×
Ad

ಧರ್ಮಗಳ ನಡುವೆ ಕಿಚ್ಚು ಹಚ್ಚಬೇಡಿ: ಮೋದಿಗೆ ಝಮೀರ್ ಅಹ್ಮದ್ ಸಲಹೆ

Update: 2019-04-06 23:58 IST

ಆನೇಕಲ್,ಎ.6: ಬಿಜೆಪಿ 2014ರ ಪ್ರಣಾಳಿಕೆಯಂತೆ ನಡೆದುಕೊಂಡಿಲ್ಲ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲಿಲ್ಲ. ಆ ಬಗ್ಗೆ ಗೆದ್ದ ಮೇಲೆ ಮಾತನಾಡದೇ ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಮಮಂದಿರ ವಿಚಾರ ಪ್ರಸ್ತಾಪ ಮಾಡುತ್ತದೆ. ನರೇಂದ್ರ ಮೋದಿಯವರೆ, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ನರ ನಡುವೆ ಕಿಚ್ಚು ಹಚ್ಚಬೇಡಿ ಎಂದು ಆಹಾರ ಸಚಿವ ಝಮೀರ್ ಅಹ್ಮದ್ ಹೇಳಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬೊಮ್ಮನಹಳ್ಳಿಯ ಮಂಗಮ್ಮನ ಪಾಳ್ಯದ ವೇದಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್ ಪರ ಮಾತನಾಡುತ್ತಿದ್ದ ಅವರು, ಪ್ರಪಂಚದ ಹಲವು ದೇಶಗಳನ್ನು ಸುತ್ತಿ ಬಂದಿದ್ದೇನೆ. ಭಾರತದಲ್ಲಿ ಇರುವ ಪರ ಧರ್ಮ ಸಹಿಷ್ಣುತೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಅದು ಇಲ್ಲಿಯವರೆಗೆ ನಡೆದುಕೊಂಡು ಬಂದಿರುವುದಕ್ಕೆ ಅಂಬೇಡ್ಕರ್ ರಚಿಸಿದ ಸಂವಿಧಾನ ಕಾರಣ. ಅದಕ್ಕೂ ಬೆಂಕಿಯಿಡುವ ಬಿಜೆಪಿಯ ಆಟ ಇಲ್ಲಿ ನಡೆಯಲ್ಲ ಎಂದರು.

ದೇಶಭಕ್ತಿಗೆ ಧರ್ಮ ಬೇಕಿಲ್ಲ, ಮುಸ್ಲಿಂ-ಕ್ರಿಶ್ಚಿಯನ್-ಹಿಂದೂಗಳ ಸಮೀಕರಣವೇ ನಿಜವಾದ ದೇಶಭಕ್ತಿ. ನಾವು ನಿಜವಾದ ಭಾರತದ ದೇಶ ಭಕ್ತರು. ಬಿಜೆಪಿ ರಾಜಕೀಯಕ್ಕಾಗಿ ದ್ವೇಷ ಭಕ್ತಿಯೆಡೆಗೆ ವಾಲಿದೆ ಎಂದು ಆರೋಪಿಸಿದರು.

ಕುರ್ಆನ್ ನಲ್ಲಿ ಯಾವುದೇ ಧರ್ಮದ ವಿರುದ್ಧ ಪ್ರಸ್ತಾಪಗಳಿಲ್ಲ. ಅಯೋಧ್ಯೆಯಲ್ಲಿ ಮಂದಿರವೂ ಇರಲಿ, ಮಸೀದಿಯೂ ಇರಲಿ. ಎರಡನ್ನೂ ಪ್ರತ್ಯೇಕವಾಗಿಯೇ ಕಟ್ಟೋಣ. ಅದರಲ್ಲಿ ರಾಜಕೀಯ ಬೆರೆಸಬೇಡಿ ಎಂದು ಹೇಳಿದರು.

ವೇದಿಕೆಯಲ್ಲಿ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಜಯನಗರ ಶಾಸಕಿ ಸೌಮ್ಯರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಕೃಷ್ಣಪ್ಪ, ಸುಷ್ಮಾ ರಾಜಗೋಪಾಲರೆಡ್ಡಿ, ಹೆಚ್.ಎಸ್.ಆರ್ ವಾಸುದೇವರೆಡ್ಡಿ, ಪಟೇಲ್ ರಾಜು, ಕವಿತಾರೆಡ್ಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News