‘ಸಿಂಹದ ಬಗ್ಗೆ ಇರುವೆಯೊಂದು ಕೂಗಿದಂತೆ’: ದಿನೇಶ್ ಗುಂಡೂರಾವ್ ವಿರುದ್ಧ ಈಶ್ವರಪ್ಪ ಟೀಕೆ

Update: 2019-04-08 14:24 GMT

ಬಾಲಗಕೋಟೆ, ಎ. 8: ಆರೆಸೆಸ್ಸ್ ಲೋಕಸಭೆ ಟಿಕೆಟ್ ಮಾರಾಟ ಮಾಡಿದೆ ಎಂಬ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಚಾರಕ್ಕಾಗಿ ಹೇಳಿಕೆ ನೀಡಿದ್ದು, ಅವರ ಮಾತು ಸಿಂಹದ ಬಗ್ಗೆ ಇರುವೆಯೊಂದು ಕೂಗಿದಂತಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ದಿನೇಶ್ ಗುಂಡೂರಾವ್‌ಗೆ ಆರೆಸೆಸ್ಸ್ ಬಗ್ಗೆ ಏನೂ ಗೊತ್ತಿಲ್ಲ. ಅದೊಂದು ಯುವಕರಿಗೆ ರಾಷ್ಟ್ರಭಕ್ತಿ ಕಲಿಸುವ ಪವಿತ್ರ ಸಂಸ್ಥೆ. ಅದು ಹಿಂದುತ್ವದ ಬಗ್ಗೆ ಹೇಳುತ್ತದೆ. ನಮ್ಮ ಜೀವನಪದ್ಧತಿ ಎಂದು ವಿಶ್ಲೇಷಿಸಿದರು.

ಆರೆಸೆಸ್ಸ್ ಸಂಘಟನೆಯ ವಿರುದ್ಧ ಟೀಕೆ ಮಾಡಿದ್ದ ಇಂದಿರಾಗಾಂಧಿ, ನೆಹರೂ ಉದ್ಧಾರ ಆಗಲಿಲ್ಲ. ದಿನೇಶ್ ಗುಂಡೂರಾವ್ ಒಬ್ಬ ನಿಕೃಷ್ಟ ರಾಜಕಾರಣಿ. ಅಂತಹವರು ನೂರು ಮಂದಿ ಬಂದರೂ ಸಂಘಟನೆಯನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಈಶ್ವರಪ್ಪ ಹೇಳಿದರು.

ಮಂಡ್ಯದಲ್ಲಿ ನನ್ನ ಮಗನ ವಿರುದ್ಧ ಸಂಚು ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಅದೊಂದು ರಾಜಕಾರಣ. ಸಂಚು ಎಂದು ಕರೆಯಲು ಸಾಧ್ಯವಿಲ್ಲ. ರಾಜಕಾರಣದಲ್ಲಿ ಒಬ್ಬರಿಗೊಬ್ಬರನ್ನು ಸೋಲಿಸೋದು ಸಹಜ ಎಂದು ಈಶ್ವರಪ್ಪಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮಂಡ್ಯದಲ್ಲಿ ಮಗನ ಗೆಲುವು ಒಂದು ಬಿಟ್ಟರೆ ಬೇರೆಡೆ ಆಸಕ್ತಿ ಇಲ್ಲ. ಹಾಸನ, ತುಮಕೂರಿಗೂ ಅವರು ಪ್ರಚಾರಕ್ಕೆ ಹೋಗಿಲ್ಲ. ಮಂಡ್ಯದಲ್ಲಿ ಸುಮಲತಾ ಗೆಲ್ಲಿಸಬೇಕು ಎಂಬ ಕಾರಣಕ್ಕೆ ಬಿಜೆಪಿ ಬೆಂಬಲ ನೀಡಿದೆ ಎಂದು ಈಶ್ವರಪ್ಪ ಸ್ಪಷ್ಟಣೆ ನೀಡಿದರು.

ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಮೊದಲೇ ಮಾಹಿತಿ ಬಹಿರಂಗ ಪಡಿಸಿದ್ದ ಕಾರಣಕ್ಕೆ ಮುಖ್ಯಮಂತ್ರಿ ವಿರುದ್ಧ ಅಯೋಗ್ಯ ಪದ ಬಳಸಿದ್ದೆನು. ಸಿಎಂ ನೀಡಿದ ಸುಳಿವಿನಿಂದಾಗಿ ಅವರ ಶಿಷ್ಯರು ತಪ್ಪಿಸಿಕೊಳ್ಳುವುದರಲ್ಲಿ ಯಶಸ್ವಿಯಾದರು. ಅದರಿಂದ ಅಯೋಗ್ಯ ಎಂದಿದ್ದೆನು. ಆ ಪದ ಕುಮಾರಸ್ವಾಮಿಗೆ ಬೇಸರ ತಂದಿರಬಹುದು. ಹಾಗಾಗಿ ಇನ್ನು ಮುಂದೆ ಯೋಗ್ಯತೆ ಇಲ್ಲದ ಸಿಎಂ ಪದ ಬಳಸುವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News