ಮೋದಿಗೆ ಸೆಡ್ಡು ಹೊಡೆದದ್ದು ನಮ್ಮ ಕುಟುಂಬ ಮಾತ್ರ: ಎಚ್.ಡಿ.ಕುಮಾರಸ್ವಾಮಿ

Update: 2019-04-08 14:18 GMT

ಬೆಂಗಳೂರು, ಎ.8: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಎಲ್ಲ ರೀತಿಯಲ್ಲೂ ಸೆಡ್ಡು ಹೊಡೆದದ್ದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕುಟುಂಬ ಮಾತ್ರ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಸೋಮವಾರ ನಗರದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣಭೈರೇಗೌಡ ಪರವಾಗಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ದೇವೇಗೌಡರಿಗೆ ವಯಸ್ಸಾಗಿದೆ. ಅವರನ್ನು ಕೈ ಹಿಡಿದುಕೊಂಡು ಕರೆದುಕೊಂಡು ಬರಬೇಕು ಎಂದು ಕೆಲವರು ವ್ಯಂಗ್ಯವಾಡುತ್ತಿದ್ದಾರೆ. ಆದರೆ, ದೇವೇಗೌಡರಲ್ಲಿರುವ ಸ್ಮರಣ ಶಕ್ತಿ 23 ವರ್ಷದ ಯುವಕರಲ್ಲಿಯೂ ಇರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಕರಾವಳಿ ಭಾಗದಲ್ಲಿ ನೂರಾರು ಮಂದಿ ಯುವಕರು ನಮ್ಮನ್ನು ನೋಡಿ ಅಣ್ಣಾ ಎಂದು ಮಾತನಾಡಿಸುತ್ತಾರೆ. ಆದರೆ, ಎಲ್ಲೋ ಒಂದು ಕಡೆ ನಾಲ್ಕೈದು ಜನ ನಿಂತುಕೊಂಡು ಮೋದಿ, ಮೋದಿ ಎಂದು ಕಿರುಚುತ್ತಾರೆ. ನರೇಂದ್ರ ಮೋದಿ ಇಲ್ಲಿಗೆ ಬಂದು ಏನು ಕಿಸಿದಿದ್ದಾರೆ ? ಈ ದೇಶಕ್ಕೆ ಅವರು ಏನು ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಈ ಯುವಕರ ತಲೆಯಲ್ಲಿ ಜ್ಞಾನವಿದೆಯೇ? ನರೇಂದ್ರ ಮೋದಿ ಏನಾದರೂ ಈ ಯುವಕರಿಗೆ ಉದ್ಯೋಗ ಕೊಟ್ಟಿದ್ದಾರೆಯೇ ? ಕಾರ್ಮಿಕರನ್ನು ಬೀದಿ ಪಾಲು ಮಾಡಿರುವ ಮೋದಿ ಬಗ್ಗೆ ಯಾಕೆ ಭಜನೆ ಮಾಡುತ್ತಿದ್ದೀರಾ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದರು.

ದೇಶದಲ್ಲಿ ಒಂದು ರೀತಿಯ ಭಯದ ವಾತಾವರಣ ಸೃಷ್ಟಿಯಾಗಿರುವುದು ಕಾಣುತ್ತಿದ್ದೀರಾ. ದೇಶದಲ್ಲಿ ಸಂವಿಧಾನ ಬದ್ಧವಾದ ಸಂಸ್ಥೆಗಳೆಲ್ಲ ಮೋದಿಯ ಸಹ ಪಾಲುದಾರರಾಗಿ ಕೆಲಸ ಮಾಡುತ್ತಿವೆ. ಮೋದಿ ವಿರೋಧಿಗಳನ್ನು ಆ ಸಂಸ್ಥೆಗಳ ಮೂಲಕ ಹತ್ತಿಕ್ಕುವ ಕೀಳುಮಟ್ಟದ ರಾಜಕಾರಣವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಲೋಕಸಭೆಯ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಕುಮಾರಸ್ವಾಮಿ ನೆಗೆದು ಬೀಳುತ್ತಾರೆ ಎಂದು ಬಿಜೆಪಿ ನಾಯಕ ಈಶ್ವರಪ್ಪ ಹೇಳಿದ್ದಾರೆ. ನಾನು ಅಷ್ಟು ಸುಲಭವಾಗಿ ನೆಗೆದು ಬೀಳುವುದಿಲ್ಲ. ರಾಜ್ಯದ ರೈತರ, ಬಡವರ ಅಭಿವೃದ್ಧಿ ಬಗ್ಗೆ ನನಗೆ ಸ್ಪಷ್ಟವಾದ ಕಲ್ಪನೆಯಿದೆ. ಆ ಕೆಲಸ ಮಾಡಿ ಮುಗಿಸುವ ತನಕ ನಾನು ಸಾಯುವುದಿಲ್ಲ ಎಂಬ ನಂಬಿಕೆಯಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News