ಬುರುಡೆ ಭಾಷಣ ಮಾಡಿಕೊಂಡು ಓಡಾಡುತ್ತಿದ್ದಾರೆ: ಮೋದಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

Update: 2019-04-03 14:13 GMT

ಶಿವಮೊಗ್ಗ, ಎ.3: ಬರೀ ಬುರುಡೆ ಭಾಷಣ ಮಾಡಿಕೊಂಡು ಓಡಾಡುತ್ತಿದ್ದಾರೆ. ಇವರ ಅಧಿಕಾರಾವಧಿಯಲ್ಲಿ ಯಾವುದೇ ರಾಷ್ಟ್ರೀಯ ಹಿತಾಸಕ್ತಿಯ ರಕ್ಷಣೆಯಾಗಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಾದೇಶಿಕ ಪಕ್ಷಗಳಿಂದ ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆ ಸಾಧ್ಯವಿಲ್ಲವೆಂದ ಪ್ರಧಾನಿ ಹೇಳಿಕೆಗೆ ಖಾರವಾದ ಪ್ರತಿಕ್ರಿಯೆ ನೀಡಿದ ಸಿಎಂ, ಪ್ರಾದೇಶಿಕ ಪಕ್ಷಗಳ ಬಲದೊಂದಿಗೆ ಅಧಿಕಾರ ನಡೆಸಿದ ಯುಪಿಎ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆ ಅತ್ಯಂತ ಪರಿಣಾಮಕಾರಿಯಾಗಿತ್ತು ಎಂದರು. 

ಮಂಡ್ಯದ ಮೈತ್ರಿಕೂಟದ ನಾಯಕರೊಬ್ಬರ ಮನೆ ಮೇಲೆ ಐಟಿ ದಾಳಿ ನಡೆಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 'ಅವರಿಗೆ (ಐಟಿ) ಬರೀ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಮಾತ್ರ ಕಾಣುತ್ತಾರೆ. ಬಿಜೆಪಿ ನಾಯಕರು ಕಾಣುವುದಿಲ್ಲ ಎಂದು ಟೀಕಾಪ್ರಹಾರ ನಡೆಸಿದರು. 

ನೆಗೆದು ಬೀಳುತ್ತಾರೆ ಎಂದು ಈಶ್ವರಪ್ಪ ಹೇಳಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅವರು ಹೇಳಿರುವುದರ ಅರ್ಥ ಬೇರೆಯೇ ಇದೆ. ನಾವು ಜಂಪಿಂಗ್ ಮಾಡುತ್ತೇವೆ. ಹೆಚ್ಚಿನ ಸ್ಥಾನಗಳಲ್ಲಿ ಜಯಿಸುತ್ತೇವೆ ಎಂಬ ಅರ್ಥದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ ಎಂದರು. 

ಕಳೆದ 9 ತಿಂಗಳಿನಿಂದಲೂ ಬಿಜೆಪಿಯವರು ಅಧಿಕಾರದ ಕನಸು ಕಾಣುತ್ತಿದ್ದಾರೆ. ಆದರೆ ನಾವಿಬ್ಬರು (ಡಿ.ಕೆ.ಶಿವಕುಮಾರ್) ಜೊತೆಯಾಗಿರುವವರಿಗೂ ಸರ್ಕಾರಕ್ಕೆ ಏನೂ ಆಗುವುದಿಲ್ಲ. ಸುಭದ್ರವಾಗಿರಲಿದೆ. ಶಿವಮೊಗ್ಗ ಕ್ಷೇತ್ರ ಮಾತ್ರವಲ್ಲ, ರಾಜ್ಯದ ಅತ್ಯಧಿಕ ಕಡೆಗಳಲ್ಲಿ ಮೈತ್ರಿ ಪಕ್ಷ ಜಯಭೇರಿ ಸಾಧಿಸಲಿದೆ. ಬಿಜೆಪಿ ಬಾಯಿ ಮುಚ್ಚಿಸಲಿದ್ದೇವೆ ಎಂದು ಹೇಳಿದರು. 

ಅಭಿವೃದ್ಧಿ: ಇದಕ್ಕೂ ಮುನ್ನ ಗೋಪಿ ವೃತ್ತದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿ ಹಾಗೂ ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮಧು ಬಂಗಾರಪ್ಪರನ್ನು ಕ್ಷೇತ್ರದ ಜನರು ಆಯ್ಕೆ ಮಾಡಿ ಕಳುಹಿಸಬೇಕು ಎಂದು ಮನವಿ ಮಾಡಿದರು. 

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಹಲವು ಅಭಿವೃದ್ದಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆಗಳಿಗೂ ಅನುದಾನ ನೀಡಲಾಗಿದೆ. ಆದರೆ ಸ್ಥಳೀಯ ಬಿಜೆಪಿ ನಾಯಕರು ತಮ್ಮಿಂದ ನೀರಾವರಿ ಯೋಜನೆಗಳಾಗಿವೆ ಎಂದು ಸುಳ್ಳು ಹೇಳುತ್ತಾ ಮತದಾರರ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು. 

ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳು ಪ್ರಾರಂಭವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ಹಿಂದೆ ಯಡಿಯೂರಪ್ಪರೇ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆಗ ಏಕೆ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿರಲಿಲ್ಲ ಎಂದು ಪ್ರಶ್ನಿಸಿದರು. 

ಯಾಕೆ ನೆಗೆದು ಬಿದ್ದು ಹೋಗಬೇಕು ?

ಲೋಕಸಭೆ ಚುನಾವಣೆ ಬಳಿಕ ನಾನು ನೆಗೆದುಬಿದ್ದು ಹೋಗುತ್ತೇನೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡುತ್ತಾರೆ. ಯಾವ ಕಾರಣಕ್ಕೆ ನಾನು ನೆಗೆದು ಬಿದ್ದು ಹೋಗಬೇಕು? ರಾಜ್ಯದ ಅಭಿವೃದ್ದಿ ಮಾಡಿದ್ದಕ್ಕಾ? ರೈತರ ಸಾಲಮನ್ನಾ ಮಾಡಿದ್ದಕ್ಕಾ? ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಬಗ್ಗೆ ಜನತೆಯೇ ಸರಿಯಾದ ತೀರ್ಮಾನ ಕೈಗೊಳ್ಳಬೇಕು'

-ಹೆಚ್.ಡಿ.ಕುಮಾರಸ್ವಾಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News