ಮೋದಿಯ ಜನ ವಿಭಜಕ ರಾಜಕಾರಣ

Update: 2019-04-02 18:31 GMT

ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ದೇಶದ ಪ್ರಧಾನಿಯಾಗಲು ಹೊರಟಿದ್ದ ನರೇಂದ್ರ ಮೋದಿಯವರು ‘‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’’ ಎಂಬ ಘೋಷಣೆಯನ್ನು ಮಾಡಿದ್ದರು. ಅದು ಅವರ ಹೃದಯಾಂತರಾಳದಿಂದ ಬಂದ ಮಾತಾಗಿರಲಿಲ್ಲ. ಆದರೂ ಬಿಜೆಪಿ ಶೇ. 31ರಷ್ಟು ಜನರ ಮತ ಪಡೆಯಿತು. ಬಹುಮತ ಪಡೆದ ಮೋದಿ ದೇಶದ ಪ್ರಧಾನ ಮಂತ್ರಿಯಾದರು.

ಮೋದಿ ಆಡಳಿತದಲ್ಲಿ ದೇಶ ಸುಭಿಕ್ಷವಾಗಿರುತ್ತದೆ. ಎಲ್ಲರ ಕೈಗೂ ಕೆಲಸ, ಎಲ್ಲರಿಗೂ ಮನೆ, ಬೆಲೆ ಏರಿಕೆ ನಿಯಂತ್ರಣ, ಭ್ರಷ್ಟಾಚಾರಕ್ಕೆ ಕಡಿವಾಣ ಇವೆಲ್ಲವೂ ಈಡೇರುತ್ತವೆ ಎಂದು ಜನರು ನಂಬಿದ್ದರು. ಆದರೆ ಜನರಿಗೆ ನೀಡಿದ ಯಾವ ಭರವಸೆಯೂ ಈಡೇರಲಿಲ್ಲ. ವಿದೇಶದ ಕಪ್ಪುಹಣವೂ ಸ್ವದೇಶಕ್ಕೆ ಬರಲಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಹುಸಿಯಾಯಿತು. ಐದು ವರ್ಷಗಳಲ್ಲಿ ಒಟ್ಟು ಎರಡು ಲಕ್ಷ ಉದ್ಯೋಗಗಳೂ ಸೃಷ್ಟಿಯಾಗಲಿಲ್ಲ.ಜೀವನಾವಶ್ಯಕ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ನೋಟು ಅಮಾನ್ಯೀಕರಣದಿಂದ ಜನರು ತೊಂದರೆಗೀಡಾದರು. ಜಿಎಸ್‌ಟಿಯಿಂದ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯಾಯಿತು. ಎಲ್ಲಕ್ಕಿಂತ ಮಿಗಿಲಾಗಿ ಮೋದಿ ಆಡಳಿತದಲ್ಲಿ ಜನ ಸಾಮಾನ್ಯರು ನೆಮ್ಮದಿಯಿಂದ ಇರಲಿಲ್ಲ. ಗೋ ರಕ್ಷಣೆ ಹೆಸರಿನಲ್ಲಿ ನಡೆಯುವ ಅಮಾಯಕರ ಮೇಲಿನ ದಾಳಿಗಳಿಗೆ ಅನೇಕರು ಬಲಿಯಾದರು. ದಲಿತರು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿರಿಸಿಕೊಂಡು ಈ ಹಲ್ಲೆಗಳು ನಡೆದವು. ಲವ್ ಜಿಹಾದ್ ಹೆಸರಲ್ಲಿ ಯುವಕರ ಪ್ರಾಣ ಹಿಂಡಲಾಯಿತು.

