ಎಸಿಬಿ ಡಿವೈಎಸ್ಪಿ ಎಂದು ಕರೆ ಮಾಡಿ ತಾಪಂ ಇಒಗೆ ಹಣಕ್ಕೆ ಬೇಡಿಕೆ: ದೂರು ದಾಖಲು
ಶಿವಮೊಗ್ಗ, ಎ.3: ‘ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣರಿಗೆ ಸೇರಿದ ಹಣ ನಿಮ್ಮ ಬಳಿಯಿದೆ. ನೀವೇನಾದರೂ ಹಣ ನೀಡದಿದ್ದರೆ, ನಿಮ್ಮ ಮನೆ ಮೇಲೆ ದಾಳಿ ಮಾಡುವುದಾಗಿ’ ಅನಾಮಧೇಯ ವ್ಯಕ್ತಿಯೋರ್ವ ಎಸಿಬಿ ಡಿವೈಎಸ್ಪಿ ಹೆಸರಿನಲ್ಲಿ ಸೊರಬ ತಾಲೂಕು ಪಂಚಾಯತ್ ಇಒ ಮೊಬೈಲ್‌ಗೆ ಕರೆ ಮಾಡಿ ಬೆದರಿಕೆ ಹಾಕಿರುವ ಘಟನೆ ಬುಧವಾರ ನಡೆದಿದೆ.
ಈ ಸಂಬಂಧ ಇಒ ಕೆ.ಸಿ.ದೇವರಾಜೇಗೌಡ ಅವರು, ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಹಾಸನ ತಾಪಂ ಇಒಆಗಿ ಕಾರ್ಯನಿರ್ವಹಿಸುತ್ತಿದ್ದ ದೇವರಾಜೇಗೌಡ ಅವರನ್ನು, ಚುನಾವಣೆ ಹಿನ್ನೆಲೆಯಲ್ಲಿ ಆಯೋಗವು ಸೊರಬ ಇಒ ಆಗಿ ವರ್ಗಾವಣೆಗೊಳಿಸಿತ್ತು. ಅದರಂತೆ ಎ.1ರಂದು ಸೊರಬ ಇಒಆಗಿ ಅಧಿಕಾರ ಸ್ವೀಕರಿಸಿದ್ದರು. ಆರೋಪಿಯು ಮಂಗಳವಾರ ಅವರ ವೈಯಕ್ತಿಕ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಎಸಿಬಿ ಡಿವೈಎಸ್ಪಿ ಮಂಜುನಾಥ್ ಎಂದು ಪರಿಚಯಿಸಿ, ‘ನಿಮ್ಮ ಬಗ್ಗೆ ದೂರು ಬಂದಿದೆ. ನಿಮ್ಮ ಮನೆ ಮೇಲೆ ದಾಳಿ ಮಾಡಿಸುತ್ತಿದ್ದೇನೆ’ ಎಂದು ದೇವರಾಜೇಗೌಡಗೆ ತಿಳಿಸಿದ್ದಾನೆ.
‘ನೀವು ಲೋಕೋಪಯೋಗಿ ಸಚಿವ ರೇವಣ್ಣರವರ ಆಪ್ತರು, ಸಂಬಂಧಿಕರಾಗಿದ್ದಿರಿ ಎಂದು ಹೇಳಿದ ಆ ವ್ಯಕ್ತಿಯು, ನನ್ನ ಪತ್ನಿ ಹಾಗೂ ಮಕ್ಕಳ ಹೆಸರನ್ನು ಹೇಳಿದ್ದರು. ದಾಳಿಯನ್ನು ತಡೆಸುತ್ತೇನೆ. ವೈಯಕ್ತಿಕವಾಗಿ ಸಿಗಬೇಕು. ಇಲ್ಲದಿದ್ದರೆ ನಾಳೆಯೇ ದಾಳಿ ನಡೆಸಲಾಗುವುದು’ ಎಂದು ಆರೋಪಿ ತಿಳಿಸಿದ್ದ ಎಂದು ದೇವರಾಜೇಗೌಡ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ತಮಗೆ ಬಂದ ಮೊಬೈಲ್ ಸಂಖ್ಯೆಯನ್ನು ದೇವರಾಜೇಗೌಡ ಅವರು ಹಾಸನ ಎಸ್ಪಿಗೆ ಕಳುಹಿಸಿ ಪರಿಶೀಲಿಸಿದ್ದಾರೆ. ಆ ವೇಳೆ ಇದು ಎಸಿಬಿ ಪೊಲೀಸ್ ಅಧಿಕಾರಿಗೆ ಸೇರಿದ ಮೊಬೈಲ್ ಸಂಖ್ಯೆಯಲ್ಲ ಎಂಬುವುದು ಗೊತ್ತಾಗಿದೆ.