾಫ್ ಅಥವಾ ದೂರವಾಣಿ ಸೇವೆ, ಸಾರ್ವಜನಿಕ ವಿದ್ಯುತ್, ಬೆಳಕು ಅಥವಾ ನೀರಿನ ಸರಬರಾಜು ಮಾಡುವ ಯಾವುದೇ ಸಂಸ್ಥೆ, ಸಾರ್ವಜನಿಕ ಸಂರಕ್ಷಣೆ ಅಥವಾ ನೈರ್ಮಲ್ಯ ವ್ಯವಸ್ಥೆ, ಆಸ್ಪತ್ರೆ ಅಥವಾ ವಿತರಣೆ ಅಥವಾ ಸೇವೆ, ವಿಮೆ ಸೇವೆ, ಬ್ಯಾಂಕಿಂಗ್ ಹಾಗೂ ಹಣಕಾಸು ಸಂಸ್ಥೆಗಳು, ವಸತಿ ಮತ್ತು ರಿಯಲ್ ಎಸ್ಟೇಟ್ ಸೇವೆ ಸೇರಿದಂತೆ ಶಿಕ್ಷಣ ಸೇವೆಗಳನ್ನು ಸಾರ್ವಜನಿಕ ಉಪಯುಕ್ತತೆಯ ಒಂತ್ತು ಸೇವೆಗಳಲ್ಲಿ ವ್ಯತ್ಯಾಸ ಅಥವಾ ಅಹವಾಲುಗಳಿದ್ದಲ್ಲಿ ಖಾಯಂ ಜನತಾ ನ್ಯಾಯಾಲಯಗಳಲ್ಲಿ ದಾಖಲಿಸಬಹುದು. ಮತ್ತು ಶೀಘ್ರ ಮತ್ತು ಉಚಿತವಾಗಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು.
ದೂರು ಸಲ್ಲಿಸಲಾಗದ ಪ್ರಕರಣಗಳು
ಸಿವಿಲ್ ದೂರುಗಳನ್ನು ಜನತಾ ನ್ಯಾಯಾಲಯಗಳಲ್ಲಿ ದಾಖಲಿಸಲಾಗುವುದಿಲ್ಲ. ಅಲ್ಲದೆ, ಪ್ರಕರಣದ ಸಂಬಂಧ ಬೇರೆ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ದೂರುಗಳನ್ನು ಈ ನ್ಯಾಯಾಲಯದಲ್ಲಿ ಪರಿಹಾರ ಕೋರಿ ದೂರು ದಾಖಲಿಸುವಂತಿಲ್ಲ.
ದೂರು ದಾಖಲಿಸುವುದು ಹೇಗೆ?
ವಿವಿಧ ಒಂಬತ್ತು ಸೇವೆಗಳ ಬಗ್ಗೆ ಖಾಯಂ ಜನತಾ ನ್ಯಾಯಾಲಯದಲ್ಲಿ ದೂರು ದಾಖಲಿಸಬೇಕಾಗಿದ್ದಲ್ಲಿ, ಒಂದು ಬಿಳಿ ಹಾಳೆಯ ಮೇಲೆ ಸರಳವಾಗಿ ಬರೆದು ಯಾವುದೇ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸಬೇಕು.