ಮತದಾನದಲ್ಲಿ ಪಾಲ್ಗೊಂಡು ಯುವ ಮತದಾರರಿಗೆ ಮಾದರಿಯಾಗಲಿದ್ದಾರೆ ಈ ಶತಾಯುಷಿಗಳು !

Update: 2019-04-03 15:20 GMT
ಸಾಲುಮರದ ತಿಮ್ಮಕ್ಕ-ದೊರೆಸ್ವಾಮಿ-ವೆಂಕಟಸುಬ್ಬಯ್ಯ

ಬೆಂಗಳೂರು, ಎ.3: ಈ ಬಾರಿಯ ಲೋಕಸಭಾ ಚುನಾವಣೆ ಹಲವು ವಿಶೇಷತೆಗಳನ್ನು ಒಳಗೊಂಡಿದ್ದು, ಅದರಲ್ಲಿ ನೂರು ವರ್ಷ ದಾಟಿದ ಸಾಲುಮರದ ತಿಮ್ಮಕ್ಕ, ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹಾಗೂ ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ಯುವ ಮತದಾರರಿಗೆ ಮಾದರಿಯಾಗಲಿದ್ದಾರೆ.

ಜಯನಗರದಲ್ಲಿ ವಾಸವಾಗಿರುವ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರಿಗೆ 106 ವರ್ಷ. ಇವರು 1951ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲೂ ಮತದಾನ ಮಾಡಿದ್ದಾರೆ. ಅದೇ ವರ್ಷ ನಡೆದ ಮೈಸೂರು ರಾಜ್ಯದ ವಿಧಾನಸಭಾ ಚುನಾವಣೆಗೂ ಇವರು ಮತದಾನ ಮಾಡಿದ್ದರು. ಈ ಬಾರಿಯ ಚುನಾವಣೆಯಲ್ಲೂ ಮತದಾನ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.

ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿ ಪಡೆದ ಶತಾಯುಷಿ ಸಾಲುಮರದ ತಿಮ್ಮಕ್ಕ ಕೂಡ ಪ್ರತಿಬಾರಿಯಂತೆ ಈ ಬಾರಿಯೂ ಮತದಾನ ಮಾಡಲಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದಲ್ಲಿ ಅವರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯೂ ಮತದಾನಕ್ಕೆ ತಪ್ಪಿಸಿಕೊಂಡವರಲ್ಲ. ಕಳೆದ ವರ್ಷವಷ್ಟೆ ನೂರನೇ ವಯಸ್ಸಿಗೆ ಕಾಲಿಟ್ಟ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಕೂಡ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುತ್ತಿದ್ದು, ದೇಶದ ಸ್ವಾತಂತ್ರಕ್ಕಾಗಿ ಹೋರಾಟ, ಸ್ವಾತಂತ್ರ ನಂತರದಲ್ಲಿ ಜನಪರ ಯೋಜನೆಗಳಿಗಾಗಿ ಹೋರಾಟ. ಹೀಗೆ ಪ್ರಜಾಪ್ರಭುತ್ವದ ಉಳಿವಿಗಾಗಿ ತಮ್ಮ ಬದುಕನ್ನೆ ಅರ್ಪಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News