ಮಲೆನಾಡಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ: ಧರೆಗುರುಳಿದ ಮರಗಳು
ಚಿಕ್ಕಮಗಳೂರು, ಎ.7: ಕಾಫಿನಾಡಿನಲ್ಲಿ ಅಕಾಲಿಕ ಮಳೆ ಮುಂದುವರಿದಿದ್ದು, ರವಿವಾರ ಮಲೆನಾಡಿನಾದ್ಯಂತ ಹಲವೆಡೆ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದೆ.
ಜಿಲ್ಲೆಯ ಮಲೆನಾಡು ಭಾಗದ ಅಲ್ಲಲ್ಲಿ ಕಳೆದೊಂದು ವಾರದಿಂದ ಸಂಜೆ ವೇಳೆ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದ್ದು, ಅಕಾಲಿಕ ಮಳೆಯಿಂದಾಗಿ ಜಿಲ್ಲೆಯ ಕಾಫಿ, ಅಡಿಕೆ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ. ರವಿವಾರ ಸಂಜೆ ವೇಳೆಯಲ್ಲೂ ಚಿಕ್ಕಮಗಳೂರು ತಾಲೂಕು ಸೇರಿದಂತೆ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯ ಹಲವೆಡೆ ಧಾರಾಕಾರ ಮಳೆಯಾದ ಬಗ್ಗೆ ವರದಿಯಾಗಿದೆ.
ಚಿಕ್ಕಮಗಳೂರು ತಾಲೂಕಿನಾದ್ಯಂತ ರವಿವಾರ ಮಧ್ಯಾಹ್ನದ ವೇಳೆಗೆ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಚಿಕ್ಕಮಗಳೂರು ನಗರದಲ್ಲಿ ಮಧ್ಯಾಹ್ನ 4ರ ವೇಳೆಯಲ್ಲಿ ಸಾಧಾರಣ ಮಳೆ ಸುರಿಯಿತು. ತಾಲೂಕಿನ ವಸ್ತಾರೆ, ಆಲ್ದೂರು, ತೋರಣಮಾವು ಮತ್ತಿತರ ಮಲೆನಾಡು ಭಾಗದಲ್ಲಿ ಮಾತ್ರ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದ್ದು, ಕೆಲವೆಡೆ ಮರಗಳು ರಸ್ತೆಗುರುಳಿದ ಬಗ್ಗೆ ವರದಿಯಾಗಿದೆ.
ಇನ್ನೂ ಮೂಡಿಗೆರೆ ತಾಲೂಕಿನ ಕಳಸ, ಸಂಸೆ, ಕುದುರೆಮುಖ ಬಾಳೆಹೊಳೆ, ಹಳುವಳ್ಳಿ ಕೊಟ್ಟಿಗೆಹಾರ, ಬಾಳೂರು ಮತ್ತಿತರ ಕಡೆಗಳಲ್ಲಿ ಅಲ್ಪ ಮಳೆ ಸುರಿದಿದ್ದರೆ, ಕೊಪ್ಪ, ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು, ಮಾಗುಂಡಿ, ಜಯಪುರ, ಹೇರೂರು ಹಾಗೂ ಶೃಂಗೇರಿ ತಾಲೂಕಿನ ಕಿಗ್ಗಾ, ನೆಮ್ಮಾರು, ಕೆರೆಕಟ್ಟೆ ಮತ್ತಿತರ ಕಡೆಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಗುಡುಗು, ಸಿಡಿಲಿನ ಮಳೆಯಿಂದಾಗಿ ಆಸ್ತಿಪಾಸ್ತಿಗೆ ನಷ್ಟವಾದ ಘಟನೆಗಳ ಬಗ್ಗೆ ವರದಿಯಾಗಿಲ್ಲ.
ಜಿಲ್ಲೆಯ ಕಡೂರು ತಾಲೂಕಿನಲ್ಲಿ ಮಳೆಯಾದ ಬಗ್ಗೆ ವರದಿಯಾಗಿಲ್ಲವಾದರೂ ತರೀಕೆರೆ ತಾಲೂಕಿನ ಕೆಲವೆಡೆ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ. ಕಳೆದೊಂದು ವಾರದಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ರೈತರು ಹಾಗೂ ಕಾಫಿ, ಅಡಿಕೆ ಬೆಳೆಗಾರರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಬಿಸಿಲ ಧಗೆಗೆ ಒಣಗಿದಂತೆ ಕಂಡು ಬರುತ್ತಿದ್ದ ಕಾಫಿ ತೋಟಗಳು ಇದೀಗ ಕಾಫಿ ಹೂವಿನ ಕಂಪು ಸೂಸುತ್ತಿದ್ದು, ಹಸಿರಿನಿಂದ ಕಂಗೊಳಿಸುತ್ತಿರುವ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿವೆ.