ಮುಖ್ಯಮಂತ್ರಿಯ ಕೊಲೆಗೆ ಬಿಜೆಪಿಯವರು ಸಂಚು ರೂಪಿಸಿದ್ದಾರೆಯೇ ?: ಸಚಿವ ಡಿಕೆಶಿ ಪ್ರಶ್ನೆ

Update: 2019-04-03 14:38 GMT

ಶಿವಮೊಗ್ಗ, ಏ. 3: ಲೋಕಸಭೆ ಚುನಾವಣೆ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ನೆಗೆದು ಬಿದ್ದು ಹೋಗುತ್ತಾರೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ನೆಗೆದುಬಿದ್ದು ಹೋಗುವುದು ಎಂದರೆ? ಮುಖ್ಯಮಂತ್ರಿಗಳ ಕೊಲೆಯ ಸಂಚು ನಡೆಯುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುವಂತಾಗಿದೆ. ಬಿಜೆಪಿಯವರೇನಾದರೂ ಸಂಚು ರೂಪಿಸಿದ್ದಾರೆಯೇ ಎಂದು ಸಚಿವ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಬುಧವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನೆಗೆದುಬಿದ್ದು ಹೋಗುವುದು ಎಂದರೆ ಏನರ್ಥ? ಮುಖ್ಯಮಂತ್ರಿಗಳ ಕೊಲೆಯ ಸಂಚು ನಡೆಯುತ್ತಿದೆಯ?. ಬಿಜೆಪಿಯವರೇನಾದರೂ ಸಂಚು ರೂಪಿಸಿದ್ದಾರೆಯೇ ? ಇದೇನಾ ಬಿಜೆಪಿ ಸಂಸ್ಕೃತಿ? ಇದೇನಾ ಆರೆಸ್ಸೆಸ್ ಸಂಸ್ಕೃತಿ ಎಂದು ಕೆ.ಎಸ್.ಈಶ್ವರಪ್ಪರನ್ನು ತರಾಟೆಗೆ ತೆಗೆದುಕೊಂಡರು.

ಇಂತಹ ಹೇಳಿಕೆಯ ಬಗ್ಗೆ ಏಕೆ ಸದಾನಂದಗೌಡರು ಪ್ರಶ್ನಿಸುವುದಿಲ್ಲ ? ಯಡ್ಡಿಯೂರಪ್ಪ ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಹೇಳಿಕೆ ಹಿಂದಿನ ಮರ್ಮವೇನು ಎಂಬುವುದರ ಬಗ್ಗೆ ಸ್ಪಷ್ಟಪಡಿಸಬೇಕು. ಕೆ.ಎಸ್.ಈಶ್ವರಪ್ಪರೇ ಕೊಲೆಗೆ ಸಂಚು ರೂಪಿಸಿದಂತಿದೆ ಎಂದು ದೂರಿದರು.

ಅಸಮಾಧಾನ: ಬಿಜೆಪಿಗೆ ಮುಸ್ಲಿಮರ ಮತ ಅಗತ್ಯವಿಲ್ಲ ಎಂಬ ಈಶ್ವರಪ್ಪ ಹೇಳಿಕೆಗೂ ಡಿ.ಕೆ.ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇವರಿಗೆ ದೇಶದ ಸಂವಿಧಾನ ತಿಳಿದಿಲ್ಲ. ಚುನಾವಣೆ ಸಂದರ್ಭದಲ್ಲಿ ಹೀಗೆ ಜಾತಿ, ಧರ್ಮ ಒಡೆದು ಆಳುವ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ. ಹಾಗಾದರೆ ಮುಸ್ಲಿಮರನ್ನು ದೇಶ ಬಿಟ್ಟು ಕಳುಹಿಸುತ್ತಾರೆಯೇ? ಎಂದು ಪ್ರಶ್ನಿಸಿದರು.

ನಾವು ಎಲ್ಲರೂ ಒಂದೇ ಎಂದು ಓಡಾಡುತ್ತೇವೆ. ಆದರೆ ಅವರು ಧರ್ಮ, ಜಾತಿ ಆಧಾರದಲ್ಲಿ ರಾಜಕಾರಣ ಮಾಡುತ್ತಾರೆ. ಇವರಿಗೆ ಮತದಾರರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಹೆಲಿಕಾಪ್ಟರ್ ತಪಾಸಣೆ

ಮೈತ್ರಿಕೂಟ ಅಭ್ಯರ್ಥಿ ಮಧು ಬಂಗಾರಪ್ಪರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಡಿ.ಕೆ.ಶಿವಕುಮಾರ್ ಅವರು ಹೆಲಿಕಾಪ್ಟರ್ ನಲ್ಲಿ ನಗರದ ಹೆಲಿಪ್ಯಾಡ್‍ಗೆ ಆಗಮಿಸಿದ ವೇಳೆ, ಸ್ಥಳೀಯ ಚುನಾವಣಾಧಿಕಾರಿಗಳು ಅವರ ಹೆಲಿಕಾಪ್ಟರ್ ತಪಾಸಣೆ ನಡೆಸಿದ ಘಟನೆ ನಡೆದಿದೆ. ಚುನಾವಣಾಧಿಕಾರಿಗಳ ಕಾರ್ಯಕ್ಕೆ ಸಚಿವರು ಸೂಕ್ತ ಸಹಕಾರ ನೀಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News