ಯುಪಿಎಸ್ಸಿ ಫಲಿತಾಂಶ ಪ್ರಕಟ: ದಲಿತ ಯುವಕ ಕನಿಷ್ಕ ಕಟಾರಿಯಾ ದೇಶಕ್ಕೆ ಟಾಪರ್

Update: 2019-04-05 18:47 GMT

ಹೊಸದಿಲ್ಲಿ, ಎ.5: ನಾಗರಿಕ ಸೇವಾ ಫೈನಲ್ ಪರೀಕ್ಷೆ (ಯುಪಿಎಸ್‌ಸಿ)ಯ ಫಲಿತಾಂಶ ಪ್ರಕಟವಾಗಿದ್ದು ಐಐಟಿ ಬಾಂಬೆಯ ಬಿಟೆಕ್ ಪದವೀಧರ ಕನಿಶಕ್ ಕಥಾರಿಯಾ ಟಾಪರ್ ಆಗಿದ್ದಾರೆ ಎಂದು ಘೋಷಿಸಲಾಗಿದೆ. ಎಸ್ಸಿ ಸಮುದಾಯದ ಅಭ್ಯರ್ಥಿಯಾಗಿರುವ ಕಥಾರಿಯಾ ಗಣಿತವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದರು.

 ಮಹಿಳೆಯರಲ್ಲಿ ಸೃಷ್ಟಿ ಜಯಂತ್ ದೇಶ್‌ಮುಖ್ ಟಾಪರ್ ಆಗಿದ್ದಾರೆ. ಅವರು ಐದನೇ ರ್ಯಾಂಕ್ ಗಳಿಸಿದ್ದು ಭೋಪಾಲದ ರಾಜೀವ್ ಗಾಂಧಿ ಪ್ರದ್ಯೋಗಿಕ್ ವಿವಿಯ ಕೆಮಿಕಲ್ ಇಂಜಿನಿಯರಿಂಗ್ ಪದವೀಧರೆಯಾಗಿದ್ದಾರೆ. ಅಗ್ರ 25 ಅಭ್ಯರ್ಥಿಗಳಲ್ಲಿ 10 ಮಹಿಳೆಯರಿದ್ದಾರೆ.

ಇಂಡಿಯನ್ ಎಡ್ಮಿನಿಸ್ಟ್ರೇಟಿವ್ ಸರ್ವಿಸ್, ಇಂಡಿಯನ್ ಫಾರಿನ್ ಸರ್ವಿಸ್, ಇಂಡಿಯನ್ ಪೊಲೀಸ್ ಸರ್ವಿಸ್, ಸೆಂಟ್ರಲ್ ಸರ್ವಿಸ್, ಗ್ರೂಪ್ ಎ ಮತ್ತು ಗ್ರೂಪ್ ಬಿ ಯಲ್ಲಿ ನೇಮಕಾತಿಗೆ 577 ಪುರುಷ ಹಾಗೂ 182 ಮಹಿಳಾ ಅಭ್ಯರ್ಥಿಗಳನ್ನು ಶಿಫಾರಸು ಮಾಡಲಾಗಿದೆ.

 ಅಗ್ರ 25 ಅಭ್ಯರ್ಥಿಗಳಲ್ಲಿ ಇಂಜಿನಿಯರಿಂಗ್, ವಿಜ್ಞಾನ, ಅರ್ಥಶಾಸ್ತ್ರ, ಕಾನೂನು, ಗಣಿತ, ಇತಿಹಾಸ, ರಾಜಕೀಯ ವಿಜ್ಞಾನ ಮುಂತಾದ ವಿಷಯದ ಪದವೀಧರರಿದ್ದಾರೆ. ಜೂನ್‌ನಲ್ಲಿ ನಾಗರಿಕ ಸೇವೆಯ ಪೂರ್ವಭಾವಿ ಪರೀಕ್ಷೆ ನಡೆದಿತ್ತು. ಒಟ್ಟು 10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು ಸುಮಾರು 5 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 10,468 ಅಭ್ಯರ್ಥಿಗಳು ಫೈನಲ್ ಪರೀಕ್ಷೆಗೆ ಅರ್ಹತೆ ಗಳಿಸಿಕೊಂಡಿದ್ದರು.

ದಲಿತ ಸಮುದಾಯದಿಂದ ಬಂದ ಪ್ರತಿಭಾವಂತ ಕಥಾರಿಯಾ

ನಾಗರಿಕ ಸೇವಾ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಕನಿಶಕ್ ಕಥಾರಿಯಾ ಐಐಟಿ ಬಾಂಬೆಯ ಹಳೆ ವಿದ್ಯಾರ್ಥಿ. ಐಐಟಿ ಬಾಂಬೆಯಲ್ಲಿ ಬಿಟೆಕ್ ಪದವಿ ಪಡೆದ ಇವರು ಗಣಿತವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದರು.

 ಈಗ ಡೇಟಾ ಸೈಂಟಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಥಾರಿಯಾ, ಐಐಟಿ ಬಾಂಬೆಯಲ್ಲಿ ಅಧ್ಯಯನ ನಡೆಸುತ್ತಿದ್ದಾಗ ಸಂಸ್ಥೆಯ ನೇಮಕ ವಿಭಾಗ(ಪ್ಲೇಸ್‌ಮೆಂಟ್ ಸೆಲ್)ದ ಸದಸ್ಯರಾಗಿಯೂ , ಬೋಧನಾ ಸಹಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News