ಮಂಡ್ಯ ಕಾಂಗ್ರೆಸ್ ಮುಖಂಡರ ಜೊತೆ ಸಿದ್ದರಾಮಯ್ಯ ಸಭೆ

Update: 2019-04-07 16:56 GMT

ಬೆಂಗಳೂರು, ಎ.7: ರಾಜ್ಯದಲ್ಲಿ ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ, ನಿಖಿಲ್ ಕುಮಾರಸ್ವಾಮಿ ಪರವಾಗಿ ಚುನಾವಣಾ ಪ್ರಚಾರ ಕೈಗೊಳ್ಳುವಂತೆ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ ನಡೆಸಿದ ಸಭೆ ವಿಫಲವಾಗಿದೆ.

ರವಿವಾರ ನಗರದಲ್ಲಿರುವ ಸಿದ್ದರಾಮಯ್ಯ ನಿವಾಸ ‘ಕಾವೇರಿ’ಯಲ್ಲಿ ನಡೆದ ಮುಖಂಡರ ಸಭೆಯಲ್ಲಿ ಮಾಜಿ ಶಾಸಕರಾದ ಎನ್.ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಜಿ.ರಾಮಕೃಷ್ಣ, ಸಚಿವ ಝಮೀರ್‌ ಅಹ್ಮದ್‌ ಖಾನ್, ಶಾಸಕ ಭೀಮಾ ನಾಯ್ಕಾ ಸೇರಿದಂತೆ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.

ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿವೆ. ಆದುದರಿಂದ, ಮೈತ್ರಿ ಧರ್ಮ ಪಾಲಿಸಲು ಮಂಡ್ಯದಲ್ಲಿ ನಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ನಿಖಿಲ್ ಕುಮಾರಸ್ವಾಮಿ ಪರವಾಗಿ ನೀವು ಸಕ್ರಿಯವಾಗಿ ಪ್ರಚಾರ ಮಾಡಬೇಕು ಎಂದು ಮುಖಂಡರಿಗೆ ಸಿದ್ದರಾಮಯ್ಯ ಸೂಚಿಸಿದರು.

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸ್ಥಳೀಯ ಕಾಂಗ್ರೆಸ್ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಸಹಕಾರ ನೀಡುತ್ತಿಲ್ಲ ಎಂದು ಸ್ವತಃ ಜೆಡಿಎಸ್ ವರಿಷ್ಠ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅವರ ಪಕ್ಷದ ಸಚಿವರು ಬಹಿರಂಗವಾಗಿಯೇ ಟೀಕಿಸುತ್ತಿದ್ದಾರೆ. ಇದು ನಮ್ಮ ಪಕ್ಷಕ್ಕೆ ಮುಜುಗರ ತರುವ ಸಂಗತಿ ಎಂದು ಸಿದ್ದರಾಮಯ್ಯ ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಚಲುವರಾಯಸ್ವಾಮಿ ಸೇರಿದಂತೆ ಇನ್ನಿತರರು, ಮುಖ್ಯಮಂತ್ರಿ ಮಾಧ್ಯಮಗಳ ಎದುರು ಹೇಳಿಕೆ ನೀಡುವಾಗ ಪದೇ ಪದೇ ನಮ್ಮನ್ನು ಪರೋಕ್ಷವಾಗಿ ಉದ್ದೇಶಿಸಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಮ್ಮನ್ನು ಬೆನ್ನಿಗೆ ಚೂರಿ ಹಾಕುವವರು ಎನ್ನುತ್ತಾರೆ. ಈ ರೀತಿ ಬಹಿರಂಗವಾಗಿ ಅವಮಾನಿಸಿದರೆ, ನಾವು ಸ್ವಾಭಿಮಾನ ಬಿಟ್ಟು ಅವರ ಮಗನ ಪರವಾಗಿ ಕೆಲಸ ಮಾಡಬೇಕೆ ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಹಾಗೂ ಹೈಕಮಾಂಡ್ ಮಾತಿಗೆ ಗೌರವ ಕೊಟ್ಟು ನಾವು ಚುನಾವಣಾ ಕೆಲಸ ಮಾಡುತ್ತೇವೆ. ನಾಳೆ ಅವರ ಮಗ ಕ್ಷೇತ್ರದಲ್ಲಿ ಗೆದ್ದ ನಂತರ, ಮುಖ್ಯಮಂತ್ರಿ ನಮ್ಮ ಜೊತೆ ಗೌರವಯುತವಾಗಿ ನಡೆದುಕೊಳ್ಳುತ್ತಾರೆ ಅಂದು ಕೊಂಡಿದ್ದೀರಾ ? ಕಾಂಗ್ರೆಸ್ ನವರಿಂದ ನಾವು ಗೆದ್ದಿಲ್ಲ, ಜನರ ಆಶೀರ್ವಾದದಿಂದ ಗೆದ್ದಿರುವುದು ಎಂದು ಹೇಳಿ, ಮತ್ತೆ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಾರೆ ಎಂದು ಮುಖಂಡರು ಸಮಸ್ಯೆ ಹೇಳಿಕೊಂಡರು.

