'ಮೋದಿಜಿಯ ಸೇನೆ’ ಎಂದ ಆದಿತ್ಯನಾಥ್ ಗೆ ಚುನಾವಣಾ ಆಯೋಗದ ನೋಟಿಸ್

Update: 2019-04-04 11:08 GMT

ಹೊಸದಿಲ್ಲಿ, ಎ.4: “ಉಗ್ರರನ್ನು ಬುಲೆಟ್ ಮತ್ತು ಬಾಂಬುಗಳಿಂದ ಮೋದೀಜಿ ಕಿ ಸೇನಾ ನಿಗ್ರಹಿಸಿದೆ” ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಇತ್ತೀಚೆಗೆ ಗಾಝಿಯಾಬಾದ್ ಚುನಾವಣಾ ರ್ಯಾಲಿಯಲ್ಲಿ ನೀಡಿದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಅವರಿಗೆ ನೋಟಿಸ್ ಜಾರಿಗೊಳಿಸಿದೆ.

ಚುನಾವಣಾ ಪ್ರಚಾರದಲ್ಲಿ ಸೇನೆಯ ಕಾರ್ಯಾಚರಣೆಗಳನ್ನು ಉಲ್ಲೇಖಿಸಬಾರದೆಂದು ಆಯೋಗ ಮಾರ್ಚ್ 19ರಂದು ನೀಡಿದ್ದ ಸೂಚನೆಯನ್ನು ಉಲ್ಲಂಘಿಸಿದ್ದಕ್ಕಾಗಿ ಈ ನೋಟಿಸ್ ಜಾರಿಯಾಗಿದೆ. ಈ ನೋಟಿಸಿಗೆ ಆದಿತ್ಯನಾಥ್ ಎಪ್ರಿಲ್ 5ರ ಅಪರಾಹ್ನದೊಳಗೆ ಉತ್ತರಿಸಬೇಕಿದೆ.

ಈ ವಿವಾದಿತ ಹೇಳಿಕೆಯ ಬಗ್ಗೆ ವಾಸ್ತವ ವರದಿಯನ್ನು ಸಲ್ಲಿಸುವಂತೆ ಆಯೋಗವು ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿಗೆ ಸೂಚನೆ ನೀಡಿದೆ.

``ಕಾಂಗ್ರೆಸ್ ಉಗ್ರರಿಗೆ ಬಿರಿಯಾನಿ ನೀಡಿದರೆ, ಮೋದಿಯ ಸೇನೆ ಅವರಿಗೆ ಬುಲೆಟ್ ಮತ್ತು ಬಾಂಬುಗಳನ್ನು ನೀಡಿದೆ. ಇದು ವ್ಯತ್ಯಾಸ. ಕಾಂಗ್ರೆಸ್ ಜನರು ಉಗ್ರವಾದವನ್ನು ಪ್ರೇರೇಪಿಸಲು ಮಸೂದ್ ಅಝರ್ ನಂತಹವರಿಗೆ `ಜೀ' ಎಂಬ ಪದ ಉಪಯೋಗಿಸುತ್ತದೆ'' ಎಂದು ಆದಿತ್ಯನಾಥ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News