ಹೀಗಾಗಿ ಈ ಚುನಾವಣೆಯಲ್ಲಿ ಜನರ ಮುಂದೆ ಹೇಳಿಕೊಳ್ಳುವ ಯಾವ ಸಾಧನೆಗಳಿಲ್ಲದೆ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಹಿಂದೂ ವೋಟುಬ್ಯಾಂಕ್ ನಿರ್ಮಿಸಿ ಮತ್ತೆ ಅಧಿಕಾರಕ್ಕೆ ಬರಲು ಮೋದಿಯವರು ಹಿಂದೂ ಕೋಮುವಾದದ ಮೊರೆ ಹೋಗಿದ್ದಾರೆ. ‘ಸಬ್ ಕಾ ಸಾಥ್’ ಬದಲಿಗೆ ಹಿಂದುತ್ವದ ಕೂಗು ಮೊಳಗುತ್ತಿದೆ. ನಾನು ಹಿಂದೂ, ನೀನು ಮುಸ್ಲಿಂ, ಅವನು ಕ್ರೈಸ್ತ ಎಂದು ಜನರನ್ನು ಒಡೆದು ವೋಟು ಬಾಚಿಕೊಳ್ಳುವ ಸಣ್ಣತನಕ್ಕೆ ಮೋದಿ ಕೈಹಾಕಿದ್ದಾರೆ. ವಾರ್ದಾ ನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಹಿಂದೂಗಳಿಗೆ ಭಯೋತ್ಪಾದಕರೆಂಬ ಹಣೆಪಟ್ಟಿಯನ್ನು ಕಾಂಗ್ರೆಸ್ ನಾಯಕರು ಕಟ್ಟುತ್ತಿದ್ದಾರೆ ಎಂದು ಮೋದಿ ಟೀಕಿಸಿದ್ದಾರೆ. ಇಷ್ಟಕ್ಕೇ ನಿಲ್ಲದೆ ಬಹುಸಂಖ್ಯಾತ ಮತಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ನಾಯಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿಯನ್ನು ಟೀಕಿಸಿದ್ದಾರೆ

ಪ್ರಧಾನ ಮಂತ್ರಿ ಸ್ಥಾನದಲ್ಲಿ ಕುಳಿತ ವ್ಯಕ್ತಿಗೆ ತಾನು ಏನು ಮಾತಾಡುತ್ತಿದ್ದೇನೆಂಬ ಅರಿವಿರಬೇಕು. ಮೋದಿಗೆ ಅರಿವಿಲ್ಲವೆಂದಲ್ಲ, ಆದರೆ ತಮ್ಮ ಸರಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಉದ್ದೇಶದಿಂದ ಇಂತಹ ಮಾತುಗಳನ್ನು ಅವರು ಆಡುತ್ತಿದ್ದಾರೆ. ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಾದಾಗಲೂ ಅವರು ಇದೇ ರೀತಿ ಮಾತಾಡಿದ್ದರು. ಪ್ರಧಾನಿಯೇ ಹೀಗೆ ಮಾತಾಡತೊಡಗಿದರೆ ದೇಶವ್ಯಾಪಿಯಾಗಿ ಅವರ ಅನುಯಾಯಿಗಳು ಇನ್ನೆಂಥ ಮಾತುಗಳನ್ನು ಆಡಲು ಸಾಧ್ಯ?

ಚುನಾವಣೆ ಹೊಸ್ತಿಲಲ್ಲಿ ಪ್ರಧಾನಮಂತ್ರಿ ತನ್ನನ್ನು ದೇಶದ ಚೌಕಿದಾರ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆ. ಅವರನ್ನು ಅನುಸರಿಸಿ ಊರೂರಲ್ಲಿ ಚೌಕಿದಾರರು ಹುಟ್ಟಿಕೊಂಡಿದ್ದಾರೆ. ಆದರೆ ಈ ಚೌಕಿದಾರರ ಸಮಕ್ಷಮದಲ್ಲೇ ವಿಜಯ ಮಲ್ಯ, ನೀರವ್ ಮೋದಿ, ಮಿತ್ತಲ್‌ಗಳು ನಮ್ಮ ಬ್ಯಾಂಕುಗಳನ್ನು ಕೊಳ್ಳೆ ಹೊಡೆದು ವಿದೇಶಕ್ಕೆ ಹಾರಿದರು. ರಫೇಲ್ ಹಗರಣದ ರಹಸ್ಯ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳವು ಆದವೆಂದು ಅಟಾರ್ನಿ ಜನರಲ್ ಸುಪ್ರೀಂ ಕೋರ್ಟ್‌ನಲ್ಲಿ ಒಪ್ಪಿಕೊಂಡರು. ಆನಂತರ ಜೆರಾಕ್ಸ್ ಮಾಡಲಾಯಿತು ಎಂದು ಸಮಜಾಯಿಷಿ ನೀಡಿದರು. ಇವೆಲ್ಲ ನಡೆಯುವಾಗ ಚೌಕಿದಾರರು ಏನು ಮಾಡುತ್ತಿದ್ದರೆಂದು ಜನರು ಕೇಳಬೇಕಾಗಿದೆ.

ಏನನ್ನೂ ಸಾಧಿಸಲಾಗದ ಪ್ರಧಾನಿ ಐದು ವರ್ಷಗಳ ಕಾಲ ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿ ರಕ್ಷಣೆ ಮಾಡಿ ಚುನಾವಣೆ ಬಂದಾಗ ಸೇನಾಪಡೆಯ ಸಾಧನೆಗಳನ್ನು ತನ್ನ ಸಾಧನೆಗಳು ಎಂದು ಹೇಳಿಕೊಳ್ಳುತ್ತಿದ್ದಾರೆ. ಮಿಶನ್ ಶಕ್ತಿಯ ಯಶಸ್ಸಿನ ಬಗ್ಗೆ ಡಿಆರ್‌ಡಿಒ ಬದಲಿಗೆ ಪ್ರಧಾನಿ ಪ್ರಕಟಿಸಿದ್ದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ ತಾನು ನೆಲ, ವಾಯು ಹಾಗೂ ಅಂತರಿಕ್ಷದ ಚೌಕಿದಾರ ಎಂದ ಮೋದಿ ಹೇಳಿದುದರ ಅರ್ಥವೇನು? ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಲ್ಲವೇ? ಚುನಾವಣಾ ಆಯೋಗ ಯಾಕೆ ಕಂಡೂ ಕಾಣದಂತೆ ಸುಮ್ಮನಿದೆ.?

ಈಗ ದೇಶದಲ್ಲಿ ವ್ಯಕ್ತಿಪೂಜೆಯ ರಾಜಕಾರಣ ಆರಂಭವಾಗಿದೆ. ‘‘ಮೋದಿ ಎಂದರೆ ದೇಶ, ದೇಶವೆಂದರೆ ಮೋದಿ’’ ಎಂಬ ಮಾತುಗಳು ಅವರ ಹಿಂಬಾಲಕರಿಂದ ಕೇಳಿ ಬರುತ್ತಿವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತೀಯ ಸೇನೆಯನ್ನು ‘ಮೋದಿ ಸೇನೆ’ ಎಂದು ಕರೆದಿದ್ದಾರೆ. ಆದಿತ್ಯನಾಥರ ಮಾತು ಸೇನೆಗೆ ಮಾಡಿದ ಅವಮಾನವಲ್ಲದೆ ಬೇರೇನೂ ಅಲ್ಲ.

ಇನ್ನೊಂದೆಡೆ ಚುನಾವಣಾ ನೀತಿ ಸಂಹಿತೆಯನ್ನು ಧಿಕ್ಕರಿಸಿ ‘ಪಿ. ಎಂ. ನರೇಂದ್ರ ಮೋದಿ’ ಸಿನೆಮಾದ ಬಿಡುಗಡೆಗೆ ತಯಾರಿ ನಡೆದಿದೆ. ದಿಲ್ಲಿ ಹೈಕೋರ್ಟ್ ಕೂಡ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ತಕ್ಷಣ ಚುನಾವಣಾ ಆಯೋಗ ಮಧ್ಯೆ ಪ್ರವೇಶಿಸಿ ಈ ಸಿನೆಮಾದ ಬಿಡುಗಡೆಗೆ ತಡೆ ನೀಡಬೇಕು.

ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಸಂದರ್ಭದಲ್ಲಿ ಕೋಮು ವಿಭಜನೆಯ ಭಾಷೆಯಲ್ಲಿ ಮಾತಾಡುತ್ತಿರುವುದು ಆತಂಕದ ಸಂಗತಿಯಾಗಿದೆ. ಸೇನೆಯ ಸಾಧನೆಗಳನ್ನು, ವಿಜ್ಞಾನಿಗಳ ಸಾಧನೆಗಳನ್ನು ತನ್ನ ಸಾಧನೆಗಳೆಂದು ಹೇಳಿಕೊಳ್ಳಲು ಚುನಾವಣಾ ಆಯೋಗ ಅವಕಾಶ ನೀಡಬಾರದು.

ಇಂತಹ ಜನವಿಭಜಕ ಮಾತುಗಳು ಹಾಗೂ ಶಕ್ತಿಗಳ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಂಡರೆ ಸಾಲದು. ಜನರೂ ಇಂತಹ ಪ್ರವೃತ್ತಿ ವಿರುದ್ಧ ಸಿಡಿದೇಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News