ಕಾಂಗ್ರೆಸ್‌ನವರಿಗೆ ಸಿಗುವ ಟೆಂಡರ್‌ಗಳನ್ನು ರದ್ದು ಮಾಡಿ, ಜೆಡಿಎಸ್‌ನವರಿಗೆ ಸಿಗುವಂತೆ ಮಾಡಲಾಗುತ್ತಿದೆ. ನಮ್ಮ ಪಕ್ಷದ ಬೆಂಬಲದಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದನ್ನು ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರು ಮರೆತು ಬಿಟ್ಟಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಕಿರುಕುಳ ಹೆಚ್ಚಾಗಿದೆ. ಅನಗತ್ಯವಾಗಿ ಅವರ ಮೇಲೆ ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ ಎಂದು ಸಭೆಯಲ್ಲಿ ಮುಖಂಡರು ಅಸಮಾಧಾನ ಹೊರಹಾಕಿದರು.

ರಾಜ್ಯ ಮಟ್ಟದಲ್ಲಿ ನಾಯಕರು ಒಂದಾಗಿದ್ದಾರೆ. ಆದರೆ, ಸ್ಥಳೀಯವಾಗಿ ಎಲ್ಲ ಚುನಾವಣೆಗಳಲ್ಲೂ ಪರಸ್ಪರ ಎದುರಾಳಿಗಳಾಗಿ ಸ್ಪರ್ಧೆ ಮಾಡಿರುವ ಕಾರ್ಯಕರ್ತರ ಮನಸ್ಸುಗಳು ಒಂದಾಗಬೇಕಲ್ಲ. ಈಗ ಚುನಾವಣೆ ಬಂದಿದೆ, ಮುಖ್ಯಮಂತ್ರಿಯ ಮಗ ಅಭ್ಯರ್ಥಿಯಾಗಿರುವುದರಿಂದ ನಮ್ಮನ್ನು ಕರೆದು ಚರ್ಚೆ ಮಾಡುವಂತೆ ನಿಮಗೆ ಮನವಿ ಮಾಡಿದ್ದಾರೆ. ಇಲ್ಲದಿದ್ದರೆ, ಅದು ಆಗುತ್ತಿರಲಿಲ್ಲ ಎಂದು ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.

ಮುಖಂಡರ ಸಮಸ್ಯೆಗಳನ್ನು ಕೇಳಿದ ಸಿದ್ದರಾಮಯ್ಯ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಹೆಚ್ಚಿನ ಸೀಟುಗಳನ್ನು ಗೆಲ್ಲಬೇಕಿದೆ. ಹೈಕಮಾಂಡ್ ಸೂಚನೆಯನ್ನು ನಾವು ಪಾಲಿಸಲೇಬೇಕು. ರಾಜ್ಯದಲ್ಲಿ ನಮ್ಮ ಪರವಾದ ವಾತಾವರಣವಿದೆ. ಇರುವ ಅವಕಾಶವನ್ನು ಕೈ ಚೆಲ್ಲುವುದು ಬೇಡ ಎಂದು ಸಲಹೆ ನೀಡಿದರು.

ಅಲ್ಲದೇ, ಮಂಡ್ಯದಲ್ಲಿ ಸ್ಥಳೀಯವಾಗಿ ಆಗುತ್ತಿರುವ ಬೆಳವಣಿಗೆಗಳ ಕುರಿತು ಮುಖ್ಯಮಂತ್ರಿ ಜೊತೆ ನಾನೇ ಸ್ವತಃ ಮಾತನಾಡುತ್ತೇನೆ. ನೀವು ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದಿದ್ದರೆ ನನ್ನ ಮೇಲೆಯೂ ಆರೋಪ ಬರುತ್ತದೆ ಎಂಬುದನ್ನು ಮರೆಯಬೇಡಿ. ಎ.13ರಂದು ರಾಹುಲ್ ಗಾಂಧಿ ಮಂಡ್ಯ ಜಿಲ್ಲೆಗೆ ಬರುತ್ತಿದ್ದಾರೆ. ಈ ವೇಳೆ ನಮ್ಮ ಒಗ್ಗಟ್ಟು ಪ್ರದರ್ಶನವಾಗಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಆದರೆ, ಸಿದ್ದರಾಮಯ್ಯ ಮಾತುಗಳಿಗೆ ಸಭೆಯಲ್ಲಿ ಮುಖಂಡರು ಸರಿಯಾಗಿ ಸ್ಪಂದಿಸಲಿಲ್ಲ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ನಾಳೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಸಿದ್ದರಾಮಯ್ಯ ನಿರ್ಧರಿಸಿದ್ದು, ಮಂಡ್ಯ ಜಿಲ್ಲೆಯ ಎಲ್ಲ ಮುಖಂಡರಿಗೂ ಬೆಂಗಳೂರಿನಲ್ಲಿಯೇ ಇಂದು ರಾತ್ರಿ ಉಳಿದುಕೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News