ಶಿವಮೊಗ್ಗ: 2 ಕೋಟಿ ರೂ. ಪತ್ತೆ ಪ್ರಕರಣ; ಬ್ಯಾಂಕ್ ಮ್ಯಾನೇಜರ್ ಗಳ ವಿರುದ್ಧ ಶಿಸ್ತು ಕ್ರಮಕ್ಕೆ ಡಿಸಿ ಸೂಚನೆ
ಶಿವಮೊಗ್ಗ, ಏ. 2: ಜಿಲ್ಲೆಯ ಸಾಗರ ತಾಲೂಕಿನ ಹೊಸನಗರ ರಸ್ತೆಯಲ್ಲಿ ಇತ್ತೀಚೆಗೆ ಖಾಸಗಿ ಕಾರೊಂದರಲ್ಲಿ ಪತ್ತೆಯಾದ 2 ಕೋಟಿ ರೂ. ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‍ನ ಹೊಸನಗರ ಹಾಗೂ ಸಾಗರ ಶಾಖೆಗಳ ಇಬ್ಬರು ಮ್ಯಾನೇಜರ್ ಗಳ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ಕೆ.ಎ.ದಯಾನಂದ್‍ರವರು ಬ್ಯಾಂಕ್‍ನ ಜನರಲ್ ಮ್ಯಾನೇಜರ್ ಗೆ ಸೂಚಿಸಿದ್ದಾರೆ.
ಈ ಕುರಿತಂತೆ ಡಿಸಿ ಅವರು ಬಳ್ಳಾರಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಜನರಲ್ ಮ್ಯಾನೇಜರ್ ಗೆ ಪತ್ರ ಬರೆದಿದ್ದು, 'ಲೋಕಸಭೆ ಮಾದರಿ ನೀತಿ-ಸಂಹಿತೆ ಜಾರಿಯಲ್ಲಿರುವ ವೇಳೆ ಚುನಾವಣಾ ಆಯೋಗದ ನಿಯಮಾವಳಿಗಳಿಗೆ ವಿರುದ್ಧವಾಗಿ, ಕನಿಷ್ಠ ಭದ್ರತಾ ವ್ಯವಸ್ಥೆಯೂ ಇಲ್ಲದೆ 2 ಕೋಟಿ ರೂ. ಮೊತ್ತ ಸಾಗಾಟ ಮಾಡುವುದು ಚುನಾವಣಾ ಆಯೋಗದ ಎಸ್.ಓ.ಪಿ. ನಿಯಮಗಳಿಗೆ ವಿರುದ್ಧವಾದುದಾಗಿದೆ. ಹಾಗೆಯೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿಯಮಗಳ ಪಾಲನೆಯಾಗಿಲ್ಲ. ಜಿಲ್ಲಾಡಳಿತ ನೀಡಿದ್ದ ನೋಟೀಸ್‍ಗೆ ಬ್ಯಾಂಕ್‍ನವರು ನೀಡಿರುವ ಉತ್ತರದಲ್ಲಿ ಲೋಪವಾಗಿರುವುದನ್ನು ಮ್ಯಾನೇಜರ್ ಗಳು ಒಪ್ಪಿಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದ, ತಮ್ಮ ಬ್ಯಾಂಕ್‍ನ ಹೊಸನಗರ ಹಾಗೂ ಸಾಗರ ಶಾಖೆಯ ಮ್ಯಾನೇಜರ್ ಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿ, ತಮಗೆ ವರದಿ ನೀಡಬೇಕು ಎಂದು ಬ್ಯಾಂಕ್ ಜನರಲ್ ಮ್ಯಾನೇಜರ್ ಗೆ ಬರೆದ ಪತ್ರದಲ್ಲಿ ಡಿ.ಸಿ. ಆದೇಶಿಸಿದ್ದಾರೆ.
ಲೋಪಗಳ ಪಟ್ಟಿ: ಡಿಸಿಯವರು ಜನರಲ್ ಮ್ಯಾನೇಜರ್ ಗೆ ಬರೆದಿರುವ ಪತ್ರದಲ್ಲಿ, ಹಣ ಸಾಗಾಟದ ವೇಳೆ ಕಂಡುಬಂದ ಹಲವು ಲೋಪಗಳ ವಿವರ ನಮೂದಿಸಿದ್ದಾರೆ. 'ದೊಡ್ಡ ಮೊತ್ತದ ಹಣ ಸಾಗಾಣೆ ವೇಳೆ ಹೊಂದಿರಬೇಕಾದ ಅಗತ್ಯ ದಾಖಲಾತಿ ಹೊಂದಿಲ್ಲದಿರುವುದು ಹಾಗೂ ಕೇಂದ್ರ ಚುನಾವಣಾ ಆಯೋಗದ ಎಸ್.ಓಪಿ ನಿಯಮ ಪಾಲಿಸದ ವಿಷಯವನ್ನು ಆದಾಯ ತೆರಿಗೆ ಇಲಾಖೆ ಕೂಡ ತನ್ನ ವರದಿಯಲ್ಲಿ ನಮೂದಿಸಿದೆ.
