ಅಭಿವೃದ್ಧಿ ಕಾರ್ಯಗಳೇ ಗೆಲುವಿಗೆ ಶ್ರೀರಕ್ಷೆ: ಸಂಸದ ಧ್ರುವನಾರಾಯಣ್

Update: 2019-04-02 17:56 GMT

ಹನೂರು, ಎ.2: ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ಉತ್ತಮ ಕೊಡುಗೆಗಳನ್ನು ನೀಡಿದ್ದು, ಈ ಲೋಕಸಭಾ ಚುನಾವಣೆಯ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಲೊಕ್ಕನಹಳ್ಳಿ ಮತ್ತು ಹನೂರಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ವೃದ್ಧಾಪ್ಯ ಭತ್ಯೆ, ವಿಧವಾ ವೇತನ, 20 ಅಂಶಗಳ ಕಾರ್ಯಕ್ರಮಗಳನ್ನು ತಂದರು. ಕೇವಲ ಶ್ರೀಮಂತರಿಗೆ ಮೀಸಲಾಗಿದ್ದ ಬ್ಯಾಂಕಿಂಗ್ ವ್ಯವಸ್ಥೆಯನ್ನು ರಾಷ್ಟ್ರೀಕರಣಗೊಳಿಸುವ ಮೂಲಕ ಕ್ರಾಂತಿ ಮಾಡಿದರು. ಉಳುವವನೇ ಭೂಮಿಯ ಒಡೆಯ ಮತ್ತು ಜೀತ ಪದ್ಧತಿ ನಿರ್ಮೂಲನೆ ಮಾಡಿದ್ದರು ಎಂದು ತಿಳಿಸಿದರು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ, ಉಚಿತ ಮತ್ತು ಕಡ್ಡಾಯ ಶಿಕ್ಷಣ, ಆಹಾರ ಭದ್ರತೆಯಂತಹ ಖಾಯ್ದೆ ತರುವ ಮೂಲಕ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. 

ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಹಾಗು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಭಿವೃದ್ಧಿಗಾಗಿ ಪ್ರತಿ ವರ್ಷ 27 ರಿಂದ 28 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದರು. ಹಲವಾರು ಹಿಂದುಳಿದ ಜಾತಿಗಳ ಅಭಿವೃದ್ಧಿಗಾಗಿ ನಿಗಮಗಳ ಸ್ಥಾಪನೆ ಮಾಡಿ ಜಯಂತಿಗಳನ್ನು ಸರಕಾರ ಆಚರಿಸುವಂತೆ ಮಾಡಲಾಗಿದೆ ಎಂದರು.

ಮೋದಿ ಸರಕಾರ ಶ್ರೀಮಂತರಿಗೆ ಸೀಮಿತ: ಬಿಜೆಪಿ ಸರಕಾರ ದೊಡ್ಡ ದೊಡ್ಡ ಉದ್ಯಮಿಗಳು, ಶ್ರೀಮಂತರು ಕಟ್ಟಬೇಕಾಗಿದ್ದ 3 ಲಕ್ಷ ಕೋಟಿ ರೂ. ಮನ್ನಾ ಮಾಡುವ ಮೂಲಕ ದೇಶದ ಶ್ರೀಮಂತರ ಪರ ಕೆಲಸ ಮಾಡಿದ್ದಾರೆ. ಬಡವರ, ರೈತರ, ದೀನದಲಿತರ ಪರವಾಗಿ ಯಾವುದೇ ಜನಪ್ರಿಯ ಕೆಲಸಗಳನ್ನು ಮಾಡದೆ ಕೇವಲ ಪ್ರಚಾರ ಮತ್ತು ಸುಳ್ಳು ಭರವಸೆ ನೀಡುವ ಮೂಲಕ ದೇಶದ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಶಿವಣ್ಣ, ಜಿಪಂ ಅಧ್ಯಕ್ಷೆ ಶಿವಮ್ಮ, ಸದಸ್ಯ ಬಸವರಾಜು, ಮರುಗದಮಣಿ, ಚಾಮುಲ್ ಅಧ್ಯಕ್ಷ ಗುರುಮಲ್ಲಪ್ಪ, ನಿರ್ದೇಶಕ ನಂಜುಂಡಸ್ವಾಮಿ, ಮಾಜಿ ಜಿಪಂ ಸದಸ್ಯೆ ರಾಧಾಮಣಿ, ರಾಜೇಂದ್ರ, ರುಕ್ಮಿಣಿ, ಜವಾದ್ ಅಹ್ಮದ, ಸಿ.ಗಿರೀಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ನಟರಾಜು, ಮಂಗಲ ಪುಟ್ಟರಾಜು, ಚೆಲುವರಾಜು, ಲೊಕ್ಕನಹಳ್ಳಿ ರವಿ, ಸಿದ್ದರಾಜು, ಸತೀಶ್, ಅಶ್ವಥ್ ಮೊದಲಾದವರು ಉಪಸ್ಥಿತರಿದ್ದರು.

ಜನಪರ ಕೆಲಸಕ್ಕೆ ಒತ್ತು

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ, ಕೃಷಿ ಕಾಲೇಜು, ಕೇಂದ್ರೀಯ ವಿದ್ಯಾಲಯ, ವೈದ್ಯಕೀಯ ಕಾಲೇಜು, ಆದರ್ಶ ಶಾಲೆ, ಸಮುದಾಯಭವನಗಳು ಮುಂತಾದ ಜನಪರ ಯೋಜನೆಗಳನ್ನು ತನ್ನ ಅವಧಿಯಲ್ಲಿ ತರಲಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ಹೇಳಿದರು.

ಮೋದಿಯವರು ವಿದೇಶ ಪ್ರವಾಸ ಮಾಡಿ ಅಲ್ಲಿಯ ಪ್ರಧಾನಿ ಮತ್ತು ಅಧ್ಯಕ್ಷರ ಜೊತೆ ಫೋಟೊ ತೆಗೆಸಿಕೊಂಡಿದ್ದೇ ಸಾಧನೆ. ಚುನಾವಣೆ ಹತ್ತಿರ ಬಂದ ಸಂದರ್ಭದಲ್ಲಿ ರೈತರ ಮನವೊಲಿಸಲು 6,000 ರೂ. ರೈತರ ಖಾತೆಗೆ ಹಣ ಹಾಕುವ ಯೋಜನೆ ತಂದು ಮೋಸ ಮಾಡುತ್ತಿದ್ದಾರೆ.

-ನರೇಂದ್ರ ರಾಜೂಗೌಡ, ಹನೂರು ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News