ಶಿವಮೊಗ್ಗ: ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆ

Update: 2019-04-03 14:05 GMT

ಶಿವಮೊಗ್ಗ, ಏ. 3: ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಬುಧವಾರ ಮಧು ಬಂಗಾರಪ್ಪರವರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಜಿಲ್ಲಾ ಚುನಾವಣಾಧಿಕಾರಿಯೂ ಆದ ಡಿಸಿ ಗೆ ನಾಮಪತ್ರ ಸಲ್ಲಿಸಿದರು. ಈ ಮೂಲಕ ಲೋಕಸಭೆ ಸಮರಕ್ಕೆ ಅಧಿಕೃತವಾಗಿ ಧುಮುಕಿದ್ದಾರೆ. 

ನಾಮಪತ್ರ ಸಲ್ಲಿಸುವ ವೇಳೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ್ ಉಪಸ್ಥಿತರಿದ್ದರು. 

ಬೃಹತ್ ಮೆರವಣಿಗೆ: ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಮಧು ಬಂಗಾರಪ್ಪರವರು ಬೃಹತ್ ಮೆರವಣಿಗೆ ನಡೆಸಿದರು. ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ರಾಮಣ್ಣ ಶ್ರೇಷ್ಠಿ ಪಾರ್ಕ್‍ನಿಂದ ಆರಂಭವಾದ ಮೆರವಣಿಗೆಯು ಗಾಂಧಿಬಜಾರ್, ಶಿವಪ್ಪನಾಯಕ ವೃತ್ತ, ಬಿ.ಹೆಚ್.ರಸ್ತೆ, ಅಮೀರ್ ಅಹಮದ್ ವೃತ್ತ, ನೆಹರೂ ರಸ್ತೆ, ಗೋಪಿ ವೃತ್ತ, ಬಾಲರಾಜ ಅರಸ್ ರಸ್ತೆ, ಮಹಾವೀರ ವೃತ್ತದವರೆಗೆ ಮೆರವಣಿಗೆ ಸಾಗಿತು.

ತೆರೆದ ವಾಹನದಲ್ಲಿ ನಡೆದ ಮೆರವಣಿಗೆಯಲ್ಲಿ ಮಧುಗೆ ಹೆಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಮುಖಂಡರಾದ ಕಾಗೋಡು ತಿಮ್ಮಪ್ಪ, ಶಾರದಾ ಪೂರ್ಯನಾಯ್ಕ್, ಎಂ.ಶ್ರೀಕಾಂತ್ ಸೇರಿದಂತೆ ಕಾಂಗ್ರೆಸ್-ಜೆಡಿಎಸ್ ಪಕ್ಷದ ಹಲವು ನಾಯಕರು ಸಾಥ್ ನೀಡಿದರು. 

ಜಿಲ್ಲೆಯ ವಿವಿಧೆಡೆಯಿಂದ ಕಾರ್ಯಕರ್ತರನ್ನು ಕರೆತರಲಾಗಿತ್ತು. ಕಾರ್ಯಕರ್ತರ ಜಯಘೋಷ ಮುಗಿಲು ಮುಟ್ಟಿತ್ತು. ನಾಯಕರ ಮೇಲೆ ಕಾರ್ಯಕರ್ತರು ಪುಷ್ಪವೃಷ್ಠಿ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದರು. ಆದರೆ ನೆತ್ತಿ ಸುಡುತ್ತಿದ್ದ ಬಿಸಿಲಿಗೆ ನಾಯಕರು ಅಕ್ಷರಶಃ ಬೆವರು ಹರಿಸುವುದರ ಜೊತೆಗೆ ಹೈರಾಣಗುವಂತೆ ಮಾಡಿತ್ತು. 

ಪೂಜೆ: ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಮಧು ಬಂಗಾರಪ್ಪರವರು ತಮ್ಮ ಹುಟ್ಟೂರು ಸೊರಬ ತಾಲೂಕಿನ ಕುಬಟೂರಿನಲ್ಲಿರುವ ದ್ಯಾಮವ್ವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸೊರಬ ಪಟ್ಟಣದಲ್ಲಿರುವ ತಂದೆ-ತಾಯಿ ಸಮಾಧಿಗೆ ಭೇಟಿಯಿತ್ತು ಪೂಜೆ ಸಲ್ಲಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News