ಸಚಿವ ಪುಟ್ಟರಾಜು ಬಳಿ ಹಣಕ್ಕೆ ಬೇಡಿಕೆ ಇಟ್ಟ ಜಿ.ಮಾದೇಗೌಡ: ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್

Update: 2019-04-07 14:09 GMT
ಜಿ.ಮಾದೇಗೌಡ- ಸಚಿವ ಪುಟ್ಟರಾಜು

ಮಂಡ್ಯ, ಎ.7: ಗಾಂಧಿವಾದಿ, ಕಾವೇರಿ ಹೋರಾಟಗಾರ ಹಾಗೂ ಮಾಜಿ ಸಂಸದ ಜಿ.ಮಾದೇಗೌಡ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರಲ್ಲಿ ಚುನಾವಣಾ ವೆಚ್ಚಕ್ಕೆ ಹಣದ ಬೇಡಿಕೆ ಇಟ್ಟಿದ್ದಾರೆನ್ನಲಾದ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಜಕೀಯ ಸಂಚಲನ ಉಂಟುಮಾಡಿದೆ.

ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಹಾಗೂ ಸಚಿವ ಡಿ.ಸಿ.ತಮ್ಮಣ್ಣ ಅವರ ಹೆಸರಿನ ಎರಡು ಗುಂಪುಗಳಿವೆ. ನಾವು ದಳದ ಪರ ಕೆಲಸ ಮಾಡುತ್ತಿದ್ದೇವೆ. ಆದರೆ, ಜನ ಹಣ ಕೇಳುತ್ತಾರೆ. ದಯವಿಟ್ಟು ಹಣದ ವ್ಯವಸ್ಥೆ ಮಾಡಿ ಎಂದು ಜಿ.ಮಾದೇಗೌಡ ಬೇಡಿಕೆ ಇಡುವ ಸಂಭಾಷಣೆ ಜಿಲ್ಲೆಯ ಜನರ ಅಪಹಾಸ್ಯ ಮತ್ತು ಟೀಕೆಗೆ ಗುರಿಯಾಗಿದೆ.

ಕಾರ್ಯ ಒತ್ತಡ ಇದೆ. ಹಣದ ವ್ಯವಸ್ಥೆ ಮಾಡುತ್ತೇನೆ ಎಂದು ಸಚಿವ ಪುಟ್ಟರಾಜು ಪದೇ ಪದೇ ಹೇಳಿದರೂ, ಜನರಿಗೆ ಹಂಚಲು ಹಣ ಬೇಕೆಂದು ಮಾದೇಗೌಡರು ಪಟ್ಟುಹಿಡಿದಿದ್ದಲ್ಲದೆ, ಹಂಚುವ ಜವಾಬ್ಧಾರಿ ಹೊತ್ತಿರುವವರು ಯಾರು ಹೇಳಿ. ಅವರನ್ನೇ ಸಂಪರ್ಕಿಸುವುದಾಗಿಯೂ ಪಟ್ಟುಹಿಡಿದಿರುವುದು ಆಡಿಯೋ ಬಹಿರಂಗಪಡಿಸಿದೆ.

ವ್ಯಕ್ತಿಯೊಬ್ಬರ ಮೊಬೈಲ್‍ನಿಂದ ಪುಟ್ಟರಾಜು ಮೊಬೈಲ್‍ಗೆ ಕರೆ ಮಾಡಿ ಮಾತನಾಡಿರುವ ಮಾದೇಗೌಡರು, ನೀವು ಆದಷ್ಟು ಬೇಗ ತಲುಪಿಸಿದರೆ ಅನುಕೂಲವಾಗುತ್ತದೆ. ನನಗೆ ವಯಸ್ಸಾಗಿದ್ದು ಓಡಾಡಲು ಆಗುವುದಿಲ್ಲ. ಜನರಿಗೆ ಹಣ ಹಂಚುವ ಕೆಲಸವನ್ನು ನನ್ನ ಮಗ(ಮಾಜಿ ಶಾಸಕ ಮಧು ಮಾದೇಗೌಡ) ನಿರ್ವಹಿಸುತ್ತಾನೆ ಎಂದಿದ್ದಾರೆ.

