1, 2 ರೂ. ನಾಣ್ಯ ತಂದು ಠೇವಣಿ ಕಟ್ಟಿದ ಪಕ್ಷೇತರ ಅಭ್ಯರ್ಥಿ !

Update: 2019-04-03 17:05 GMT

ಶಿವಮೊಗ್ಗ, ಎ.3: ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಾಮಾನ್ಯ ವರ್ಗದವರು 25 ಸಾವಿರ ರೂ. ಹಾಗೂ ಎಸ್ಸಿ-ವರ್ಗದವರು 12,500 ರೂ.ಗಳನ್ನು ಠೇವಣಿಯಾಗಿ ಕಟ್ಟುವುದು ಕಡ್ಡಾಯವಾಗಿದೆ. ಅದರಂತೆ ಬಹುತೇಕ ಸ್ಪರ್ಧಾಳುಗಳು ನಾಮಪತ್ರ ಸಲ್ಲಿಸುವ ವೇಳೆ 100, 500, 2000 ರೂ. ಮುಖಬೆಲೆಯ ನೋಟುಗಳನ್ನು ಚುನಾವಣಾ ಆಯೋಗಕ್ಕೆ ಠೇವಣಿ ರೂಪದಲ್ಲಿ ಸಂದಾಯ ಮಾಡುತ್ತಾರೆ. ಆದರೆ, ಬುಧವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಅರ್ಜಿ ಸಲ್ಲಿಸಿದ ವಿನಯ್ ಕೆ.ಸಿ. ರಾಜಾವತ್ ಎಂಬುವರು, 1 ರೂ. ಹಾಗೂ 2 ರೂ. ಕಾಯಿನ್‍ಗಳನ್ನು ಚೀಲವೊಂದರಲ್ಲಿ ಹೊತ್ತುಕೊಂಡು ಬಂದು ಜಿಲ್ಲಾ ಚುನಾವಣಾಧಿಕಾರಿಗೆ ಠೇವಣಿ ಮೊತ್ತವಾಗಿ ಸಲ್ಲಿಸಿದ್ದಾರೆ.

'ತಾನು ಚುನಾವಣಾ ಕಣಕ್ಕಿಳಿಯುತ್ತಿರುವ ನಿರ್ಧಾರ ಬೆಂಬಲಿಸಿ ಹಿತೈಷಿಗಳು, ಸ್ನೇಹಿತರು ತಲಾ ಒಂದು ಹಾಗೂ ಎರಡು ರೂ.ನಾಣ್ಯಗಳನ್ನು ಕೊಟ್ಟಿದ್ದರು. ಅದನ್ನೇ ಚೀಲವೊಂದರಲ್ಲಿ ಕಟ್ಟಿಕೊಂಡು ಬಂದು, ನಾಮಪತ್ರದ ಜೊತೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದೇನೆ. ಅವರು ನಾಣ್ಯದ ಚೀಲವನ್ನು ಸ್ವೀಕರಿಸಿದ್ದಾರೆ' ಎಂದು ವಿನಯ್ ಕೆ.ಸಿ.ರಾಜಾವತ್‍ರವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಇದಕ್ಕೂ ಮುನ್ನ ಅವರು ನಾಮಪತ್ರ ಸಲ್ಲಿಸಲು, ನೆಹರೂ ಕ್ರೀಡಾಂಗಣದಿಂದ ಜಿಲ್ಲಾಧಿಕಾರಿ ಕಚೇರಿ ಸಮೀಪದವರೆಗೆ ಎತ್ತಿನ ಗಾಡಿಯಲ್ಲಿ ಆಗಮಿಸಿದರು. ನಾಮಪತ್ರ ಸಲ್ಲಿಸುವ ವೇಳೆ ಇಬ್ಬರು ಅಂಧ ಯುವಕರು ಅವರಿಗೆ ಜೊತೆಯಾಗಿದ್ದರು.

ಬದಲಾಗಬೇಕು: 'ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದೆ. ಈ ಬಾರಿ ಲೋಕಸಭೆ ಅಖಾಡಕ್ಕಿಳಿಯುವ ನಿರ್ಧಾರ ಮಾಡಿದ್ದೇನೆ. ಪ್ರಸ್ತುತ ಜಾತಿ, ಧರ್ಮಾಧಾರಿತ, ಹಣ, ಹೆಂಡ, ಆಮಿಷದ ರಾಜಕಾರಣ ಹೆಚ್ಚಾಗಿದೆ. ಇಂತಹ ವ್ಯವಸ್ಥೆ ಕೊನೆಗಾಣಬೇಕು. ನಿಷ್ಪಕ್ಷಪಾತ ಚುನಾವಣೆ ನಡೆಯಬೇಕು ಎಂಬ ಉದ್ದೇಶದಿಂದ ನಾನು ಸ್ಪರ್ಧಿಸಿದ್ದೇನೆ. ಸೋಲು-ಗೆಲುವು ಮುಖ್ಯವಲ್ಲ ಎಂದು ಹೇಳಿದ್ದಾರೆ.

ರಾಜಕೀಯ ನಾಯಕರು ಯುವಕರೇ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ. ಆದರೆ ಯುವಕರಿಗೆ ಉದ್ಯೋಗ ಕೊಟ್ಟಿಲ್ಲ. ಅವರ ಶ್ರೇಯೋಭಿವೃದ್ದಿಗೆ ಯಾವುದೇ ಕ್ರಮಕೈಗೊಂಡಿಲ್ಲ. ಯುವಶಕ್ತಿಯನ್ನು ಕೇವಲ ತಮ್ಮ ರಾಜಕೀಯ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಪ್ರಸ್ತುತ ಕೆಲ ರಾಜಕಾರಣಿಗಳು ಮತಕ್ಕಾಗಿ ಕೋಮು ಸಾಮರಸ್ಯ ಕದಡುವ, ಸಾಮಾಜಿಕ ಸಹಬಾಳ್ವೆಗೆ ಧಕ್ಕೆ ತರುವ ಕಾರ್ಯ ನಡೆಸುತ್ತಿದ್ದಾರೆ. ಇಂತಹ ಕೋಮು ರಾಜಕಾರಣ ಕೊನೆಯಾಗಬೇಕು ಎಂಬ ಉದ್ದೇಶವೂ ತಮ್ಮದಾಗಿದೆ. ಈ ಎಲ್ಲ ಕಾರಣಗಳಿಂದ ಚುನಾವಣಾ ಕಣಕ್ಕೆ ಧುಮುಕಿದ್ದೇನೆ ಎಂದು ವಿನಯ್ ಕೆ.ಸಿ.ರಾಜಾವತ್‍ರವರು ಮಾಹಿತಿ ನೀಡಿದರು

ನಾಣ್ಯಗಳನ್ನು ಚೀಲದಲ್ಲಿ ಹೊತ್ತು ತಂದರು

ವಿನಯ್ ಕೆ. ಸಿ. ರಾಜಾವತ್‍ರವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದ ಕಾರಣ, 12,500 ರೂ.ಗಳನ್ನು ಅವರು ಠೇವಣಿಯಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದರು. ಇದರಲ್ಲಿ 9000 ಸಾವಿರ 1 ರೂ. ನಾಣ್ಯ ಹಾಗೂ 3500 2 ರೂ. ನಾಣ್ಯವಾಗಿದೆ ಎಂದು ರಾಜಾವತ್ ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News