ಪ್ರಮೋದ್ ಮಧ್ವರಾಜ್ ಸಾಂದರ್ಭಿಕ ಶಿಶು: ಶೋಭಾ ಕರಂದ್ಲಾಜೆ

Update: 2019-04-07 18:22 GMT

ಚಿಕ್ಕಮಗಳೂರು, ಎ.7: ಮೈತ್ರಿ ಅಭ್ಯರ್ಥಿಯಾಗಿರುವ ಪ್ರಮೋದ್ ಮಧ್ವರಾಜ್ ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರ ವ್ಯಾಪ್ತಿಯ ತಾಲೂಕುಗಳಿಗೇ ಭೇಟಿ ನೀಡಿಲ್ಲ. ಇನ್ನು ಸಂಸರಾದಲ್ಲಿ ಚಿಕ್ಕಮಗಳೂರಿಗೂ ಬರುತ್ತಾರೆಂಬುದು ಸುಳ್ಳು. ಸಾಂದರ್ಭಿಕ ಶಿಶುವಾಗಿರುವ ಅವರನ್ನು ತಿರಸ್ಕರಿಸಿ, ಬಲಿಷ್ಠರಾಷ್ಟ್ರ ನಿರ್ಮಾಣ ಮಾಡಲು ಮತ್ತು ದೇಶದ ರಕ್ಷಣೆ, ಸೈನಿಕರ ರಕ್ಷಣೆಗೆ, ನಮ್ಮ ದೇಶದ ಅಭಿವೃದ್ಧಿಗೆ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಬಿಜೆಪಿಯನ್ನು ಗೆಲ್ಲಿಸುವಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ತಿಳಿಸಿದರು.

ರವಿವಾರ ಮುಗುಳವಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಮತಯಾಚನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಭಾರತ ವಿಶ್ವಮಟ್ಟದಲ್ಲಿ ಬಲಶಾಲಿ ಆಗುವುದನ್ನು ಅನ್ಯದೇಶಗಳು ಇಷ್ಟಪಡುತ್ತಿಲ್ಲ. ಪ್ರಧಾವಿ ನರೇಂದ್ರ ಮೋದಿಯವರನ್ನು ಸೋಲಿಸಲು ಷಡ್ಯಂತ್ರದ ಮೂಲಕ ಆರೋಪ ಮತ್ತು ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹವರಿಗೆ ಈ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ರಾಷ್ಟ್ರದಲ್ಲಿ ಬಡವರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಎಲ್ಲಾ ವರ್ಗದವರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಯಾವುದೇ ಭ್ರಷ್ಟಾಚಾರ ಇಲ್ಲದೆ ಉತ್ತಮ ಆಡಳಿತ ನೀಡಿ ಎಲ್ಲಾ ವರ್ಗದವರ ಪ್ರೀತಿ, ವಿಶ್ವಾಸಗಳಿಸಿದ್ದಾರೆ. ಬಿಜೆಪಿ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುವುದರ ಜೊತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಭೇಟಿ ಮಾಡಿ ದೇಶದ ರಕ್ಷಣೆಗಾಗಿ ಈ ಭಾರಿ ಬಿಜೆಪಿಗೆ ಮತ ಹಾಕುವಂತೆ ಮನ ಪರಿವರ್ತನೆ ಮಾಡಬೇಕೆಂದು ತಿಳಿಸಿದರು.

ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ. ಮೈತ್ರಿ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ಸಾಂದರ್ಭಿಕ ಶಿಶು. ಮಧ್ವರಾಜ್ ರವರು ಉಡುಪಿ ಬಿಟ್ಟು ಎಲ್ಲಿಗೂ ಬಂದಿಲ್ಲ. ಕುಂದಾಪುರ, ಕಾರ್ಕಳಕ್ಕೂ ಹೋಗಿಲ್ಲ. ಸಚಿವರಿದ್ದಾಗ ಚಿಕ್ಕಮಗಳೂರಿಗೆ ಎಷ್ಟು ಬಾರಿ ಬಂದಿದ್ದಾರೆಂದು ಅವರನ್ನೇ ಕೇಳಬೇಕು, ನಾನು ಯಾವ ಪಕ್ಷದ ಅಭ್ಯರ್ಥಿ ಎಂಬ ಗೊಂದಲದಿಂದ ಎರಡು ಪಕ್ಷದ ಚಿಹ್ನೆಗಳನ್ನು ಇಟ್ಟುಕೊಂಡು ತಿರುಗುತ್ತಿದ್ದಾರೆ. ಇಂತಹ ಗೊಂದಲದ ಅಭ್ಯರ್ಥಿ ನಮಗೆ ಬೇಕೆ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು.

ಶಾಸಕ ಕುಮಾರಸ್ವಾಮಿ ಮಾತನಾಡಿ, ಗ್ರಾಮಗಳ ಅಭಿವೃದ್ಧಿಗೆ ಶಕ್ತಿಮೀರಿ ಕೆಲಸ ಮಾಡಲಾಗಿದೆ. ದೇಶದ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ಈ ಬಾರಿ ಬಿಜೆಪಿಗೆ ಹೆಚ್ಚು ಮತ ಹಾಕಬೇಕೆಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಮುಗುಳವಳ್ಳಿ ನಿರಂಜನ್ ಮಾತನಾಡಿ, ರೈತರ ಸಾಲ ಮನ್ನ ಮಾಡುತ್ತೇವೆಂದು ಜನರ ದಿಕ್ಕು ತಪ್ಪಿಸಿ ಭ್ರಷ್ಟಾಚಾರದ ರಾಜಕಾರಣವನ್ನು ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಮಾಡುತ್ತಿವೆ. ನಮ್ಮ ಸೊಸೈಟಿಯಲ್ಲಿ ಒಬ್ಬ ರೈತರ ಸಾಲ ಮನ್ನಾ ಆಗಿಲ್ಲ, ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಕಳ್ಳ ಎತ್ತುಗಳಾಗಿ ಬೇನಾಮಿ ಆಸ್ತಿಗಳನ್ನು ಮಾಡಿದ್ದಾರೆ. ಮಂಡ್ಯದಲ್ಲಿ ಒಬ್ಬ ಮಹಿಳೆಗೆ ಹೆದರಿ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಮತದಾರರು ಮೈತ್ರಿ ಪಕ್ಷದವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಡಿ.ತಮ್ಮಯ್ಯ, ಕಾಫಿ ಮಂಡಳಿಯ ಅಧ್ಯಕ್ಷ ಎಂ.ಎಸ್.ಬೋಜೇಗೌಡ, ಆಲ್ದೂರು ಮಂಡಲ ಅಧ್ಯಕ್ಷ ಸಂಪತ್, ತಾಪಂ ಅಧ್ಯಕ್ಷ ಜಯ್ಯಣ್ಣ, ಎಪಿಎಂಸಿ ಸದಸ್ಯ ಕವೀಶ್, ಮುಖಂಡರಾದ ಮೈಲಿಮನೆ ಪೂರ್ಣೇಶ್, ದಿನೇಶ್, ಹಂಪಾಪುರ ಪುಟ್ಟೇಗೌಡ, ಶಕ್ತಿ ಕೇಂದ್ರದ ರಾಜು ದಾಸೇಗೌಡ, ಎಂ.ಡಿ.ರವಿ, ಬಸವರಾಜ್, ಉಮೇಶ್, ಗಿರೀಶ್, ರಘು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News