ದೇಶದ ಹೈ ವೋಲ್ಟೆಜ್ ಕ್ಷೇತ್ರವೆನಿಸಿಕೊಂಡಿರುವ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಹಾಗೂ ಕೇಂದ್ರದ ಮಾಜಿ ಸಚಿವ ಅಂಬರೀಷ್ ಪತ್ನಿ ಸುಮಲತಾ ಕಣದಲ್ಲಿರುವ ಕಾರಣದಿಂದ ಹಣದ ಹೊಳೆ ಹರಿಯಲಿದೆ ಎಂಬ ಆರೋಪಕ್ಕೆ ಈ ಆಡಿಯೋ ಪುಷ್ಠಿ ನೀಡಿದೆ.

ಹಣದ ಬೇಡಿಕೆ ಸಮರ್ಥಿಸಿಕೊಂಡ ಜಿ.ಮಾದೇಗೌಡ
ಆಡಿಯೋದಲ್ಲಿರುವ ಧ್ವನಿ ನನ್ನದೆ, ಹಣ ಕೊಡದೆ ಯಾರು ಚುನಾವಣೆ ಮಾಡ್ತಾರೆ ಹೇಳಿ. ಪ್ರಚಾರಕ್ಕೆ ಬಂದವರಿಗೆ ಹಣ ಕೊಡಿ ಅಂತ ಕೇಳಿದ್ದೀನಿ. ಪ್ರಚಾರಕ್ಕೆ ಬಂದವರಿಗೆ ತಿಂಡಿ, ಊಟ ಕೊಡಿಸಬೇಕು. ಅದಕ್ಕೆ ನಮ್ಮ ಸಚಿವ ಪುಟ್ಟರಾಜುಗೆ ಹಣ ಕೊಡಿ ಎಂದು ಕೇಳಿದೆ. ಅದರಲ್ಲಿ ತಪ್ಪೇನಿದೆ ಎಂದು ಜಿ.ಮಾದೇಗೌಡ ಪ್ರಶ್ನಿಸಿದ್ದಾರೆ.

ಆಡಿಯೋ ಕುರಿತು ನಗರದ ಗಾಂಧಿಭವನದಲ್ಲಿ ರವಿವಾರ ಪ್ರತಿಕ್ರಿಯೆ ನೀಡಿದ ಮಾದೇಗೌಡ, ದುಡ್ಡು ಖರ್ಚು ಮಾಡದೇ ಯಾರಾದರೂ ಎಲೆಕ್ಷನ್ ಮಾಡುತ್ತಾರಾ ? ಮೋದಿಯಿಂದ ಹಿಡಿದು ದುಡ್ಡು ಖರ್ಚು ಮಾಡದೇ ಇರುವವರು ಯಾರಾದರೂ ಇದ್ದಾರಾ ಎಂದು ಸಮರ್ಥಿಸಿಕೊಂಡಿದ್ದಾರೆ.

ಮೊನ್ನೆ ಹುಡುಗರು ಬಂದು ಪ್ರಚಾರಕ್ಕೆ ಬಂದವರಿಗೆ ತಿಂಡಿಗಾಗಿ ಹಣ ಬೇಕು ಎಂದು ಕೇಳಿದ್ದಾರೆ. ಇದು ಸಾಮಾನ್ಯ. ಅದಕ್ಕೆ ನಾನು ಎಲ್ಲಿಂದ ತಂದು ಕೊಡಲಿ, ನನ್ನ ಹತ್ತಿರ ದುಡ್ಡಿಲ್ಲ. ಹಾಗಾಗಿ ಸಚಿವರನ್ನು ನನ್ನ ಹತ್ತಿರ ಬಂದಿದ್ದ ಹುಡುಗರಿಗಾಗಿ ಹಣ ಕೇಳಿದೆ. ನಾನು ಲಂಚ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News