ಹಣ ಬಲ, ಜನ ಬಲದ ನಡುವೆ ಹೋರಾಟ: ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
ದಾವಣಗೆರೆ,ಎ.3: ಜಾತಿ ಹೆಸರಿನಲ್ಲಿ ಬೆಂಕಿ ಹಚ್ಚುವ ಹಾಗೂ ಜಾತಿ ರಾಜಕಾರಣವನ್ನು ಯಾರೂ ಮಾಡಬಾರದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಬಲ ಮತ್ತು ಜನ ಬಲದ ನಡುವೆ ಹೋರಾಟ ನಡೆಯುತ್ತಿದೆ. ನಮ್ಮದು ಜನರು ಪಕ್ಷವಾಗಿದೆ. ಅಲ್ಲದೇ ಕಾಂಗ್ರೆಸ್ ಪಕ್ಷ ಈ ಬಾರಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಿದೆ. ಪ್ರಾಮಾಣಿಕ, ಸರಳ ವ್ಯಕ್ತಿತ್ವದ ಎಚ್.ಬಿ.ಮಂಜಪ್ಪ ಕಾಂಗ್ರೆಸ್ ಪಕ್ಷದಿಂದ ಎ.4ರಂದು ಬೆಳಿಗ್ಗೆ 10ಕ್ಕೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ,ಮೆರವಣಿಗೆ ಮೂಲಕ ಪಕ್ಷದ ಮುಖಂಡರು, ಕಾರ್ಯಕರ್ತರು, ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಅದ್ದರಿಂದ ಪಕ್ಷದ ಕಾರ್ಯಕರ್ತರು ಹೆಚ್ಚಿನ ರೀತಿಯಲ್ಲಿ ಆಗಮಿಸಿ ಬೆಂಬಲಿಸುವಂತೆ ಮನವಿ ಮಾಡಿದರು.
ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ನಮ್ಮ ಕಾರ್ಯಕರ್ತರು ಪಕ್ಷಕ್ಕೆ ಗೆಲುವು ತಂದುಕೊಡುತ್ತಾರೆಂಬ ವಿಶ್ವಾಸವಿದೆ. 3 ತಿಂಗಳ ಹಿಂದೆಯೇ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದೆ. ಹೈಕಮಾಂಡ್ ಸೂಚನೆ ಪಾಲಿಸುವ ನಿಷ್ಟಾವಂತ ಕಾರ್ಯಕರ್ತರು ನಾವು. ಸೂಕ್ತ ಅಭ್ಯರ್ಥಿಯನ್ನು ಹೆಸರಿಸಲು ಸೂಚಿಸಿದ್ದರು. ಅದರಂತೆ ಎಚ್.ಬಿ.ಮಂಜಪ್ಪ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದಾರೆ ಎಂದು ಅವರು ತಿಳಿಸಿದರು.
ಕೆಪಿಸಿಸಿಯಿಂದ ಮುಂಚೆ ತಮ್ಮ ತಂದೆ ಡಾ.ಶಾಮನೂರು ಶಿವಶಂಕರಪ್ಪನವರ ಹೆಸರು ಘೋಷಣೆಯಾಗಿತ್ತು. ನಂತರ ಜಿಪಂ ಮಾಜಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಜಿಪಂ ಸದಸ್ಯ ತೇಜಸ್ವಿ ವಿ.ಪಟೇಲ್ ಹಾಗೂ ನಿಖಿಲ್ ಕೊಂಡಜ್ಜಿ ಹೆಸರು ಪ್ರಸ್ತಾಪಕ್ಕೆ ಬಂದವು. ಯಾರಿಗೇ ಹೈಕಮಾಂಡ್ ಟಿಕೆಟ್ ನೀಡಿದರೂ ಕಾಂಗ್ರೆಸ್ಸಿನ ಗೆಲುವೇ ನಮ್ಮ ಗುರಿಯಾಗಿತ್ತು ಎಂದು ಪ್ರತಿಕ್ರಿಯಿಸಿದರು.
