ಸುಮಲತಾ ಅಂಬರೀಷ್‍ಗೆ ದಸಂಸ ಬೆಂಬಲ: ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು

Update: 2019-04-03 17:21 GMT

ಮಂಡ್ಯ, ಎ.3: ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರನ್ನು ದಲಿತ ಸಂಘರ್ಷ ಸಮಿತಿ ಬೆಂಬಲಿಸುತ್ತದೆ ಎಂದು ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಆತ್ಮಸಾಕ್ಷಿ, ಸ್ವಾಭಿಮಾನದ ಪ್ರತೀಕವಾಗಿ ಸುಮಲತಾ ಅವರಿಗೆ ಬೆಂಬಲ ನೀಡಲು ಸಮಿತಿ ಪದಾಧಿಕಾರಿಗಳ, ಕಾರ್ಯಕರ್ತರ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಬಹುತೇಕ ರಾಜಕೀಯ ಪಕ್ಷಗಳು ಸಮಗ್ರ ಸಮಾಜದ ಹಿತಾಸಕ್ತಿ ತುಳಿದು, ವಂಶಾಡಳಿತ ಹಿತಾಸಕ್ತಿಗೆ ಆದ್ಯತೆ ನೀಡುತ್ತಿರುವುದು ಸಂಸದೀಯ ಪ್ರಜಾಪ್ರಭುತ್ವದ ದುರ್ಬಳಕೆಯ ದುರಂತವನ್ನು ಸೂಚಿಸುತ್ತದೆ. ಸಜ್ಜನಿಕೆಯ ಎಲ್ಲಾ ಚೌಕಟ್ಟುಗಳನ್ನು ಧ್ವಂಸ ಮಾಡಿ, ಸ್ವ-ಕುಟುಂಬ ರಾಜಕಾರಣವು ಲೂಟಿಕೋರರ ಲಕ್ಷಣವಾಗಿದೆ ಎಂದು ಅವರು ಕಿಡಿಕಾರಿದರು.

ಮುತ್ಸದ್ದಿ ರಾಜಕಾರಣಕ್ಕೆ ಪ್ರಖ್ಯಾತವಾಗಿದ್ದ ಜಿಲ್ಲೆಯು ಕಳೆದ ಮುವತ್ತು ವರ್ಷಗಳ ರಾಜಕೀಯ ಇತಿಹಾಸದಲ್ಲಿ ಹಂತ ಹಂತವಾಗಿ ರಾಜಕೀಯ ದಾಸ್ಯಕ್ಕೆ ಒಗ್ಗಿ ಹೋಗಿದೆ. ಅದಕ್ಕೆ ಪೂರಕವಾಗಿ ಎಲ್ಲಾ ಹಂತದ ಜನಪ್ರತಿನಿಧಿಗಳನ್ನೂ ನಾನಾ ರೀತಿಯಲ್ಲಿ ಕುಟುಂಬ ರಾಜಕಾರಣದ ಗುಲಾಮರಾಗಿರುವಂತೆ ಚೆನ್ನಾಗಿ ಪಳಗಿಸಲಾಗಿದೆ. ಇಂತಹ ಕುಟುಂಬ ರಾಜಕಾರಣದ ಅಸಹ್ಯಕರ ಪ್ರದರ್ಶನದ ವಿರುದ್ಧ ಜಿಲ್ಲೆಯ ಜನತೆ ಈಗ ಸಾಮೂಹಿಕವಾಗಿ ಕೆರಳಿದ್ದಾರೆ. ಇದೊಂದು ಸ್ವಾಗತಾರ್ಹ ರಾಜಕೀಯ ಬೆಳವಣಿಗೆ. ಜನರ ಈ ಪ್ರತಿರೋಧವು ಉತ್ತಮ ರಾಜಕೀಯ ಫಲಿತಾಂಶಕ್ಕೆ ಕಾರಣವಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಹೊರಗಿನ ಜನರ ದಾಸ್ಯದ ಸಂಕೋಲೆಯ ವಿರುದ್ಧವಾಗಿ ಮಂಡ್ಯದ ಸ್ವಾಭಿಮಾನ ಮತ್ತು ಈ ನೆಲದ ಜನರ ಘನತೆಯ ರಾಜಕಾರಣಕ್ಕಾಗಿ ಮೊದಲ ಬಾರಿಗೆ ಮಂಡ್ಯದ ಜನತೆ ಜಾತಿ, ಮತ, ಧರ್ಮದ ಎಲ್ಲೆಗಳನ್ನು ಮೀರಿ ಆಚೆ ಬಂದು ಪಕ್ಷೇತರ ಅಭ್ಯರ್ಥಿಯೊಬ್ಬರ ಪರವಾಗಿ ನಿಂತು ಮಾತನಾಡುತ್ತಿರುವುದು ಅಚ್ಚರಿಯ ಸಂಗತಿ ಮಾತ್ರವಲ್ಲ, ಬದಲಾವಣೆಯ ದಿಕ್ಕಿನತ್ತ ಇಟ್ಟ ದಿಟ್ಟತನದ ಹೆಜ್ಜೆಯಾಗಿದೆ. ಈ ನಿಟ್ಟಿನಲ್ಲಿ ಜನಪರ ಸಂಘಟನೆಗಳು ಸುಮಲತಾ ಅಂಬರೀಷ್ ಅವರನ್ನು ಬೆಂಬಲಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ.ಹುಲ್ಕೆರೆ ಮಹದೇವು, ದೇವರಾಜ್ ತಿರುಮಲಾಪುರ, ಪ್ರಸನ್ನ, ಶಿವಲಿಂಗಯ್ಯ, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News