ಲೋಕಸಭೆ ಚುನಾವಣೆ: ಕಾರ್ಮಿಕರಿಗೆ ಎ.18, 23 ರಂದು ವೇತನ ಸಹಿತ ರಜೆ

Update: 2019-04-07 16:03 GMT

ಬೆಂಗಳೂರು, ಎ.7: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎ.18 ಮತ್ತು 23 ರಂದು ಮತದಾನ ನಡೆಯಲಿದ್ದು, ಅಂದು ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು ಎಂದು ಕಾರ್ಮಿಕ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಮತದಾನ ನಡೆಯುವ ದಿನಗಳಂದು ಕಾರ್ಮಿಕರು ಮತದಾನ ಮಾಡಲು ಅನುಕೂಲವಾಗುವಂತೆ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಸೇರಿದಂತೆ ಎಲ್ಲಾ ಸಂಸ್ಥೆಗಳು ರಜೆ ನೀಡಬೇಕೆಂದು ಕಾರ್ಮಿಕ ಇಲಾಖೆ ಆಯುಕ್ತರು ಹೇಳಿದ್ದಾರೆ.

ಕಾರ್ಮಿಕರಿಗೆ ಮತ ಚಲಾಯಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಮತದಾನ ನಡೆಯುವ ದಿನದಂದು ಆಯಾ ಕ್ಷೇತ್ರಗಳಲ್ಲಿ ವೇತನ ಸಹಿತ ರಜೆ ನೀಡಬೇಕು, ಶಾಸನಾತ್ಮಕ ಹಕ್ಕಾದ ಮತವನ್ನು ಚಲಾಯಿಸಲು ಕಾರ್ಮಿಕರಿಗೆ ರಜೆ ನೀಡದೆ ಹಾಗೂ ಮತದಾನಕ್ಕೆ ಅವಕಾಶ ಮಾಡಿಕೊಡದ ಅಂಗಡಿ, ವಾಣಿಜ್ಯ ಸಂಸ್ಥೆಗಳು ಹಾಗೂ ಕಾರ್ಖಾನೆಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವ ಎಚ್ಚರಿಕೆಯನ್ನು ಸುತ್ತೋಲೆಯಲ್ಲಿ ನೀಡಲಾಗಿದೆ.

ಅಲ್ಲದೆ, ಲೋಕಸಭೆ ಚುನಾವಣೆಗೆ ಮತದಾನ ನಡೆಯುವ ಬಗ್ಗೆ ಆಯಾ ಕ್ಷೇತ್ರದ ಕಾರ್ಮಿಕರಿಗೆ, ಕಾರ್ಮಿಕ ಸಂಘಟನೆಗಳು, ಮಾಲಕರ ಸಂಘಗಳ ಪ್ರತಿನಿಧಿಗಳ ಗಮನಕ್ಕೆ ತರಲು ಸೂಕ್ತ ಕ್ರಮಕೈಗೊಳ್ಳುವಂತೆ ಹಾಗೂ ಸರಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News