ಕಾರ್ಯಕರ್ತರ ನಿರ್ಧಾರದಂತೆ ಮುಂದಿನ ನಡೆ: ಚಲುವರಾಯಸ್ವಾಮಿ

Update: 2019-04-07 14:20 GMT

ಬೆಂಗಳೂರು, ಎ.7: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ನಿರ್ಧಾರದಂತೆ ನಮ್ಮ ಮುಂದಿನ ನಡೆ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಹೈ-ಕಮಾಂಡ್ ಯಾವುದೇ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆಂದು ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ. 

ರವಿವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಮಂಡ್ಯ ಕಾಂಗ್ರೆಸ್ ನಾಯಕರೊಂದಿಗೆ ನಡೆದ ಸಭೆಯಲ್ಲಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ ಸ್ವಾಮಿ ಗೆಲ್ಲಿಸುವ ನಿಟ್ಟಿನಲ್ಲಿ ಎದುರಾಗಿರುವ ಅಡೆತಡೆಗಳ ಕುರಿತು ಚರ್ಚಿಸಲಾಯಿತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ, ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಲು ಸಿದ್ದರಾಮಯ್ಯ ಮಂಡ್ಯ ನಾಯಕರ ಮೇಲೆ ಅವಲಂಭಿತರಾಗಿದ್ದಾರೆ. ಆದರೆ, ನಾವು ನಮ್ಮ ಕಾರ್ಯಕರ್ತರ ನಿರ್ಧಾರದ ಮೇಲೆ ಅವಲಂಭಿತರಾಗಿದ್ದೇವೆಂದು ತಿಳಿಸಿದರು.

ಮಂಡ್ಯ ಅಭ್ಯರ್ಥಿ ನಿಖಿಲ್‌ಕುಮಾರಸ್ವಾಮಿ ಪರವಾಗಿ ಪ್ರಚಾರ ಮಾಡಲು ಎ.13ರಂದು ರಾಹುಲ್‌ಗಾಂಧಿ ಕೆ.ಆರ್.ನಗರಕ್ಕೆ ಆಗಮಿಸಲಿದ್ದಾರೆ. ಅಲ್ಲಿಯವರೆಗೂ ನಮಗೆ ಸಮಯವಿದೆ. ಅಷ್ಟರಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರ ಒಮ್ಮತದ ಅಭಿಪ್ರಾಯವನ್ನು ಪ್ರಕಟಿಸಲಾಗುವುದು. ಆ ಬಳಿಕ ಕಾಂಗ್ರೆಸ್ ನಾಯಕರು ನಮ್ಮ ತಲೆ ಮೇಲೆ ಏಟು ಒಡೆದು ಬುದ್ದಿ ಹೇಳಿದರೆ, ಅದನ್ನು ಅಶೀರ್ವಾದವೆಂದು ತಿಳಿಯುತ್ತೇವೆಂದು ಅವರು ಹೇಳಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಕ್ಷೇತ್ರವನ್ನು ಅದರ ಪಾಡಿಗೆ ಬಿಟ್ಟರೆ ಒಳಿತಾಗುತ್ತದೆ. ವಿನಾಕಾರಣ ಮಧ್ಯೆ ಪ್ರವೇಶಿಸಿ ಗೊಂದಲ ಸೃಷ್ಟಿಸುವುದು ಬೇಡ. ಇಲ್ಲಿನ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರ ಅಭಿಪ್ರಾಯವೆ ಅಂತಿಮವಾಗಿರುತ್ತದೆ ಎಂದು ಅವರು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್, ಸಚಿವ ಝಮೀರ್ ಅಹ್ಮದ್ ಖಾನ್, ವಿಧಾನಪರಿಷತ್ ಸದಸ್ಯ ರಾಮಕೃಷ್ಣ, ಮಾಜಿ ಶಾಸಕ ರಮೇಶ್‌ ಬಂಡೀ ಸಿದ್ಧೇಗೌಡ, ಶಾಸಕ ಭೀಮಾ ನಾಯ್ಕಾ ಮತ್ತಿತರ ನಾಯಕರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News