ಬಿಜೆಪಿ ಬೆಂಬಲಿತ ಅಭ್ಯರ್ಥಿ ಸೋಲಿಸಿ, ಜಾತ್ಯತೀತ ಸರ್ಕಾರ ರಚನೆಗೆ ಸಹಕರಿಸಿ: ಸಿಪಿಐಎಂ

Update: 2019-04-08 11:29 GMT

ಮಂಡ್ಯ :17 ನೇ ಲೋಕಸಭೆಗೆ ನಡೆಯುತ್ತಿರುವ ಮಂಡ್ಯ ಮತ ಕ್ಷೇತ್ರದ ಚುನಾವಣೆಯಲ್ಲಿ ಹಿಂಬಾಗಿಲಿನಿಂದ ಪ್ರವೇಶ ಪಡೆಯಲು ಯತ್ನಿಸಿರುವ ಬಿಜೆಪಿ ಪ್ರಯತ್ನವನ್ನು ವಿಫಲಗೊಳಿಸಲು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯನ್ನು ಸೋಲಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಮಂಡ್ಯ ಜಿಲ್ಲಾ ಸಂಘಟನಾ ಸಮಿತಿ ಮನವಿ ಮಾಡಿದೆ. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂದ ಫಲಿತಾಂಶದ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. ಅಂದಿನಿಂದಲೂ ಆಪರೇಷನ್ ಕಮಲದ ಮೂಲಕ ಸರ್ಕಾರ ಅಸ್ಥಿರ ಗೊಳಿಸಲು ಪ್ರಯತ್ನಿಸಿ ವಿಫಲಗೊಂಡ ಬಿಜೆಪಿ, ಜೆಡಿಎಸ್ ಭದ್ರ ನೆಲೆಯಲ್ಲಿ ಮುಖಭಂಗ ಉಂಟು ಮಾಡಿ ಮೈತ್ರಿ ಸರ್ಕಾರ ಕೆಡವಲು ಯೋಜಿತ ತಂತ್ರ ರೂಪಿಸಿದೆ. ಈ ತಂತ್ರ ಫಲಿಸಲು ಸಂವಿಧಾನ ಪ್ರೇಮಿಗಳು ಅವಕಾಶ ನೀಡಬಾರದು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಮಂಡ್ಯ ಜಿಲ್ಲಾ ಸಂಘಟನಾ ಸಮಿತಿ ವಿನಂತಿಸಿದೆ.

ಒಂದು ಜಾತ್ಯತೀತ ಹಿನ್ನಲೆಯನ್ನು ಕೊನೆಯವರೆಗೂ ಹೊಂದಿದ್ದ ಖ್ಯಾತ ಚಲನಚಿತ್ರ ನಟ ಅಂಬರೀಷ್ ರವರ ಮಡದಿ ಕೋಮುವಾದಿ ಬಿಜೆಪಿ ಬೆಂಬಲವನ್ನು ಸ್ವಾಗತಿಸಿದ್ದು ಬೇಸರದ ವಿಷಯ. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಾದರೆ ಅದು ರಾಜ್ಯದಲ್ಲಿ ಜಾತ್ಯತೀತ ಮೈತ್ರಿ ಸರ್ಕಾರವನ್ನು ಬಲಪಡಿಸಲು ಪೂರಕವಾಗಲಿದೆ.ಇದು ಇಡೀ ದೇಶಕ್ಕೆ ಮಾದರಿಯಾಗಲಿದೆ ಹಾಗೂ ಕೇಂದ್ರದಲ್ಲೂ ಒಂದು ಜಾತ್ಯತೀತ ಸರ್ಕಾರ ಅಸ್ತಿತ್ವಕ್ಕೆ ಬರಲು ನೆರವಾಗಲಿದೆ ಎಂದು ಸಿಪಿಐಎಂ ಪಕ್ಷ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News