ಲೋಕಸಭೆ ಚುನಾವಣೆಯಲ್ಲಿ ಹಣ ಬಲದ ಬಿಜೆಪಿ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ಸಿನ ಸಾಮಾನ್ಯ ಕಾರ್ಯಕರ್ತ ಎಚ್.ಬಿ.ಮಂಜಪ್ಪನವರನ್ನು ಗೆಲ್ಲಿಸಬೇಕು ಎಂದು ಅವರು ಕರೆ ನೀಡಿದರು.
ಜೆಡಿಎಸ್, ಕಮ್ಯುನಿಷ್ಟ್ ಪಕ್ಷ, ರೈತ ಸಂಘಟನೆ ಸೇರಿದಂತೆ ಅನೇಕ ಪಕ್ಷಗಳು, ಸಂಘಟನೆಗಳು ಬೆಂಬಲ ಸೂಚಿಸಿವೆ. ಕಾಂಗ್ರೆಸ್ ಪಕ್ಷದಿಂದ ಸೂಕ್ತ, ಅರ್ಹ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದು, ಕೆಳ ಹಂತದಿಂದ ಬೆಳೆದು ಬಂದ ಮಂಜಪ್ಪ ತಾಪಂ, ಜಿಪಂ ಸದಸ್ಯರಾಗಿ, ಅಧ್ಯಕ್ಷರಾಗಿದ್ದರು. ಕಳೆದ ಕೆಲ ವರ್ಷದಿಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ಸಿನ ಅಭ್ಯರ್ಥಿ ಮಂಜಪ್ಪ ಪರ ನಗರ, ಜಿಲ್ಲಾದ್ಯಂತ ಪ್ರಚಾರ ಮಾಡುತ್ತೇವೆ. ನಾಳೆ ನಾಮಪತ್ರ ಸಲ್ಲಿಕೆ ನಂತರ ಕಾಂಗ್ರೆಸ್ಸಿನ ಚುನಾವಣಾ ಪ್ರಚಾರ ಕಾರ್ಯವೂ ಚುರುಕಾಗಲಿದ್ದು, ನಾವೆಲ್ಲರೂ ಪಕ್ಷದ ಅಭ್ಯರ್ಥಿ ಪರ ಮತಯಾಚಿಸುತ್ತೇವೆ ಎಂದು ಅವರು ಹೇಳಿದರು.
ಕಾಂಗ್ರೆಸ್ಸಿನ ಅಭ್ಯರ್ಥಿ ಎಚ್.ಬಿ.ಮಂಜಪ್ಪ ಮಾತನಾಡಿ, ರೈತ ಮುಖಂಡ, ಜಿಪಂ ಸದಸ್ಯ ತೇಜಸ್ವಿ ವಿ.ಪಟೇಲ್‍ರನ್ನು ನಾನು ಮೊಬೈಲ್‍ನಲ್ಲಿ ಸಂಪರ್ಕಿಸಿದ್ದು, ಎ.4ರಂದು ನಾಮಪತ್ರ ಸಲ್ಲಿಸುವ ವೇಳೆ ಬರುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ವಿಪ ಸದಸ್ಯ ಮೋಹನ್ ಕೊಂಡಜ್ಜಿ, ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಡಿ.ಜಿ.ಶಾಂತನಗೌಡ, ಎಚ್.ಪಿ.ರಾಜೇಶ, ಸೈಯದ್ ಸೈಫುಲ್ಲಾ, ಎಂ.ಪಿ.ಲತಾ ಮಲ್ಲಿಕಾರ್ಜುನ, ಜಿಪಂ ಸದಸ್ಯ ಕೆ.ಎಸ್.ಬಸಂತಪ್ಪ, ಬಿ.ಎಚ್.ವೀರಭದ್ರಪ್ಪ, ದಿನೇಶ ಕೆ.ಶೆಟ್ಟಿ, ಮುದೇಗೌಡ್ರ ಗಿರೀಶ, ಎಸ್.ಮಲ್ಲಿಕಾರ್ಜುನ, ರಾಜಶೇಖರ ಗೌಡ, ಹುಲಿಕಟ್ಟೆ ಕೊಟ್ರೇಶ ನಾಯ್ಕ ಇತರರು ಇದ್ದರು.