ಬಿಜೆಪಿಯಿಂದ ಧರ್ಮ-ಜಾತಿ ಆಧಾರದ ಮೇಲೆ ದೇಶವನ್ನು ಒಡೆಯುವ ಕೆಲಸ: ದಿನೇಶ್ ಗುಂಡೂರಾವ್
ಬೆಂಗಳೂರು, ಎ. 8: ಐದು ವರ್ಷಗಳಲ್ಲಿ ತಾವು ಮಾಡಿರುವ ಸಾಧನೆಗಳ ಬಗ್ಗೆ ಮಾತನಾಡದೆ, ಧರ್ಮದ ಆಧಾರದ ಮೇಲೆ ಮತ ಕೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಬಿಜೆಪಿ ಪಕ್ಷದ ದೇಶವನ್ನು ಧರ್ಮ-ಜಾತಿಯ ಆಧಾರದ ಮೇಲೆ ಒಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಇಂದಿಲ್ಲಿ ಆರೋಪಿಸಿದ್ದಾರೆ.
ಸೋಮವಾರ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬನಶಂಕರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಎಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕೈಯಲ್ಲಿ ದೇಶ ಸುರಕ್ಷಿತವಾಗಿಯೇ ಇತ್ತು ಎಂದರು.
ನೆಹರೂ ಕಾಲದಿಂದಲೂ ಕಾಂಗ್ರೆಸ್ ಬೆಂಗಳೂರು ನಗರಕ್ಕೆ ಹಲವು ಕೊಡುಗೆಗಳನ್ನು ನೀಡಿದೆ. ಎಚ್‌ಎಎಲ್, ಬಿಎಚ್‌ಇಎಲ್ ನಂತಹ ಸಾರ್ವಜನಿಕ ಉದ್ದಿಮೆಗಳನ್ನು ಇಲ್ಲಿ ಪ್ರಾರಂಭಿಸಿದೆ. ನಗರದ ಅಭಿವೃದ್ದಿಯಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಹಿರಿದಾಗಿದೆ. ಈ ಬಾರಿ ಬೆಂಗಳೂರು ದಕ್ಷಿಣದಲ್ಲಿ ಹಿರಿಯ ಮುತ್ಸದ್ದಿ ಹರಿಪ್ರಸಾದ್ ಕಣದಲ್ಲಿದ್ದಾರೆ. ನಗರದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲವು ನಿಶ್ಚಿತ ಎಂದು ನುಡಿದರು.
ಕಾಂಗ್ರೆಸ್ ಪಕ್ಷ ಯಾವತ್ತೂ ಧರ್ಮ ಮತ್ತು ಜಾತಿಯ ಆಧಾರದ ಮೇಲೆ ತಾರತಮ್ಯ ಮಾಡಿಲ್ಲ. ಮೋದಿಯವರು 5 ವರ್ಷಗಳ ಸಾಧನೆಯನ್ನು ಹೇಳುವುದೇ ಇಲ್ಲ. ಕೇವಲ ಧರ್ಮದ ಆಧಾರದ ಮೇಲೆ ಮತದ ಕೇಳುತ್ತಿದ್ದಾರೆ. 70 ವರ್ಷಗಳಿಂದ ದೇಶ ಸುರಕ್ಷಿತವಾಗಿಲ್ಲವೆ ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ದೇಶವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ಎಲ್ಲ ಭಾಷಣಗಳಲ್ಲೂ ಪಾಕಿಸ್ತಾನದ ಬಗ್ಗೆಯೇ ಪ್ರಸ್ತಾಪಿಸುತ್ತಿದ್ದಾರೆ. ಭಾರತದಲ್ಲಿ ಚುನಾವಣೆ ನಡೆಯುತ್ತಿದ್ದೆಯೆ ಅಥವಾ ಪಾಕಿಸ್ತಾನದಲ್ಲಿ ಚುನಾವಣೆ ನಡೆಯುತ್ತಿದೆಯೋ ಗೊತ್ತಾಗುತ್ತಿಲ್ಲ ಎಂದು ಲೇವಡಿ ಮಾಡಿದ ಅವರು, ಒಡೆದು ಆಳುವ ಬಿಜೆಪಿಗೆ ಯಾವುದೇ ಕಾರಣಕ್ಕೂ ಮತ ನೀಡಬೇಡಿ ಎಂದು ಮನವಿ ಮಾಡಿದರು.
‘ದೇಶದ ಅಭಿವೃದ್ದಿ ಹಾಗೂ ರಾಜ್ಯದ ಅಭಿವೃದ್ದಿಗೆ ಕಾಂಗ್ರೆಸ್ ಬೆಂಬಲಿಸಬೇಕಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಾದ್ಯಂತ ಒಳ್ಳೆಯ ಜನ ಬೆಂಬಲ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಪಕ್ಷದ ಕೊಡುಗೆಗಳ ಆಧರಿಸಿ ಜನತೆ ಈ ಬಾರಿ ಮತ ನೀಡಲಿದ್ದಾರೆ.
-ಬಿ.ಕೆ.ಹರಿಪ್ರಸಾದ್, ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