ಮೇಲುಕೋಟೆಯಲ್ಲಿ ನಿಖಿಲ್ ಭರ್ಜರಿ ಪ್ರಚಾರ: ಸಚಿವ ಪುಟ್ಟರಾಜು, ಮುಖಂಡರ ಸಾಥ್

Update: 2019-04-03 16:29 GMT

ಮಂಡ್ಯ, ಎ.3: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ಬಿರುಸಿನ ಪ್ರಚಾರ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿ ಸ್ಥಳೀಯ ಜೆಡಿಎಸ್ ಮುಖಂಡರು ಸಾಥ್ ನೀಡಿದರು.

ಸಚಿವ ಪುಟ್ಟರಾಜು ಜೊತೆ ಮಂಡ್ಯ ನಗರದ ಲಕ್ಷ್ಮೀ ಜನಾರ್ಧನ ಸ್ವಾಮಿ ದೇವಾಲಯಕ್ಕೆ ಆಗಮಿಸಿದ ನಿಖಿಲ್, ತಂದೆ-ತಾಯಿ, ದೊಡ್ಡಪ್ಪ ಹಾಗೂ ತಮ್ಮ ಹೆಸರಿನಲ್ಲಿ ಅರ್ಚನೆ ಮಾಡಿಸಿ ಪ್ರಸಾದ ಸ್ವೀಕಾರ ಮಾಡಿದರು. ನಂತರ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಎಚ್.ಮಲ್ಲಿಗೆರೆ ಗ್ರಾಮದಿಂದ ಪ್ರಚಾರ ಆರಂಭಿಸಿದರು.

ಹೊಳಲು ಗ್ರಾಮದಲ್ಲಿ ಕಾರ್ಯಕರ್ತರ ಮನವಿ ಮೇರೆಗೆ ಎತ್ತಿನ ಗಾಡಿ ಏರಿ ಪ್ರಚಾರ ನಡೆಸಿದ ಅವರು, ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ಹೊಲ ಉಳುಮೆ ಮಾಡುವ ಮೂಲಕ ಮತದಾರರ ಸೆಳೆಯುವ ಯತ್ನ ನಡೆಸಿದರು. ನಿಖಿಲ್ ಪ್ರಚಾರ ವೇಳೆ ನೂರಾರು ಮಂದಿ ನೆರದಿದ್ದರು. ಹೋದ ಕಡೆಯೆಲ್ಲಾ ಹೂವಿನ ಮಳೆ ಸುರಿದು ಸ್ವಾಗತ ನೀಡಿದರು. 30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಂಚಾರ ಮಾಡಿದರು. ಗೆಲ್ಲಿಸಿದರೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಪುಟ್ಟರಾಜು, ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ನನ್ನ ಹೆಸರಿರುವುದು ತುಂಬಾ ಖುಷಿ ತಂದಿದೆ. ಸಾಮಾನ್ಯ ಕಾರ್ಯಕರ್ತರಿಗೂ ಗೌರವ ಕೊಡುತ್ತೆ ಅನ್ನೋದಕ್ಕೆ ನಮ್ಮ ಪಕ್ಷ ಸಾಕ್ಷಿಯಾಗಿದೆ ಎಂದರು.

ಸುಮಲತಾ ಪ್ರಚಾರದಲ್ಲಿ ಇನ್ನು ಮುಂದೆ ಕಾಂಗ್ರೆಸ್ ಬಾವುಟ ನಿಲ್ಲುತ್ತೆ. ಈಗಾಗಲೇ ಕಾಂಗ್ರೆಸ್ ಸಭೆ ನಡೆಸಿ, ದೂರು ಕೂಡ ಕೊಟ್ಟಿದೆ. ಇನ್ನು ಆ ರೀತಿ ನಡವಳಿಕೆ ಮಾಡಕೂಡದು. ಮೈತ್ರಿ ಧರ್ಮ ಪಾಲನೆಗೆ ನಿರ್ಧಾರವಾಗಿದೆ. ಇವತ್ತಿಂದ ಕಾಂಗ್ರೆಸ್ ಜವಾಬ್ಧಾರಿಯುತವಾಗಿ ನಡೆಯುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಾವು ಕಾಂಗ್ರೆಸ್ ನಾಯಕರ ನೇತೃತ್ವದಲ್ಲೇ ಚುನಾವಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಎಲ್ಲಾ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ರೆಬೆಲ್ ನಾಯಕರ ಮನವೊಲಿಸುವ ಪ್ರಯತ್ನ ಆಗುತ್ತಿದೆ. ಗೊಂದಲ ಸರಿಪಡಿಸಿಕೊಳ್ಳಲು ನಾವೆಲ್ಲಾ ಪ್ರಯತ್ನ ಮಾಡುತ್ತೇವೆ. ರಾಜಕಾರಣದಲ್ಲಿ ಯಾವುದೂ ಮುಗಿದ ಅಧ್ಯಾಯವಲ್ಲ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಿನ್ನೆ ಸಭೆ ಆಗಿದೆ. ಪಕ್ಷದ ಪರ ಕೆಲಸ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ. ನೂರಕ್ಕೆ ನೂರು ಪ್ರಚಾರಕ್ಕೆ ಬರುವ ವಿಶ್ವಾಸ ಇದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News