ಸಿಮೆಂಟ್ ಮಾರುತ್ತಿದ್ದ ವ್ಯಕ್ತಿಗೆ ರಾಜಕೀಯ ಸ್ಥಾನಮಾನ ಕೊಟ್ಟಿದ್ದು ಬಿಜೆಪಿ: ವಿಜಯಶಂಕರ್ ವಿರುದ್ಧ ಪ್ರತಾಪ್ ಸಿಂಹ ಟೀಕೆ

Update: 2019-04-05 18:06 GMT

ಮೈಸೂರು,ಎ.5: ದಶಕಗಳ ಹಿಂದೆ ಎಲ್ಲೋ ಹುಣಸೂರಿನಲ್ಲಿ ಸಿಮೆಂಟ್ ಅಂಗಡಿ ಇಟ್ಟುಕೊಂಡು ಸಿಮೆಂಟ್ ಮಾರುತ್ತಿದ್ದ ವ್ಯಕ್ತಿಗೆ ಇಂದು ಸಮಾಜದಲ್ಲಿ, ರಾಜಕೀಯ ಕ್ಷೇತ್ರದಲ್ಲಿ ಸ್ಥಾನಮಾನ ಸಿಕ್ಕಿದೆ ಅಂದ್ರೆ ಅದಕ್ಕೆ ಬಿಜೆಪಿ ಕಾರಣ ಎಂದು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಕುರಿತು ಟೀಕಿಸಿದರು.

ಖಾಸಗಿ ಹೋಟೆಲ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಇರುವಷ್ಟು ಕಾಲ ಬಿಜೆಪಿಯಲ್ಲಿ ಸ್ಥಾನಮಾನ ಪಡೆದು ಎಲ್ಲಾ ಸವಲತ್ತು, ಅಧಿಕಾರ ಅನುಭವಿಸಿ ಇದೀಗ ಪಕ್ಷ ಹಾಗೂ ಪಕ್ಷದ ಮುಖಂಡರ ವಿರುದ್ಧವೇ ಹೇಳಿಕೆ ನೀಡುತ್ತಿದ್ದಾರೆ. ಆದರೆ ಅವರು ಒಮ್ಮೆ ಹಳೆಯದ್ದನ್ನು ನೆನಪಿಸಿಕೊಳ್ಳಲಿ, ಹುಣಸೂರಿನಲ್ಲಿ ಸಿಮೆಂಟ್ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯನ್ನು ಪಕ್ಷ ಗುರುತಿಸಿ ಸ್ಥಾನಮಾನ ನೀಡಿ ಬೆಳೆಸಿತು. ಅವರು ಕ್ಷೇತ್ರಕ್ಕೆ ಏನಾದರು ಕೊಡುಗೆ ನೀಡಿದ್ದಾರೆ ಎನ್ನುವುದಾದರೆ ಅದು ಪಕ್ಷದ ಕೊಡುಗೆಯೇ ಹೊರತು ವೈಯಕ್ತಿಕವಾಗಿ ಅವರ ಸಾಧನೆಯಲ್ಲ. ಇದನ್ನು ಅರ್ಥ ಮಾಡಿಕೊಂಡು ಮಾತನಾಡಲಿ. ಅವರಿಗೆ ನನ್ನೊಟ್ಟಿಗೆ ಚರ್ಚಿಸುವ ಧೈರ್ಯವಿದ್ದಲ್ಲಿ ಬಹಿರಂಗ ಚರ್ಚೆಗೆ ಬರಲಿ, ನಾನು ಸಿದ್ಧ ಎಂದು ಸವಾಲು ಹಾಕಿದರು.

ನಾನು ಹೇಳಿದ್ದು ತಪ್ಪು ಎಂದು ಹೇಳಲು ರಘು ಆಚಾರ್ ಪ್ರಯತ್ನಸಿದ್ದರು. ಮಾಜಿ ಮುಖ್ಯಮಂತ್ರಿ ದಿವಂಗರ ಡಿ.ದೇವರಾಜ ಅರಸು ಅವರ ಬಗ್ಗೆ ನಾನೆಲ್ಲೂ ಮಾತನಾಡಿಲ್ಲ. ಯಾರದೋ ಮಾತನ್ನು ಕೇಳಿಕೊಂಡು ವಿಧಾನಪರಿಷತ್ ಸದಸ್ಯ ರಘು ಆಚಾರ್ ನನ್ನ ಬಗ್ಗೆ ಆರೋಪ ಮಾಡಿದ್ದರು. ವಿಷಯ ತಿಳಿದ ಅವರು ಅಂದು ಸಂಜೆಯೆ ನನ್ನನ್ನು ಸಂಪರ್ಕಿಸಲು ಯತ್ನಿಸಿದ್ದರು ಎಂದು ಪ್ರತಾಪ್ ಸಿಂಹ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News