ಸಿದ್ದರಾಮಯ್ಯ ಜಾತಿವಾದಿ, ನಾನು ರಾಷ್ಟ್ರವಾದಿ: ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ

Update: 2019-04-03 12:26 GMT

ಬೆಳಗಾವಿ, ಎ.3: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿವಾದಿ. ನಾನು ರಾಷ್ಟ್ರವಾದಿ. ಇದನ್ನು ಹೇಳಿದರೆ ಸಿಟ್ಟು ಬರುತ್ತದೆ. ಕುರುಬ ಸಮುದಾಯದ ಹೆಸರಿನಲ್ಲಿ ಅವರು ಉದ್ಧಾರವಾಗಿದ್ದಾರೆಂದು ಬಿಜೆಪಿ ಮುಖಂಡರ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಜಾತಿ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಅವರು ಎಷ್ಟು ಜನ ಕುರುಬರಿಗೆ ಅನುಕೂಲ ಮಾಡಿದ್ದಾರೆ. ಎಚ್.ವಿಶ್ವನಾಥ್, ಸಿ.ಎಚ್.ವಿಜಯಶಂಕರ್ ಅವರಿಗೆ ವಂಚನೆ ಮಾಡಿದ್ದಾರೆಂದು ದೂರಿದರು.

ಮೈಸೂರು ಕ್ಷೇತ್ರದಿಂದ ವಿಜಯಶಂಕರ್ ಅವರಿಗೆ ಟಿಕೆಟ್ ಕೊಡಿಸಿದ್ದು, ಸೋಲುವ ಕಡೆ ಕುರುಬ ಸಮುದಾಯದವರಿಗೆ ಟಿಕೆಟ್ ಕೊಡಿಸಿದ್ದಾರೆಂದು ಆರೋಪಿಸಿದ ಈಶ್ವರಪ್ಪ, ದಾವಣಗೆರೆ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಸೇರಿದಂತೆ ಯಾರಿಗೂ ಬೇಡವಾದ ಟಿಕೆಟನ್ನು ಕುರುಬರಿಗೆ ಕೊಡಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಕುರುಬ ಸಮುದಾಯವೊಂದಕ್ಕೆ ನಾನು ನಾಯಕನಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಅನೇಕ ಯೋಜನೆ ನೀಡಿದ್ದೆವು. ಸಿದ್ದರಾಮಯ್ಯ ಏನು ಮಾಡಿದ್ದಾರೆ ಹೇಳಲಿ. ಹಿಂದುಳಿದವರಿಗೆ ನೀಡಿದ ಕೊಡುಗೆ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.

ಹಿಂದುಳಿದ ವರ್ಗದವರಿಗೆ ನಮಗಿಂತ ಹೆಚ್ಚಿನ ಖರ್ಚನ್ನು ಮಾಡಿರುವುದನ್ನು ಅಂಕಿ-ಅಂಶಗಳ ಸಮೇತ ಸಾಬೀತುಪಡಿಸಿದರೆ, ಅವರು ಹೇಳಿದಂತೆ ಕೇಳುತ್ತೇನೆಂದು ಸವಾಲು ಹಾಕಿದ ಈಶ್ವರಪ್ಪ, ವೋಟ್ ಬ್ಯಾಂಕ್ ಆಗಿ ಅವರು ಕುರುಬ ಸಮಾಜವನ್ನು ಬಳಸಿಕೊಳ್ಳುತ್ತಿದ್ದಾರೆಂದು ಟೀಕಿಸಿದರು.

ಆಪರೇಷನ್ ಮಾಡಿಲ್ಲ: ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳುವಲ್ಲಿ ಆ ಪಕ್ಷಗಳು ವಿಫಲವಾಗಿವೆ. ಕೆಲ ಶಾಸಕರು ಮುಂಬೈಗೆ ತೆರಳಿ ಸರಕಾರದ ಮೇಲೆ ವಿಶ್ವಾಸವಿಲ್ಲ ಎಂದಿದ್ದಾರೆ. ಆದರೆ, ನಾವು ಯಾವುದೇ ಆಪರೇಷನ್ ಕಮಲ ನಡೆಸಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್-ಜೆಡಿಎಸ್ ನಮ್ಮನ್ನು ಜಾತಿವಾದಿಗಳು ಎನ್ನುತ್ತಾರೆ. ಇದೀಗ ಮಂಡ್ಯ ಪಕ್ಷೇತರ ಅಭ್ಯರ್ಥಿ ಜಾತಿ ಹೆಸರಿನ ಪ್ರಸ್ತಾಪ ಮಾಡುತ್ತಿದ್ದಾರೆ. ಶಿವರಾಮೇಗೌಡ ಹಾಗೂ ದೇವೇಗೌಡ ಜಾತಿ ಬಗ್ಗೆ ಮಾತನಾಡುತ್ತಾರೆ. ನಮ್ಮನ್ನು ಕೋಮುವಾದಿಗಳು ಎನ್ನುತ್ತಾರೆ. ಇದಕ್ಕೆ ಮಂಡ್ಯ ಜನತೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News