ಹೊಸನಗರ ಶಾಖೆಯವರು ಹಣ ಸಾಗಾಣೆ ವೇಳೆ ಸೂಕ್ತ ಭದ್ರತೆ ಮಾಡಿಕೊಂಡಿಲ್ಲ. ಈ ಬಗ್ಗೆ ಚುನಾವಣಾಧಿಕಾರಿಗಳ ಜೊತೆ ಪತ್ರ ವ್ಯವಹಾರ ನಡೆಸಿಲ್ಲ. ಹಣ ಸಾಗಿಸುತ್ತಿದ್ದ ವಾಹನ ಕೂಡ ಬ್ಯಾಂಕ್‍ಗೆ ಸಂಬಂಧಿಸಿದ್ದಲ್ಲ. ಹಣ ಸಾಗಾಣೆಗೂ ಮುನ್ನ ರೂಟ್ ಮ್ಯಾಪ್ ಮಾಡಿ, ಬ್ಯಾಂಕ್‍ನ ಮೇಲಾಧಿಕಾರಿಗಳ ಅನುಮತಿ ಪಡೆದುಕೊಂಡಿಲ್ಲ. ಹಣದ ವ್ಯವಹಾರ ಬಗ್ಗೆ ವಾಹನದಲ್ಲಿದ್ದ ಬ್ಯಾಂಕ್ ಸಿಬ್ಬಂದಿಗಳು ಹಾಜರುಪಡಿಸಿದ ಕ್ಯಾಶ್ ಇಂಡೆಂಟ್‍ನಲ್ಲಿ ತಿದ್ದುಪಡಿಗಳು ಕಂಡುಬಂದಿವೆ. ದಾಖಲೆ -1 ರಲ್ಲಿ 1 ಕೋಟಿ ರೂ. ಎಂದಿರುವುದನ್ನು ಅಕ್ಷರದಲ್ಲಿ ಹಾಗೂ ಸಂಖ್ಯೆಯಲ್ಲಿ 2 ಕೋಟಿ ರೂ. ಎಂದು ತಿದ್ದುಪಡಿ ಮಾಡಲಾಗಿದೆ. ದಾಖಲೆ - 2 ರ ಕ್ಯಾಷ್ ಇಂಡೆಂಟ್, ಕಲೆಕ್ಷನ್ ಮೂಲಪ್ರತಿಯಲ್ಲಿಯೂ 1 ಕೋಟಿ ಎಂದಿರುವ ಸಂಖ್ಯೆ ಹಾಗೂ ಅಕ್ಷರವನ್ನು 2 ಕೋಟಿ ಎಂದು ತಿದ್ದಲಾಗಿದೆ.
ದಾಖಲೆ - 3 ಕ್ಯಾಷ್ ಇಂಡೆಂಟ್ ಕಲೆಕ್ಷನ್ ಪ್ರತಿಯ ಎಡಭಾಗದ ಇಂಡೆಂಟ್‍ನಲ್ಲಿ 1 ಕೋಟಿ ನಮೂದಾಗಿದ್ದು, ಬಲಭಾಗದ ರಿಮಿಟೆಡ್ ಭಾಗದಲ್ಲಿ ಡಿನಾಮಿನೇಷನ್ ಮೊತ್ತದಲ್ಲಿ ತಿದ್ದುಪಡಿಗಳು ಆಗಿದ್ದು, ರಿಮಿಟೆಡ್ ಮೊತ್ತವು 2 ಕೋಟಿ ಎಂದು ನಮೂದಾಗಿದೆ. ಹಾಗೂ ಅದೇ ಪ್ರತಿಯಲ್ಲಿ ಕಲೆಕ್ಟೆಡ್ 1 ಕೋಟಿ ರೂ.ಗಳಿರುವುದು, 2 ಕೋಟಿ ಎಂದು ತಿದ್ದುಪಡಿ ಮಾಡಲಾಗಿದೆ.
ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿಗಳು, ಸುಮಾರು ಸಂಜೆ 5 ರ ಸುಮಾರಿ ಗೆ ಹಣ ಸಾಗಿಸುತ್ತಿದ್ದ ವಾಹನವನ್ನು ಸಾಗರದಿಂದ 8 ಕಿ.ಮೀ. ದೂರದಲ್ಲಿ ತಪಾಸಣೆಗೊಳಪಡಿಸಿದ್ದಾರೆ. ಆದರೆ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‍ನ ಶಿವಮೊಗ್ಗ ಪ್ರಾದೇಶಿಕ ಕಚೇರಿಯು ಸಂಜೆ 4.48 ಗಂಟೆಗೆ ಸಾಗರ ಶಾಖೆಗೆ ಇ-ಮೇಲ್ ಮಾಡಿದೆ. 32 ನಿಮಿಷಗಳಲ್ಲಿ 1 ಕೋಟಿ ರೂ. ಹಣ ವ್ಯವಸ್ಥೆ ಮಾಡಿಕೊಂಡು ಹೋಗಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ ಎಂದು ಜಿಲ್ಲಾಧಿಕಾರಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯವರು ಬ್ಯಾಂಕ್ ಮ್ಯಾನೇಜರ್‌ಗಳಿಗೆ ಬರೆದಿರುವ ಪತ್ರದಲ್ಲಿ ವಿವರಿಸಿರುವ ಅನುಮಾನಗಳನ್ನು ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಒಪ್ಪಿಕೊಂಡಿದ್ದು, ಡಿಸಿಯವರಿಗೆ ಹಿಂಬರಹ ಬರೆದಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ಚುನಾವಣಾ ಆಯೋಗದ ಎಸ್‌ಒಪಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದಾಗಿ ತಿಳಿಸಿದ್ದಾರೆ.
ಖಾಸಗಿ ಕಾರಿನಲ್ಲಿ ಪತ್ತೆಯಾಗಿತ್ತು ಭಾರೀ ಮೊತ್ತದ ಹಣ
ಕಳೆದ ಮಾ. 21ರಂದು ಸಾಗರ ತಾಲೂಕಿನ ಹೊಸನಗರ ರಸ್ತೆಯ ಅಮಟೆಕೊಪ್ಪ ಬಳಿ ಖಾಸಗಿ ಕಾರೊಂದರಲ್ಲಿ ಕೊಂಡೊಯ್ಯುತ್ತಿದ್ದ 2 ಕೋಟಿ ರೂ.ಗಳನ್ನು ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ವಶಪಡಿಸಿಕೊಂಡಿತ್ತು. ಕಾರಿನಲ್ಲಿದ್ದ ಪ್ರಗತಿ ಗ್ರಾಮೀಣ ಬ್ಯಾಂಕ್ ಸಹಾಯಕ ವ್ಯವಸ್ಥಾಪಕರು, ಇದು ಬ್ಯಾಂಕ್‌ಗೆ ಸೇರಿದ ಹಣವೆಂದು ತಿಳಿಸಿದ್ದರು. ಆದರೆ ಸೂಕ್ತ ದಾಖಲಾತಿ ಹಾಜರುಪಡಿಸಿರಲಿಲ್ಲ. ಜೊತೆಗೆ ಖಾಸಗಿ ಕಾರಿನಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಮೊತ್ತ ಸಾಗಿಸುತ್ತಿರುವುದು ಕೂಡ ಹಲವು ಅನುಮಾನಕ್ಕೆಡೆ ಮಾಡಿಕೊಟ್ಟಿತ್ತು.
ಐ.ಟಿ ಬಗ್ಗೆ ಆಕ್ಷೇಪಿಸಿದ್ದ ಸಿಎಂ
2 ಕೋಟಿ ರೂ. ಪ್ರಕರಣದ ತನಿಖೆಯ ಬಗ್ಗೆ, ಆದಾಯ ತೆರಿಗೆ ಇಲಾಖೆ ನಡೆದುಕೊಂಡ ರೀತಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಇತ್ತೀಚೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಐ.ಟಿ. ಇಲಾಖೆಯ ಕಾರ್ಯವೈಖರಿಯ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದರು. ಸಿಎಂ ಹೇಳಿಕೆಯ ನಂತರ, ಈ ಪ್ರಕರಣವು ಸಾರ್ವಜನಿಕ ವಲಯದಲ್ಲಿ ಹಲವು ರೀತಿಯ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿತ್ತು.